Advertisement

ಇಲಾಖೆಗಳ ಸಮನ್ವಯದ ಕೊರತೆ: ನೂತನ ರಸ್ತೆ ಅಗೆದು ಪೈಪ್‌ ಲೈನ್‌ ಕಾಮಗಾರಿ

05:10 AM May 25, 2018 | Karthik A |

ಬಂಟ್ವಾಳ: ಇಲಾಖೆಗಳ ಸಮನ್ವಯದ ಕೊರತೆಯಿಂದ ಬಂಟ್ವಾಳ ಪುರಸಭೆ ವ್ಯಾಪ್ತಿಯ 5 ಕೋಟಿ ರೂ. ವೆಚ್ಚದ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಸಮಸ್ಯೆಯನ್ನು ಸೃಷ್ಟಿಸಿದೆ. ಬಿ.ಸಿ. ರೋಡ್‌ ಕೈಕಂಬ ದ್ವಾರದಿಂದ ಮೊಡಂಕಾಪು ರೈಲು ಮೇಲ್ಸೇತುವೆ ತನಕದ ಹೆದ್ದಾರಿಯ 600 ಮೀಟರ್‌ ಉದ್ದಕ್ಕೆ ಕುಡಿಯುವ ನೀರಿನ ಪೈಪ್‌ ಲೈನ್‌ ಅಳವಡಿಸಲು ಅಗೆಯುವ ಮೂಲಕ ರಸ್ತೆ ಅಧ್ವಾನಗೊಂಡಿದೆ. ಮಳೆ ಬಂದರೆ ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆ ಇಡೀ ಕೆಸರುಮಯವಾಗಿ, ವಾಹನ ಸಂಚಾರಕ್ಕೂ ಅಡ್ಡಿ- ಆತಂಕ ಎದುರಾಗಲಿದೆ. ನಡೆದು ಹೋಗುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಯಾಗಲಿದ್ದು, ಹತ್ತಿರದ ಮನೆ ಅಂಗಡಿಗಳಿಗೂ ಇದರ ಬಿಸಿ ತಟ್ಟಲಿದೆ.

Advertisement

2016ರಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮತ್ತು ಅಪೆಂಡಿಕ್ಸ್‌ ಇ ಬಜೆಟ್‌ನಿಂದ ಯೋಜನೆಯಲ್ಲಿ 5 ಕೋಟಿ ರೂ. ವೆಚ್ಚದ ಬಿ.ಸಿ. ರೋಡ್‌ ಕೈಕಂಬ-ಪೊಳಲಿ ರಸ್ತೆ ಕಾಮಗಾರಿ ನಡೆದಿತ್ತು. ಕೇವಲ ಎರಡು ವರ್ಷಗಳ ಬಳಿಕ ಅದೇ ರಸ್ತೆಯನ್ನು ಕುಡಿಯುವ ನೀರಿನ ಯೋಜನೆಯ ಪೈಪ್‌ ಅಳವಡಿಸಲು ರಸ್ತೆಯಲ್ಲಿ ಅಗೆದಿರುವುದು ಇಲ್ಲಿನ ಸಮಸ್ಯೆ. ಕೈಕಂಬ ದ್ವಾರದಿಂದ ಮೊಡಂಕಾಪು ರೈಲು ಸೇತುವೆ ತನಕ  600 ಮೀ. ಉದ್ದಕ್ಕೆ ರಸ್ತೆ ಅಗೆದು ಕುಡಿಯುವ ನೀರಿನ ಪೈಪ್‌ ಅಳವಡಿಸಿ ಮಣ್ಣನ್ನು ಮೇಲೆ ಹಾಕಿ ಅಲ್ಲಿಯೇ ಬಿಟ್ಟಿದ್ದಾರೆ.


ಸಂಚಾರಕ್ಕೆ ಅಡಚಣೆ

ಈ ರಸ್ತೆಯಲ್ಲಿ ಪಕ್ಕದಲ್ಲಿಯೇ ಎರಡು ಪ್ರೈಮರಿ ಶಾಲೆಗಳು, ಮೂರು ಪ್ರೌಢಶಾಲೆ ಗಳು ಹಾಗೂ ಪ.ಪೂ. ಮತ್ತು ಪದವಿ ಕಾಲೇಜುಗಳಿವೆ. ಅಲ್ಲದೆ ಚರ್ಚ್‌, ಅಯ್ಯಪ್ಪ ಮಂದಿರ ಹಾಗೂ ವನದುರ್ಗಾ ದೇವಸ್ಥಾನವಿದೆ. ಹಾಗಾಗಿ ಬೆಳಗ್ಗೆ, ಸಂಜೆಯ ಹೊತ್ತು ವಾಹನ ಸಂಚಾರ ದಟ್ಟಣೆ ಹೆಚ್ಚು. ಇನ್ನೇನು ಶಾಲೆ ಆರಂಭವಾಗಲಿದೆ.  ಜತೆಗೆ ಮುಂಗಾರಿನ ಮುನ್ಸೂಚನೆಯೂ ಇದೆ. ಮಳೆ ಬಂದಾಗ ಮಕ್ಕಳು ಮತ್ತು ಇಲ್ಲಿ ಓಡಾಡುವ ಜನರು ಕಷ್ಟಪಡಬೇಕಾಗುತ್ತದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಯದಿದ್ದರೆ ಸಂಚಾರ ಅಡಚಣೆ ಎದುರಾಗಲಿದೆ.

ರಸ್ತೆಗೆ ತೊಂದರೆ
ಪ್ರತಿ ಸಲ ಪೈಪ್‌ ಲೈನ್‌ ಕಾಮಗಾರಿ ಮಾಡುವಾಗಲೂ ರಸ್ತೆಗೆ ಕಂಟಕ ಎದುರಾಗುತ್ತದೆ. ಕುಡಿಯುವ ನೀರು ಯೋಜನೆಯನ್ನು ಜಾರಿ ತರಬೇಕಾದುದು ಕೂಡಾ ಅಗತ್ಯ. ಸ್ಥಳಾವಕಾಶ ಕಡಿಮೆ ಇರುವ ಕಾರಣ ಕೆಲವೊಂದು ಸಲ ರಸ್ತೆಯನ್ನೇ ಅಗೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಅಗೆದ ರಸ್ತೆಯನ್ನು ಸರಿ ಮಾಡಲು ಈ ಇಲಾಖೆಗೆ ಯಾವುದೇ ಅನುದಾನ ದೊರಕುವುದಿಲ್ಲ. ಹೀಗಾಗಿ ರಸ್ತೆ ಅಗೆದು ಮಣ್ಣು ಹಾಕಿ ಬಿಟ್ಟು ಬಿಡುತ್ತಾರೆ. ಅದನ್ನು ಮತ್ತೆ ಸರಿ ಮಾಡಬೇಕಾದ ಕೆಲಸ ಲೋಕೋಪಯೋಗಿ ಇಲಾಖೆಗೆ ಬರುತ್ತದೆ. ರಸ್ತೆ ಹಾಳಾದಾಗ ಜನರು ಪ್ರಶ್ನಿಸುವುದು ಲೋಕೋಪಯೋಗಿ ಇಲಾಖೆಯನ್ನೇ. ಹೀಗಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪೈಪ್‌ ಲೈನ್‌ ಅಳವಡಿಸುವಾಗೆಲ್ಲ ಲೋಕೋಪಯೋಗಿ ಇಲಾಖೆಗೆ ಸಂಕಷ್ಟ  ಎದುರಾಗುತ್ತದೆ.

ಇಲಾಖೆಗಳಲ್ಲಿ ಪರಸ್ಪರ ಹೊಂದಾಣಿಕೆ ಇರಲಿ
ಎರಡು ಇಲಾಖೆಗಳು ಪರಸ್ಪರ ಪೂರಕವಾಗಿ ಒಪ್ಪಂದ ಮಾಡಿಕೊಂಡು ಕೆಲಸ ಮಾಡಿದರೆ ಈ ಸಂಕಷ್ಟವೇ ಎದುರಾಗುವುದಿಲ್ಲ. ಇಲ್ಲವಾದರೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಜತೆಗೆ ಹಣ, ಶ್ರಮ ಎರಡೂ ಪೋಲಾಗುತ್ತದೆ. ಲೋಕೋಪಯೋಗಿ ಇಲಾಖೆ, ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನ ಇಲಾಖೆ ಹಾಗೂ ಪುರಸಭೆಯು ಒಟ್ಟಾಗಿ ಮಳೆ ಬರುವ ಮೊದಲೇ ಅಗೆದ ರಸ್ತೆಗೆ ಮರು ಡಾಮರು ಹಾಕುವ ಬಗ್ಗೆ ಕ್ರಮ ಕೈಗೊಂಡರೆ ಸಮಸ್ಯೆಯನ್ನು ಪರಿಹರಿಸಬಹುದು. ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವ ಯಾವುದೇ ಎರಡು ಸರಕಾರಿ ಇಲಾಖೆಗಳು ಪರಸ್ಪರ ಸಂವಹನ ಮಾಡಿ ಕಾರ್ಯ ನಿರ್ವಹಿಸಿದರೆ ಮಾತ್ರ ಜನರಿಗೆ ಉಪಯೋಗವಾಗುತ್ತದೆ. ಇಲ್ಲದಿದ್ದಲ್ಲಿ ಸರಕಾರದಿಂದ ಬಿಡುಗಡೆಯಾಗುವ ಅನುದಾನ ವ್ಯರ್ಥವಾಗುವುದರಲ್ಲಿ ಸಂಶಯವಿಲ್ಲ.

Advertisement

ಇಲಾಖೆ ಗೊಂದಲ
ಲೋಕೋಪಯೋಗಿ ಇಲಾಖೆ 2 ವರ್ಷಗಳ ಹಿಂದೆ ರಸ್ತೆ ಡಾಮರು ಕಾಮಗಾರಿ ಕೈಗೆತ್ತಿಕೊಳ್ಳುವಾಗಲೇ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟ ಇಲಾಖೆಗೆ  ಪೈಪ್‌ ಲೈನ್‌ ಅಳವಡಿಸುವಂತೆ ಸೂಚಿಸಿತ್ತು. ಆದರೆ ಆ ಇಲಾಖೆಗೆ ಆದೇಶ ಪತ್ರ ದೊರಕದೇ ಇದ್ದುದರಿಂದ ಅವರು ಕಾರ್ಯನಿರ್ವಹಿಸುವ ತನಕ ಕಾಯುವಷ್ಟು ಸಮಯ ಲೋಕೋಪಯೋಗಿ ಇಲಾಖೆಗೆ ಇರಲಿಲ್ಲ. ಲೋಕೋಪಯೋಗಿ ಇಲಾಖೆಗೆ ಆದೇಶ ಪತ್ರ ದೊರಕಿ ಕಾಮಗಾರಿ ಮುಕ್ತಾಯದ ದಿನವು ನಿಗದಿಯಾಗಿತ್ತು. ಹೀಗಾಗಿ ಈ ಪರಿಸ್ಥಿತಿ ಎದುರಾಗಿದೆ.

ಕಾಮಗಾರಿ ಶೀಘ್ರ ಪೂರ್ಣ
ಯೋಜನೆಯ ಆದೇಶ ಪತ್ರ ನಮಗೆ ಸಿಗುವಾಗ ವಿಳಂಬವಾಗಿದೆ. ಹಾಗಾಗಿ ರಸ್ತೆ ಕಾಮಗಾರಿ ಪೂರ್ಣಗೊಂಡ ಮೇಲೆ ನಾವು ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ. ಆದಷ್ಟು ರಸ್ತೆ ಬದಿಯಲ್ಲೇ ಅಗೆದಿದ್ದೇವೆ. ರಸ್ತೆಯನ್ನು ಹಾಳುಗೆಡುವುದು ನಮ್ಮ ಉದ್ದೇಶವಲ್ಲ. ಆದಷ್ಟು ಬೇಗ ಕಾಮಗಾರಿಯನ್ನು ಪೂರೈಸಿ ಮತ್ತೆ ರಸ್ತೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ಒಂದೆರಡು ವಾರದಲ್ಲಿ ಕಾಮಗಾರಿ ಪೂರೈಸುವ ಕ್ರಮ ಮಾಡಲಾಗುತ್ತದೆ.
– ಶೋಭಾಲಕ್ಷ್ಮೀ, ಸಹಾಯಕ ಎಂಜಿನಿಯರ್‌, ಒಳಚರಂಡಿ ಮತ್ತು ಸಮಗ್ರ ಕುಡಿಯುವ ನೀರು ಯೋಜನೆ, ಮಂಗಳೂರು ವಿಭಾಗ

— ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next