Advertisement

ವಾಹನ ನೋಂದಣಿಗೆ ಹೊಸ ತಂತ್ರಾಂಶ

12:16 PM Dec 17, 2018 | Team Udayavani |

ಬೆಂಗಳೂರು: ವಾಹನ ನೋಂದಣಿ ಸೇವೆಗಳಿಗೆ ಸಂಬಂಧಿಸಿದಂತೆ ರಾಜಾಜಿನಗರ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಕಚೇರಿಯಲ್ಲಿ ಡಿ.29ರಿಂದ ಕೇಂದ್ರೀಕೃತ ಮತ್ತು ವೆಬ್‌ ಆಧಾರಿತ “ವಾಹನ್‌-4′ ತಂತ್ರಾಂಶ ಜಾರಿಯಾಗಲಿದೆ.

Advertisement

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಅತ್ಯಾಧುನಿಕ ತಂತ್ರಾಂಶವು ಈಗಾಗಲೇ ರಾಜ್ಯದಲ್ಲಿ ಹಂತ-ಹಂತವಾಗಿ ಅಳವಡಿಕೆ ಆಗುತ್ತಿದ್ದು, ಬೆಂಗಳೂರಿನಲ್ಲಿ (ಪಶ್ಚಿಮ) ತಿಂಗಳಾಂತ್ಯಕ್ಕೆ ಜಾರಿಗೆ ಬರಲಿದೆ ಎಂದು ಉಪ ಸಾರಿಗೆ ಆಯುಕ್ತ ಸಿದ್ದಪ್ಪ ಎಚ್‌.ಕಲ್ಲೇರ್‌ ತಿಳಿಸಿದ್ದಾರೆ.

ಪ್ರಸ್ತುತ ಇಲ್ಲಿ ವಾಹನ್‌-1 ತಂತ್ರಾಂಶ ಇದೆ. ಅದರಡಿ ವಾಹನಗಳ ಹೊಸ ನೋಂದಣಿ, ವರ್ಗಾವಣೆ, ವಿಳಾಸ ಬದಲಾವಣೆ, ಕರಾರು ನಮೂದು/ ರದ್ದತಿ, ಎಫ್ಸಿ, ನೋಂದಣಿ ಪತ್ರ ನವೀಕರಣ, ಸಿಸಿ, ಎನ್‌ಒಸಿ, ವಾಹನ ಸಂಖ್ಯೆ ಮರುನೋಂದಣಿ, ನಕಲು ನೋಂದಣಿ, ರಹದಾರಿ ನೀಡುವಿಕೆ/ ನವೀಕರಣ/ ನಕಲು ರಹದಾರಿ ನೀಡುವಿಕೆ ಮತ್ತಿತರ ಮೋಟಾರು ವಾಹನಗಳ ವಿವಿಧ ಕಾರ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಿದ ಅರ್ಜಿಗಳನ್ನು ಡಿ. 19ರ ಒಳಗೆ ಪೂರ್ಣಗೊಳಿಸಿಕೊಳ್ಳಬೇಕು. ತದನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಈಗಾಗಲೇ ಶುಲ್ಕ, ತೆರಿಗೆ ಪಾವತಿಸಿದ್ದಲ್ಲಿ ಅಂತಹವುಗಳನ್ನು ಕೂಡ ಡಿ. 22ರ ಒಳಗೆ ಬಾಕಿ ಅರ್ಜಿ ವಿಲೇವಾರಿಗೊಳಿಸುತ್ತಿರುವುದರಿಂದ ಸಾರ್ವಜನಿಕರು ಮೋಟಾರು ವಾಹನಗಳಿಗೆ ಸಂಬಂಧಿಸಿದ ತಮ್ಮ ಯಾವುದೇ ಅರ್ಜಿಗಳು ಬಾಕಿ ಇದ್ದರೆ, ಕಚೇರಿಗೆ ಹಾಜರಾಗಿ ವಿಲೇವಾರಿ ಮಾಡಿಕೊಳ್ಳಬೇಕು. 22ರ ನಂತರ ಹಿಂದಿನ ಯಾವುದೇ ಅರ್ಜಿಗಳನ್ನು ಹೊಸ ತಂತ್ರಾಂಶವು ಮಾನ್ಯ ಮಾಡದೆ ಇರುವುದರಿಂದ ಕಚೇರಿಯು ಜವಾಬ್ದಾರಿ ಆಗುವುದಿಲ್ಲ ಎಂದು ಉಪ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. 

ಅಲ್ಲದೆ, ಡಿ. 20ರಿಂದ 29ರವರೆಗೆ ವಾಹನ್‌-1ರ ಎಲ್ಲ ಕೆಲಸ ಕಾರ್ಯಗಳನ್ನು ಕಚೇರಿಯಲ್ಲಿ ಸ್ಥಗಿತಗೊಳಿಸಲಾಗುವುದು. ಹೊಸ ತಂತ್ರಾಂಶಗಳ ಅಳವಡಿಕೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next