Advertisement

ನಿರ್ದೇಶಕರು-ಪ್ರೇಕ್ಷಕರಿಗೆ ಹೊಸ ವೇದಿಕೆ

04:20 AM Jun 07, 2020 | Lakshmi GovindaRaj |

ಕೋವಿಡ್‌ 19 ಲಾಕ್ ಡೌನ್ ವೇಳೆಯಲ್ಲಿ ಚಿತ್ರರಂಗದ ಅನೇಕ ಮಂದಿ ತೆರೆಹಿಂದೆಯೇ ತಮ್ಮದೇಯಾದ ಒಂದಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ನಿರ್ದೇಶಕ ಲೂಸಿಯಾ ಪವನ್ ಕುಮಾರ್, ಚಿತ್ರರಂಗದಲ್ಲಿ ಒಂದಷ್ಟು ಬದಲಾವಣೆಗಳಿಗೆ ಪ್ರಯತ್ನಿಸುತ್ತಿದ್ದು, ಅದರಲ್ಲಿ ತಮ್ಮ ಯೋಚನೆಯೊಂದನ್ನು ಚಿತ್ರರಂಗದ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಚಿತ್ರರಂಗದ ಅನೇಕರಿಗೆ ನೆರವಾಗಲು ತಮ್ಮದೇ ರೀತಿಯಲ್ಲಿ ದೇಣಿಗೆ ಸಂಗ್ರಹಿಸಿದ್ದ ಅವರು, ಇದೀಗ ಸಿನಿಮಾ ಮೇಕರ್ಸ್ ಮತ್ತು ಪ್ರೇಕ್ಷಕರನ್ನು ಹತ್ತಿರ ತರಲು ಹೊಸ ಯೋಜನೆಯನ್ನು ತರಲು ಮುಂದಾಗಿದ್ದಾರೆ.

Advertisement

ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ (ಎಫ್‍ಯುಸಿ) ಎಂಬ ಹೊಸ ವೇದಿಕೆಯನ್ನು ಪವನ್ ರೂಪಿಸಿದ್ದಾರೆ. ಈ ವೇದಿಕೆಯಲ್ಲಿ ಅನೇಕ ಜನಪ್ರಿಯ ನಿರ್ದೇಶಕರು ಹಾಗೂ ಚಿತ್ರರಂಗದ ಅಭಿಮಾನಿಗಳು ಚಿತ್ರಗಳು ಮತ್ತು ಪ್ರದರ್ಶನಗಳ ಕುರಿತು ಸಂವಾದ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡುವ ಪವನ್ ಕುಮಾರ್, ಈ ಮೂಲಕ ಸಮಾನ ಮನಸ್ಕ ನಿರ್ದೇಶಕರು ಹಾಗೂ ಪ್ರೇಕ್ಷಕರು ಜತೆಗೂಡಿ ಸಿನಿಮಾ ನಿರ್ಮಾಣದ ಗಡಿಗಳನ್ನು ವಿಸ್ತರಿಸುವ, ಜತೆಯಾಗಿ ಸಿನಿಮಾ ನೋಡುವ, ಅದರ ಕುರಿತು ಕಲಿಯುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ

ಇನ್ನು ಈ ವೇದಿಕೆಯಲ್ಲಿ ಕ್ಲಬ್ ಸದಸ್ಯರಿಂದ ಸಿನಿಮಾ ನಿರ್ಮಾಣಕ್ಕೆ ಬೇಕಾದ ಫಂಡ್ ಕೂಡ ಸಂಗ್ರಹವಾಗಲಿದೆ. ಈ ಹಣವನ್ನು ನಿರ್ದೇಶಕರು ಪ್ರಾಮಾಣಿಕ ಸಿನಿಮಾ ಮಾಡಲು ಲಭ್ಯವಾಗಲಿದೆ. ಕ್ಲಬ್ ಸದಸ್ಯರಿಗೆ ವಿಭಿನ್ನವಾದ ಕಂಟೆಂಟ್‍ಗಳನ್ನು ಇಲ್ಲಿ ತೋರಿಸಲಾಗುತ್ತದೆಯಂತೆ. ಇನ್ನು ಸಿನಿಮಾ ವಿಶ್ಲೇಷಣೆ, ವಿಮರ್ಶೆ, ನಿರ್ದೇಶಕರ ಸಂದರ್ಶನಗಳು, ಸಿನಿಮಾ ಇತಿಹಾಸದ ಸ್ಮರಣೆ ಮುಂತಾದ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹತ್ತಾರು ಚಟುವಟಿಕೆಗಳು ನಡೆಯಲಿವೆಯಂತೆ. ಅದನ್ನು ಹೊರತುಪಡಿಸಿ, ಚಿತ್ರರಂಗದ ಹೊರತಾದ ಯಾವುದೇ ಚಟುವಟಿಕೆಗಳು, ಚರ್ಚೆಗಳು ನಡೆಯುವುದಿಲ್ಲ ಎನ್ನುವುದು ಪವನ್ ಕುಮಾರ್ ಮಾತು.

ಇನ್ನು ಈ ವೇದಿಕೆಯಲ್ಲಿ ಸಿನಿಮಾ ಬಗ್ಗೆ ಆಸಕ್ತರು ಒಂದೇ ಕಡೆ ಸೇರುವ ಅವಕಾಶವಿರುತ್ತದೆ. ಇಲ್ಲಿ ತಮಾಷೆಯಾಗಿ ಹರಟುತ್ತಾ, ಹೊಸ ಸಂಗತಿಗಳು, ಆವಿಷ್ಕಾರಗಳ ಬಗ್ಗೆ ಚರ್ಚಿಸುತ್ತಾ ಕಲಿಕೆ ನಡೆಯುತ್ತದೆ. ಯೂಟ್ಯೂಬ್ ಚಾನೆಲ್‍ನಲ್ಲಿ ಈ ಚಟುವಟಿಕೆಗಳು ನಡೆಯಲಿದ್ದು, ವೆಬ್‍ಸೈಟ್ ಮತ್ತು ಸೋಶಿಯಲ್ ಮೀಡಿಯಾಗಳನ್ನು ಕೂಡ ಇದಕ್ಕೆ ಸಂಪರ್ಕಿಸಲಾಗಿದೆ. ಒಂದು ತಿಂಗಳಿನಿಂದ ಈ ಬಗ್ಗೆ ಯೋಜನೆಗಳು, ಚರ್ಚೆಗಳು ನಡೆದಿದ್ದು ಈಗ ಅಧಿಕೃತವಾಗಿ ಇದಕ್ಕೆ ಚಾಲನೆ ಸಿಕ್ಕಿದೆ ಎನ್ನುತ್ತಾರೆ ಪವನ್ ಕುಮಾರ್.

ನಿರ್ದೇಶಕರಾದ ಪವನ್ ಕುಮಾರ್, ಅರವಿಂದ್ ಶಾಸ್ತ್ರಿ, ಅಭಯ ಸಿಂಹ, ಈರೇ ಗೌಡ, ಮಂಸೋರೆ, ಕೆ.ಎಂ ಚೈತನ್ಯ, ಆದರ್ಶ್ ಈಶ್ವರಪ್ಪ, ಜಯತೀರ್ಥ ಮುಂತಾದ ನಿರ್ದೇಶಕರು ಈಗಾಗಲೇ ಈ ಕ್ಲಬ್‍ನಲ್ಲಿ ಸೇರಿಕೊಂಡಿದ್ದಾರೆ. ಇನ್ನೂ ಅನೇಕ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿರುವ ನಿರ್ದೇಶಕರು ಮುಂದಿನ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ. ಇದರಿಂದ ಹೊಸ ಮಾದರಿಯ ಸಿನಿಮಾ ಪ್ರಯತ್ನಗಳಿಗೆ ಉತ್ತೇಜನ ಸಿಗಲಿದೆ ಎನ್ನುವುದು ಈ ವೇದಿಕೆಯ ಹಿಂದಿನ ಆಶಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next