Advertisement

“ಲಿಂಗಾಯತ ಧರ್ಮ’ಕ್ಕೆ ಹೊಸ ಸಂಘ!

06:05 AM Jan 23, 2018 | |

ಬೆಂಗಳೂರು: ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಲಿಂಗಾಯತ ಹೋರಾಟಗಾರರು ಪ್ರತ್ಯೇಕ ಸಂಘ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಕುರಿತು ಚರ್ಚಿಸಲು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವೇದಿಕೆಯಿಂದ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ದಿನವಿಡೀ ಸಭೆ ನಡೆಯಲಿದೆ.

Advertisement

ಪ್ರಮುಖವಾಗಿ ಲಿಂಗಾಯತರ ವಿಶ್ವ ಮಟ್ಟದ ಸಂಘಟನೆ ಸ್ಥಾಪನೆ ಕುರಿತು ಚರ್ಚೆ ನಡೆಯಲಿದ್ದು, ಈಗಾಗಲೇ ವಿಶ್ವ ಲಿಂಗಾಯತ ಪರಿಷತ್‌ ಎಂದು ನಾಮಕರಣ ಮಾಡಲು ಪ್ರಸ್ತಾಪ ಬಂದಿದ್ದರೂ, ಯಾವ ಹೆಸರಿನಲ್ಲಿ ಸಂಘಟನೆ ಮಾಡಬೇಕೆನ್ನುವ ಕುರಿತಂತೆ ಚರ್ಚೆ ನಡೆಯಲಿದೆ. ಲಿಂಗಾಯತರ ಹೆಸರಿನಲ್ಲಿ ಈಗಾಗಲೇ ಅನೇಕ ಸಂಘಟನೆಗಳು ನೋಂದಣಿ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ ಕಾನೂನು ತೊಡಕು ಉಂಟಾಗದಂತೆ ನೋಡಿಕೊಳ್ಳಲು ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಟ ನಡೆಸುತ್ತಿರುವ ಲಿಂಗಾಯತ ಹೋರಾಟಗಾರರು ಹಾಗೂ ವೀರಶೈವ ಮಹಾಸಭೆಯ ನಡುವೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಲಿಂಗಾಯತ ಹೋರಾಟಗಾರರು ಪರ್ಯಾಯ ಸಂಘ ರಚಿಸಿ, ಆ ಮೂಲಕ ತಮ್ಮ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಬಸವ ಸೇನೆ ಯುವ ಘಟಕ: ಲಿಂಗಾಯತ ಹೋರಾಟಗಾರರು ಸಂಘಟನೆಗೆ ಯುವಕರನ್ನು ಸೆಳೆಯಲು ರಚಿಸಿಕೊಂಡಿರುವ ಬಸವ ಸೇನೆಯನ್ನು ಲಿಂಗಾಯತರ ಪರ್ಯಾಯ ಸಂಘಟನೆಯ ಯುವ ಘಟಕವಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಇಂದು ರಾಜೀನಾಮೆ: ಲಿಂಗಾಯತ ಪ್ರತ್ಯೇಕ ಹೋರಾಟಗಾರರಲ್ಲಿ ಸಚಿವರಾದ ಎಂ.ಬಿ ಪಾಟೀಲ್‌, ವಿನಯ ಕುಲಕರ್ಣಿ, ಡಾ. ಶರಣ ಪ್ರಕಾಶ್‌ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ ಸೇರಿದಂತೆ ಅನೇಕರು ವೀರಶೈವ ಮಹಾಸಭೆಯ ಆಜೀವ ಸದಸ್ಯತ್ವ ಹೊಂದಿದ್ದು, ಮಹಾಸಭೆಯ ಮಹಾ ಪೋಷಕರಾಗಿದ್ದಾರೆ. ಮಹಾಸಭೆಗೆ ಪರ್ಯಾಯ ಸಂಘ ಕಟ್ಟುವ ನಿರ್ಧಾರ ಕೈಗೊಂಡಿರುವುದರಿಂದ ವೀರಶೈವ ಮಹಾಸಭೆಯ ಪ್ರಾಥಮಿಕ ಸದಸ್ಯತ್ವಕ್ಕೆ  ಮಂಗಳವಾರ ಸಾಮೂಹಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಸಭೆಯಲ್ಲಿ ವಿವಿಧ ಮಠಾಧೀಶರು ಹಾಗೂ ಲಿಂಗಾಯತ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನಾವು ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮಹಾಸಭೆಯೊಂದಿಗೆ ಸೇರಿಕೊಂಡೇ ಮುಂದುವರಿಯಲು ಪ್ರಯತ್ನ ಮಾಡಿದೆವು. ಆದರೆ, ಅವರು ನಮ್ಮೊಂದಿಗೆ ಬರಲು ಸಿದ್ದರಿಲ್ಲ. ಅನಿವಾರ್ಯವಾಗಿ ಹೊಸ ಸಂಘದ ಸ್ಥಾಪನೆ ಮಾಡಬೇಕಿದೆ. ಸಂಘಟನೆ ಹೆಸರು, ರೂಪುರೇಷೆ ಹೇಗಿರಬೇಕು ಎಂದು ಮಂಗಳವಾರ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ.
– ಬಸವರಾಜ್‌ ಹೊರಟ್ಟಿ, ಪ್ರತ್ಯೇಕ ಲಿಂಗಾಯತ ಧರ್ಮ ವೇದಿಕೆ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next