Advertisement

ಹೊಸ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ 

05:32 PM Aug 19, 2018 | Team Udayavani |

ಕುಷ್ಟಗಿ: ಮೆಕ್ಕೆಜೋಳ ಬಾಧಿ ಸುವ ಹೊಸ ಕೀಟ ನಿಯಂತ್ರಣ ಕುರಿತು ಶನಿವಾರ ಪಟ್ಟಣದ ಹೊರವಲಯದ ರೈತ ಕಳಕಪ್ಪ ಬಸರಿಗಿಡದ ಅವರ ಜಮೀನಿನಲ್ಲಿ ಕೃಷಿ ಇಲಾಖೆ ಕೀಟ ನಿಯಂತ್ರಣದ ಪ್ರಾತ್ಯಕ್ಷಿಕೆ ನಡೆಸಿತು. ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ರೈತ ಕಳಕಪ್ಪ ಬಸರಿಗಿಡದ್‌ ಅವರ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳದ ಬೆಳೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಅವರ ನಿರ್ದೇಶನದ ಮೇರೆಗೆ ಭೇಟಿ ನೀಡಿ ಪರಿಶೀಲಿಸಿ, ಕೀಟಬಾಧೆಯನ್ನು ಖಚಿತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಮತರ ಅವರ ಜಮೀನಿನಲ್ಲಿ ಕೀಟಬಾಧೆ ನಿಯಂತ್ರಣ ಪ್ರಾತ್ಯಕ್ಷಿಕೆ ಮೂಲಕ ಇತರೇ ರೈತರಿಗೂ ಹೊಸ ಕೀಟ ನಿಯಂತ್ರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

Advertisement

ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದು, ಮೆಕ್ಕೆಜೋಳ ಸೇರಿದಂತೆ ಏಕದಳ ಬೆಳೆಯನ್ನು ತೀವ್ರವಾಗಿ ಬಾಧಿಸುವ ಹುಸಿ ಸೈನಿಕ ಹುಳು ಎಂಬ ಹೊಸ ಕೀಟ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ, ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಈ ವರೆಗೂ ಸುಳಿ ಕೊರೆಯುವ ಸೈನಿಕ ಹುಳು ಇತ್ತಾದರೂ ಬಾಧೆ ಅಷ್ಟೊಂದು ತೀವ್ರವಾಗಿರಲಿಲ್ಲ. ಆದರೆ ಈಗ ಬೆಳಕಿಗೆ ಬಂದಿರುವ ಫಾಲ್ಸ್‌ ಆರ್ಮಿ ವರ್ಮ ಕೀಟ ರೈತರ, ಕೃಷಿ ಇಲಾಖೆ ನಿದ್ದೆಗೆಡಿಸಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮೆಕ್ಕೆಜೋಳ ಸೇರಿದಂತೆ ಇತರೇ ಏಕದಳ ಬೆಳೆಗಳು ಸಂಪೂರ್ಣ ಹಾಳಾಗುವ ಸಾಧ್ಯತೆಗಳಿವೆ. ಈ ಕೀಟವು ಆಫ್ರೀಕಾ ಖಂಡದಲ್ಲಿ ಸಹಜವಾಗಿರುವ ಕೀಟ. ಕಳೆದ ವರ್ಷ ಅಮೆರಿಕಾದಲ್ಲಿ ಮೆಕ್ಕೆಜೋಳವನ್ನು ಈ ಕೀಟ ಹಾಳು ಮಾಡಿದ್ದರಿಂದ ಅಪಾರ ಪ್ರಮಾಣದ ಆರ್ಥಿಕ ಹಾನಿ ಸಂಭವಿಸಿತ್ತು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಈ ಕೀಟಬಾಧೆ ಹಾವಳಿ ಇದೆ. ಶಿವಮೊಗ್ಗದ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊದಲ ಬಾರಿಗೆ ಈ ಕೀಟವನ್ನು ಗುರುತಿಸಿ ವರದಿ ನೀಡಿದ್ದಾರೆ. ಕೀಟ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಯಾಕೆಂದರೆ ಈ ಕೀಟವು ಒಮ್ಮೆ ಬೆಳೆಗೆ ವ್ಯಾಪಿಸಿದರೆ ನಿಯಂತ್ರಿಸುವುದೇ ಕಷ್ಟವಾಗುತ್ತದೆ. ಹೀಗಾಗಿ ರೈತರಿಗೆ ಆಗುವ ಆರ್ಥಿಕ ನಷ್ಟ ತಡೆಯಲು ಇಲಾಖೆ ಈ ಮುಂಜಾಗ್ರತೆ ಕ್ರಮ ಕೈಗೊಂಡಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಕಮತರ ವಿವರಿಸಿದರು.

ತಾಲೂಕಿನ ಕೆಲ ಪ್ರದೇಶಗಳಲ್ಲಿ ಈ ಕೀಟ ಬಾಧೆ ಇದ್ದು, ಕೃಷಿ ಇಲಾಖೆಯ ಸಿಬ್ಬಂದಿ ತಮ್ಮ ವ್ಯಾಪ್ತಿಯ ರೈತರಿಗೆ ಸೂಕ್ತ ರೀತಿಯಲ್ಲಿ ತಿಳಿವಳಿಕೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಸೂಕ್ತ ಕೀಟನಾಶಕ ಹಾಗೂ ವಿಷ ಪಾಷಣ ವೈಜ್ಞಾನಿಕವಾಗಿ ಸುರಕ್ಷಿತ ರೀತಿಯಲ್ಲಿ ಬಳಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗುವಂತೆ ಕಮತರ ಸೂಚಿಸಿದರು.

ರೈತ ಕಳಕಪ್ಪ ಬಸರೀಗಿಡದ, ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ, ಬಾಲಪ್ಪ ಜಲಗೇರಿ, ತಾಂತ್ರಿಕ ವ್ಯವಸ್ಥಾಪಕ ಬಸವರಾಜ್‌ ಪಾಟೀಲ, ಸಹಾಯಕರಾದ ಶ್ರೀಧರ, ಸಂದೀಪ, ಶೇಖರಯ್ಯ ಹಿರೇಮಠ, ಹಂಪಯ್ಯ, ಶರಣಯ್ಯ, ಶುಕಮುನಿ, ರೈತರಾದ ಸಿದ್ದನಗೌಡ ಹುಲ್ಸಗೇರಿ, ಅಮರೇಶ ಹೊಸೂರು, ಹನುಮಗೌಡ ಕತ್ತಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next