Advertisement

ಗ್ರಾಮೀಣ ನೈರ್ಮಲ್ಯ, ತಾಜ್ಯ ನಿರ್ವಹಣೆಗೆ ಶೀಘ್ರವೇ ಹೊಸ ನೀತಿ

11:26 PM Aug 25, 2019 | Lakshmi GovindaRaj |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಸ್ವತ್ಛ ಭಾರತ, ಬಯಲು ಬಹಿರ್ದೆಸೆ ಮುಕ್ತ, ತ್ಯಾಜ್ಯ ವಿಲೇವಾರಿ ಯೋಜನೆಗಳ ಅನುಷ್ಠಾನಕ್ಕೆ ಚೌಕಟ್ಟು ಒದಗಿಸಲು ರಾಜ್ಯದಲ್ಲಿ ಶೀಘ್ರ ಹೊಸ ನೀತಿಯೊಂದು ಜಾರಿಗೆ ಬರಲಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರ “ಕರ್ನಾಟಕ ರಾಜ್ಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ಕರಡು ನೀತಿ’ ಯನ್ನು ರೂಪಿಸಿದ್ದು, ಶೀಘ್ರದಲ್ಲೇ ಅದು ಜಾರಿಗೆ ಬರಲಿದೆ. ಈಗಾಗಲೇ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀತಿಯ ಕರಡು ರೂಪಿಸಿದೆ.

Advertisement

ಅದರ ಬಗ್ಗೆ ಈ ಮಾಸಾಂತ್ಯದವರೆಗೆ ಸಾರ್ವಜನಿರಿಂದ ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಒಂದೆರಡು ತಿಂಗಳಲ್ಲಿ ನೀತಿಗೆ ಅಂತಿಮ ರೂಪ ಸಿಗಲಿದೆ. ಅಲ್ಲದೇ ನೀತಿಗೆ ಪೂರಕವಾಗಿ “ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ಕಾರ್ಯತಂತ್ರ’ ಮತ್ತು ನೀತಿಯ ಅನುಷ್ಠಾನಕ್ಕೆ “ಕರ್ನಾಟಕ ಪಂಚಾಯತ್‌ ರಾಜ್‌ (ಘನ ತ್ಯಾಜ್ಯ ನಿರ್ವಹಣೆ) ಮಾದರಿ ಬೈಲಾ-2019’ರ ಕರಡು ಹೊರಡಿಸಲಾಗಿದ್ದು, ಈ ಬಗ್ಗೆಯೂ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆಗಳನ್ನು ಸ್ವೀಕರಿಸಿ ಬಳಿಕ ಅಂತಿಮಗೊಳಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ.

ಗ್ರಾಮೀಣ ಭಾಗದಲ್ಲಿನ ಕಾಯಿಲೆ ತಡೆಗೆ ಕ್ರಮ: ಬಯಲು ಬಹಿರ್ದೆಸೆ ಪದ್ಧತಿ, ವೈಯಕ್ತಿಕ ಸ್ವತ್ಛತೆಯ ಕೊರತೆ, ಘನ ಮತ್ತು ದ್ರವ ತ್ಯಾಜ್ಯಗಳ ಸೂಕ್ತ ಸಂಸ್ಕರಣೆಯ ಕೊರತೆಗಳು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ, ಮಕ್ಕಳ ಮರಣ, ಲಿಂಗಾನುಪಾತ, ಪರಿಸರ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ದುಷ್ಪರಿಣಾಮ ಬೀರಿವೆ. ವಿಶೇಷವಾಗಿ ಆರೋಗ್ಯದ ದೃಷ್ಟಿಯಿಂದ ಘನ ಮತ್ತು ದ್ರವ ತ್ಯಾಜ್ಯದ ದೋಷಪೂರ್ಣ ವಿಲೇವಾರಿ ಮಲೇರಿಯಾ, ಆಮಶಂಕೆ, ಡೆಂಘೀ, ಕಾಲರಾ ಕಾಯಿಲೆಗೆ ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಶೇ.88ರಷ್ಟು ಕಾಯಿಲೆಗಳು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆ, ಅಸಮರ್ಪಕ ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆಯಿಂದಾಗಿ ಬರುತ್ತವೆ.

ಈ ಎಲ್ಲ ಸಮಸ್ಯೆ ಮತ್ತು ಸವಾಲುಗಳಿಗೆ ನೂತನ ನೀತಿ, ದೂರಗಾಮಿ ಪರಿಹಾರ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಪಾಯಕಾರಿ ತ್ಯಾಜ್ಯಗಳು, ಜೈವಿಕ-ವೈದ್ಯ ಕೀಯ ತ್ಯಾಜ್ಯಗಳು, ಇ-ತ್ಯಾಜ್ಯಗಳು, ನಿರ್ಮಾಣ ಮತ್ತು ಕಟ್ಟಡ ಕೆಡವಿದ ತ್ಯಾಜ್ಯಗಳು, ಕೈಗಾರಿಕಾ ತ್ಯಾಜ್ಯಗಳು ಗ್ರಾಮೀಣ ನೈರ್ಮಲ್ಯ ನೀತಿಯ ವ್ಯಾಪ್ತಿಗೆ ಒಳಪಡುವುದಿಲ್ಲ. ಏಕೆಂದರೆ, ಅವುಗಳು ಬೇರೆ ನಿಯಮಗಳಡಿಯಲ್ಲಿ ನಿರ್ವಹಿಸಲ್ಪಡುತ್ತವೆ ಮತ್ತು ಅವುಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಒಳಪಡದಂತಹ ಪ್ರಾಧಿಕಾರಿಗಳ ನಿರ್ವಹಣೆಯಲ್ಲಿವೆ. ಒಂದು ವೇಳೆ, ಅನ್ವಯವಾಗುವಂತಹ ಕಾಯ್ದೆಗಳ ಮಾರ್ಪಾಡುಗಳಿಂದಾಗಿ ಈ ವಿವಿಧ ತ್ಯಾಜ್ಯ ಗಳೂ ಗ್ರಾಪಂ ವ್ಯಾಪ್ತಿಗೆ ಒಳಪಡದಿದ್ದಲ್ಲಿ, ಈ ಮೇಲೆ ವಿವರಿ ಸಲಾದ ತ್ಯಾಜ್ಯದ ಮೂಲಗಳನ್ನು ಸಹ ಸೇರಿಸಿಕೊಳ್ಳುವಂತೆ ಗ್ರಾಮೀಣ ನೈರ್ಮಲ್ಯ ನೀತಿಯನ್ನು ವಿಸ್ತರಿಸಲಾಗಿದೆ.

ನೀತಿಯ ಪ್ರಮುಖ ಉದ್ದೇಶ ಮತ್ತು ಗುರಿಗಳು
-ರಾಜ್ಯದ ಒಟ್ಟು ಗ್ರಾಪಂಗಳ ಪೈಕಿ 2020ರ ಮಾರ್ಚ್‌ ವೇಳೆಗೆ ಶೇ.20, 2021ರ ಮಾರ್ಚ್‌ ವೇಳೆಗೆ ಶೇ.50 ಮತ್ತು 2022ರ ಮಾರ್ಚ್‌ ವೇಳೆಗೆ ಶೇ.100 ಗ್ರಾಮ ಪಂಚಾಯಿತಿಗಳಲ್ಲಿ ಜೈವಿಕ ವಿಘಟನೀಯ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮತ್ತು ಸಂಸ್ಕರಣೆ ಮಾಡು ವುದು ಹಾಗೂ ಇದೇ ಪ್ರಮಾಣದಲ್ಲಿ ಜೈವಿಕ ವಿಘಟನೀಯ ತ್ಯಾಜ್ಯದ ಮರು ಬಳಕೆಯ ಗುರಿ ಸಾಧಿಸುವುದು.

Advertisement

-ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಿಂದ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ನಿಷೇಧಿಸಿ ಹೊರಡಿ ಸಿರುವ ಆದೇಶದ ಪರಿಣಾಮಕಾರಿ ಅನುಷ್ಠಾನ.

-ಗ್ರಾಮೀಣ ಪ್ರದೇಶಗಳ ನೈಸರ್ಗಿಕ ಪರಿಸರ ಸಂರಕ್ಷಣೆಗೆ ತೆರೆದ ಸ್ಥಳದಲ್ಲಿ ಯಾವುದೇ ತ್ಯಾಜ್ಯದ ರಾಶಿ ಹಾಕುವುದು, ಸುಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು.

-ಪ್ರತಿ ಹೊಸ ಮನೆಗೆ ಶೌಚಾಲಯ ನಿರ್ಮಿಸಿ ಶೇ.100 ರಷ್ಟು ಬಯಲು ಬಹಿರ್ದೆಸೆ ಮುಕ್ತ ಮಾಡುವುದು.

-ಸುರಕ್ಷಿತ ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಯ ಮೂಲಕ “ಮಾನವ ಮಲ’ವನ್ನು ಪರಿ ಸರಕ್ಕೆ ಒಡ್ಡದಿರುವುದನ್ನು ಖಾತರಿಪಡಿಸಿ ಕೊಳ್ಳುವುದು. ಇದಕ್ಕಾಗಿ ರಾಜ್ಯದ ಎಲ್ಲ ಏಕ ಗುಂಡಿ ಶೌಚಾಲಯಗಳನ್ನು 2025ರೊಳಗೆ 2 ಗುಂಡಿಗಳಾಗಿ ಮಾರ್ಪಡಿಸುವುದು.

ಗ್ರಾಮೀಣ ಭಾಗದ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆಗೆ ಒಂದು ಸ್ಪಷ್ಟ ಮತ್ತು ಸಮಗ್ರ ಚೌಕಟ್ಟು ನೀಡಲು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ನೀತಿ, ಕಾರ್ಯತಂತ್ರ ಹಾಗೂ ಬೈಲಾಗಳ ಕರಡು ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿದ ಬಳಿಕ ಪರಿಶೀಲಿಸಿ, ನೀತಿಗೆ ಅಂತಿಮ ರೂಪ ಕೊಡಲಾಗುವುದು.
-ಡಾ.ಆರ್‌.ವಿಶಾಲ್‌, ಆಯುಕ್ತರು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next