ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮುಕುಟವಾಗಿರುವ ಚಾಮುಂಡಿ ಬೆಟ್ಟಕ್ಕೆ ಮತ್ತಷ್ಟು ಮೆರಗು ನೀಡಿ, ಪ್ರವಾಸಿ ತಾಣವಾಗಿಸುವ ಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ 41.16 ಕೋಟಿ ರೂ. ವೆಚ್ಚದಲ್ಲಿ 4 ಹಂತಗಳಲ್ಲಿ ಬೆಟ್ಟದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಸಮಗ್ರ ಯೋಜನೆ ಸಿದ್ಧಪಡಿಸಿದೆ. ಈಗಾಗಲೇ ಯೋಜನೆಯ ಪ್ರಾತ್ಯಕ್ಷಿಕೆ ಸಿದ್ಧಪಡಿಸಲಾಗಿದೆ. ಇದೀಗ ಯೋಜನೆಯ ಡಿಪಿಆರ್ (ವಿಸ್ತೃತಯೋಜನಾ ವರದಿ)ಸಿದ್ಧಪಡಿಸ ಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಸಾಕಾರ ಗೊಂಡಲ್ಲಿ ಬೆಟ್ಟಕ್ಕೆ ವಿಶೇಷ ಮೆರುಗು ಬರಲಿದೆ.
ಸ್ವಾಗತ ಕಮಾನು: ಚಾಮುಂಡಿ ಬೆಟ್ಟಕ್ಕೆ ತೆರಳುವ ಜಂಕ್ಷನ್ ಅಭಿವೃದ್ಧಿ ಹಾಗೂ ಬೆಟ್ಟಕ್ಕೆ ಸಾಗುವ ರಸ್ತೆ ಆರಂಭ ಹಾಗೂ ಮುಕ್ತಾಯವಾಗುವಲ್ಲಿ ಸ್ವಾಗತ ಕಮಾನು(ಆರ್ಚ್) ನಿರ್ಮಿಸಲಾಗುತ್ತಿದೆ. ಬೆಟ್ಟದ ತಪ್ಪಲು ಮೆಟ್ಟಿಲು ಮಾರ್ಗದಲ್ಲಿ ಪ್ರವೇಶ ದ್ವಾರ, ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚುಗಳು, 6 ಕಡೆ ರೈನ್ ಶೆಲ್ಟರ್, ನಾರಾಯಣ ಸ್ವಾಮಿ, ಮಹಾಬಲೇಶ್ವರ ದೇವಾಲಯ ಅಭಿವೃದ್ಧಿ, 2 ಕುಡಿಯುವ ನೀರಿನ ಘಟಕಗಳ ನಿರ್ಮಾಣ, ನಂದಿ ಆವರಣ ಅಭಿವೃದ್ಧಿ, ಟ್ರೀ ಪಾರ್ಕ್ ಸೇರಿದಂತೆ ಒಟ್ಟು 12.60 ಕೋಟಿ ರೂ. ವೆಚ್ಚದಲ್ಲಿ ಬೆಟ್ಟ ಅಭಿವೃದ್ಧಿಪಡಿಸಲಾಗುತ್ತಿದೆ.
ವಿದ್ಯುತ್ ದೀಪಾಲಂಕಾರ: ದೇವಾಲಯಕ್ಕೆ 40 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ವಿದ್ಯುತ್ ದೀಪಾಲಂಕಾರ, ವಿವಿಧೆಡೆ ಸಿಸಿ ಟಿವಿ ಅಳವಡಿಕೆ, ವೈಫೈ ಸೇವೆ ನೀಡಲಾಗುತ್ತಿದೆ. ದೇಗುಲದ ಸುತ್ತಲೂ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ. ಶೌಚಾಲಯ, ಕುಡಿಯುವ ನೀರು, ಚಾರಿಯಟ್ ಹೌಸ್ ನಿರ್ಮಿಸಲಾಗುತ್ತಿದೆ. ಇದಲ್ಲದೆ ಚಪ್ಪಲಿ ಬಿಡಲು ಸೂಕ್ತ ವ್ಯವಸ್ಥೆ, ಮಹಿಷಾಸುರ ಪ್ರತಿಮೆ ಆವರಣದಲ್ಲಿ ಹುಲ್ಲುಗಾವಲು ನಿರ್ಮಾಣ, ಬೆಂಚ್‌ಗಳ ಅಳವಡಿಕೆ ಸೇರಿದಂತೆ ವಿವಿಧ ಸೌಲಭ್ಯ ರೂಪಿಸಲಾಗಿದೆ.
ತ್ಯಾಜ್ಯ ಘಟಕ ಸ್ಥಾಪನೆ: ಬೆಟ್ಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಕ್ಕೆ 1.50 ಕೋಟಿ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಕಸದ ಮರು ಬಳಕೆ ಘಟಕ ತೆರೆಯಲಾಗುತ್ತಿದೆ. ಮಾಹಿತಿ ಕೇಂದ್ರ, ವಸ್ತು ಸಂಗ್ರಹಾಲಯ, ಗ್ರಂಥಾಲಯ, ಸ್ಮರಣಿಕೆಗಳ ಮಳಿಗೆ, ಆಡಳಿತ ಕಚೇರಿ, ಪ್ರಾಥಮಿಕ ಚಿಕಿತ್ಸೆ ಕೇಂದ್ರ, ಟಿಕೆಟ್ ಕೇಂದ್ರ ತೆರೆಯಲಾಗುತ್ತಿದೆ. ಪ್ರಸ್ತುತ ಇರುವ ಸರ್ಕಾರಿ ಕಚೇರಿಗಳ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ.
ದೇವಿ ಕೆರೆಗೂ ಹೊಸ ಸ್ಪರ್ಶ: ಬೆಟ್ಟದಲ್ಲಿರುವ ದೇವಿ ಕೆರೆಯ ಅಭಿವೃದ್ಧಿಗೆ 4 ಕೋಟಿ ರೂ. ವೆಚ್ಚದಲ್ಲಿ ಕೆರೆ ಸುತ್ತಲೂ ನೆಲಗಟ್ಟುಗಳ ನಿರ್ಮಾಣ, ಕೆರೆ ಏರಿಯಲ್ಲಿ ಹುಲ್ಲುಗಾವಲು ಅಭಿವೃದ್ಧಿಗೊಳಿಸುವ ಮುಖಾಂತರ ಕೆರೆಯನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು ಚಿಂತಿಸಲಾಗಿದೆ.