ನೆರೆಯ ರಾಷ್ಟ್ರ ಪಾಕಿಸ್ಥಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್‌ನ ಮುಖಂಡ ಶಹಬಾಜ್ ಷರೀಫ್ ನೇತೃತ್ವದಲ್ಲಿ ವಿಪಕ್ಷಗಳ ಒಕ್ಕೂಟ ಸರಕಾರ ಅಧಿಕಾರಕ್ಕೆ ಬಂದಿದೆ. ಅಲ್ಲಿ ಯಾವುದೇ ರೀತಿಯ ಸರಕಾರ ಬಂದರೂ ಇದರಿಂದ ಭಾರತಕ್ಕೆ ಧನಾತ್ಮಕ ಪರಿಣಾಮವನ್ನಾಗಲಿ, ಉಗ್ರ ಕೃತ್ಯಗಳಿಗೆ ನಿಯಂತ್ರಣ ಹೇರುವ ಯಾವುದೇ ಪ್ರಯತ್ನವನ್ನಾಗಲೀ ಪಾಕಿಸ್ಥಾನ ಮಾಡಲಾರದು. ಹಾಗೆಯೇ ಪಾಕಿಸ್ಥಾನದಲ್ಲಿ ಸರಕಾರದ ನೇತೃತ್ವದ ವಹಿಸುವವರಿಗೆ ಕಾಶ್ಮೀರ ವಿವಾದದ ಬಗ್ಗೆ ಮಾತನಾಡದೆ ಕುರ್ಚಿ ಏರಲು ಆಗುವುದೇ ಇಲ್ಲ. ಅದಕ್ಕೆ ಹೊಸ ಪ್ರಧಾನಿಯೂ ಹೊರತಲ್ಲ. ಶಹಬಾಜ್ ಷರೀಫ್ ಅವರು ಮಾತನಾಡುತ್ತಾ “ಭಾರತದ ಜತೆಗೆ ಪಾಕಿಸ್ಥಾನ ಶಾಂತಿಯನ್ನು ಬಯಸುತ್ತದೆ. ಆದರೆ ಮೊದಲಿಗೆ ಕಾಶ್ಮೀರ ವಿಚಾರ ಇತ್ಯರ್ಥವಾಗಬೇಕು’ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತ ಸರಕಾರದ ನಿಲುವು ಏನು ಎನ್ನುವುದು ಈಗಾಗಲೇ 75 ವರ್ಷಗಳಿಂದ ಜಗತ್ತಿಗೆ ಸಾರಿ ಸಾರಿ ಹೇಳಲಾಗಿದೆ.
ಪಾಕಿಸ್ಥಾನದ ಹೊಸ ಸರಕಾರ ಮೊದಲಾಗಿ ತನ್ನ ದೇಶದಲ್ಲಿಯೇ ನಾರುತ್ತಿರುವ ಕೊಳೆಯನ್ನು ತೊಳೆಯಲು ಮುಂದಾಗಲಿ. “ಕಾಶ್ಮೀರ’ ಎಂಬ ಪದ ಮುಂದಿಟ್ಟುಕೊಂಡು ಸ್ಥಾನ ಭದ್ರಗೊಳಿಸುವ ಯಾವ ಕೆಲಸವನ್ನೂ ಹೊಸ ಪ್ರಧಾನಿ ಮಾಡುವುದು ಬೇಡ. ಆ ದೇಶದ ಸರಕಾರದ ಚುಕ್ಕಾಣಿ ಹಿಡಿದವರು ಕಾಶ್ಮೀರ ವಿಚಾರ ಮುಂದಿಟ್ಟು ಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತನಾಡಿದವರು, ಅದರ ನೆಪದಲ್ಲಿ ದೇಶದ ಮೇಲೆ ದಂಡೆತ್ತಿ ಬಂದವರು ಏನಾಗಿದ್ದಾರೆ ಎಂಬ ಬಗ್ಗೆ ಶಹಬಾಜ್ ಇತಿಹಾಸದ ದಿನಗಳ ಬಗ್ಗೆ ಓದಿ ತಿಳಿದುಕೊಳ್ಳಲಿ.
ಹೊಸ ಪ್ರಧಾನಿ, ಭಾರತದ ಜತೆಗೆ ನಿಷ್ಕಲ್ಮಷ ಹೃದಯದಿಂದ ಉತ್ತಮ ಹಾಗೂ ಸೌಹಾರ್ದಯುತ ಬಾಂಧವ್ಯ ಬಯಸುವುದೇ ಆಗಿದ್ದಲ್ಲಿ, ತಮ್ಮ ದೇಶದ ಸೇನಾ ಮುಖ್ಯಸ್ಥರಿಗೆ, ಭಾರತವೂ ಸೇರಿದಂತೆ ಇತರ ದೇಶಗಳಲ್ಲಿ ಕಿಡಿಗೇಡಿತನ ಮಾಡಲು ತರಬೇತಿ ಮತ್ತು ಕುಮ್ಮಕ್ಕು ನೀಡುವ ಗುಪ್ತಚರ ಸಂಸ್ಥೆ ಐಎಸ್‌ಐ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಿ. ಈಗಾಗಲೇ ಕಾಶ್ಮೀರ ಭಾರತಕ್ಕೆ ಸೇರಿಯಾಗಿದೆ. ಈ ವಿಷಯ ಬಿಟ್ಟು ಇನ್ನಾದರೂ ಅಭಿವೃದ್ಧಿ ಕುರಿತ ವಿಚಾರಗಳನ್ನು ಇರಿಸಿಕೊಂಡು ಮುಂದೆ ಹೋಗೋಣ ಎಂಬ ಗಟ್ಟಿ ನಿರ್ಧಾರವನ್ನು ಶಹಬಾಜ್ ತೆಗೆದುಕೊಳ್ಳಲಿ.
ಹೊಸ ಸರಕಾರದ ಮುಖ್ಯಸ್ಥರು ಪ್ರಧಾನವಾಗಿ ಮಾಡಬೇಕಾದ ಮತ್ತೂಂದು ಕೆಲಸವೆಂದರೆ ಪಾಕಿಸ್ಥಾನ ಆಕ್ರಮಿತ ಪ್ರದೇಶವನ್ನು ಬಾಯಿಮುಚ್ಚಿ ನಮ್ಮ ದೇಶಕ್ಕೆ ಒಪ್ಪಿಸಬೇಕು. ಜತೆಗೆ ಅಲ್ಲಿ ಇರುವ ಉಗ್ರ ಶಿಬಿರವನ್ನು ಧ್ವಂಸಗೊಳಿಸುವ ನಿಟ್ಟಿನಲ್ಲಿ ಶಹಬಾಜ್ ಷರೀಫ್ ನೇತೃತ್ವದ ಸರಕಾರವೇ ಆದೇಶ ಕೊಟ್ಟರೆ ಅತ್ಯುತ್ತಮ ಕೆಲಸವೇ ಆದೀತು.
ಷರೀಫ್ ಅವರು ತಮ್ಮ ದೇಶದಲ್ಲಿ ಬೃಹದಾಕಾರವಾಗಿ ಶೇಖರಿಸಿ ನಿಂತಿರುವ ಉಗ್ರತ್ವದ ಕೊಳೆ ತೊಳೆಯಲಿ. ಪಾಕಿಸ್ಥಾನದಾದ್ಯಂತ ಮನೆ ಮಾಡಿರುವ ಉಗ್ರರ ಬೇರುಗಳನ್ನು ಹೊಸಕಿ ಹಾಕಲಿ. ಹಾಗೆಯೇ ಜಾಗತಿಕ ಮಟ್ಟದಲ್ಲಿಯೂ ಉಗ್ರರ ಆಶ್ರಯದಾತ ಎಂಬ ಪಟ್ಟವನ್ನು ಕಳೆದುಕೊಳ್ಳಲಿ. ಜತೆಗೆ ತಮ್ಮ ಮನೆ ಬಾಗಿಲು ಭದ್ರಪಡಿಸುವ ಕೆಲಸ ಬಿಟ್ಟು, ಇನ್ನೊಬ್ಬರ ಮನೆ ಬಾಗಿಲು ಗಟ್ಟಿಯಾಗಿಲ್ಲ ಎಂಬ ಬೋಧನೆ ನಿಲ್ಲಿಸಿದರೆ ಅವರಿಗೇ ಒಳ್ಳೆಯದು. ಪಾಕಿಸ್ಥಾನದ ಮಟ್ಟಿಗೆ ಅಂಥ ನಿರೀಕ್ಷೆ ಮಾಡುವುದು ಸಾಧುವಲ್ಲ. ಏಕೆಂದರೆ, ಪಾಕಿಸ್ತಾನ ಹೇಳುವುದೊಂದು, ಮಾಡುವುದು ಮತ್ತೂಂದು ಎಂಬುದು ಭಾರತಕ್ಕೆ ಹಿಂದಿನಿಂದಲೂ ಅರಿವಾಗಿದೆ.