ಬಜೆಟ್ ಎಂದರೆ ಹೊಸ ಯೋಜನೆಗಳ ಘೋಷಣೆ ಮತ್ತು ಅವುಗಳಿಗೆ ಪೂರಕ ಹಣ ಒದಗಿಸುವುದು. ಆದರೆ, ಸರ್ಕಾರ ಯೋಜನೆಗಳನ್ನು ಪ್ರಕಟಿಸಿದೆ, ಹಣ ಮೀಸಲಿಡುವುದನ್ನು ಮರೆತಿದೆ. ನಗರದ ಪ್ರಮುಖ ಸಮಸ್ಯೆ ಸಂಚಾರದಟ್ಟಣೆ. ಇದನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯೊಂದೇ ಪರಿಹಾರ. ಈ ನಿಟ್ಟಿನಲ್ಲಿ ಸರ್ಕಾರವು “ವಿರಳ ಸಂಚಾರ ದಿನ’ದ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.
ಆದರೆ, ಬಜೆಟ್‌ನಲ್ಲಿ ಯಾವುದೇ ಪ್ರಮುಖ ಹೆಜ್ಜೆ ಇಟ್ಟಿಲ್ಲ. ಬದಲಿಗೆ 150 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವುದು ಸೇರಿದಂತೆ ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುವ ಯೋಜನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಬಿಎಂಟಿಸಿ ಬಸ್‌ಗಳ ಖರೀದಿ ಬಗ್ಗೆ ಪ್ರಸ್ತಾಪಿಸಿಲ್ಲ. ಉಪನಗರ ರೈಲು ಯೋಜನೆಗೆ ಹಣ ಮೀಸಲಿಡುವುದಾಗಿ ಹೇಳಿಲ್ಲ.
ಮೆಟ್ರೋ ಮೂರನೇ ಹಂತದ ಸಮಗ್ರ ಯೋಜನಾ ವರದಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ, ಹಣ ಮೀಸಲಿಟ್ಟಿಲ್ಲ. ರಸ್ತೆ ವಿಸ್ತರಣೆ ಮತ್ತು ಬಹುಹಂತದ ವಾಹನಗಳ ನಿಲುಗಡೆ ಕುರಿತೂ ಪ್ರಸ್ತಾಪಿಸಿಲ್ಲ. ಹಾಗಾಗಿ, ಬೆಂಗಳೂರು ಸಮೂಹ ಸಾರಿಗೆ ಸಂಚಾರ ವ್ಯವಸ್ಥೆ ದೃಷ್ಟಿಯಿಂದ ಬಜೆಟ್ ಅಪೂರ್ಣವಾಗಿದೆ. ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ, ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಹಣ ಮೀಸಲಿಡಬೇಕಿತ್ತು. ಅದೇ ರೀತಿ, ಮೆಟ್ರೋ 3ನೇ ಹಂತದಲ್ಲಿ ಉಪ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ “ಕನೆಕ್ಟಿವಿಟಿ’ ಅಭಿವೃದ್ಧಿಪಡಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಇದಕ್ಕೆ ಇಂತಿಷ್ಟು ಹಣ ಒದಗಿಸಿದ್ದರೆ, ಕೇಂದ್ರದಲ್ಲಿ ಅದಕ್ಕೆ ಮತ್ತಷ್ಟು ಮಹತ್ವ ಸಿಗುತ್ತಿತ್ತು. ಕಳೆದ ಬಾರಿ 1,500 ಬಸ್‌ಗಳ ಖರೀದಿ ಮತ್ತು 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಸ್ ಸೇವೆ ಒದಗಿಸಲು ಹಣ ಒದಗಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದು ಇದುವರೆಗೂ ಆಗಿಲ್ಲ.
* ಎಂ.ಎನ್.ಶ್ರೀಹರಿ, ನಗರ ಯೋಜನಾ ತಜ್ಞ