Advertisement

‘ಸರಕಾರದ ಯೋಜನೆಗಳು ತಳಮಟ್ಟದ ಜನರಿಗೂ ತಲುಪಲಿ’

01:45 AM Dec 18, 2018 | Karthik A |

ಕೊಕ್ಕಡ: 14ನೇ ಹಣಕಾಸು ಯೋಜನೆಯಡಿ ಶಿರಾಡಿ ಗ್ರಾ.ಪಂ. ಕಚೇರಿ ಕಟ್ಟಡದ ಮೇಲಂತಸ್ತಿನಲ್ಲಿ ನಿರ್ಮಾಣ ಗೊಂಡಿರುವ ಅಂಚೆ ಕಚೇರಿ ಹಾಗೂ ಗ್ರಾಮ ಕರಣಿಕರ ಕಚೇರಿ ಕೊಠಡಿಯ ಉದ್ಘಾಟನೆ ಶುಕ್ರವಾರ ನಡೆಯಿತು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕೊಠಡಿ ಉದ್ಘಾಟಿಸಿ, ಸರಕಾರದ ಯೋಜನೆಗಳು ತಳಮಟ್ಟದ ಜನರಿಗೂ ತಲುಪಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ. ಅಂಚೆ ಇಲಾಖೆ ಹಾಗೂ ಗ್ರಾಮ ಕರಣಿಕರ ಕಚೇರಿಗಳಿಗೆ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿರಾಡಿ ಗ್ರಾ.ಪಂ. ಒಳ್ಳೆಯ ಕೆಲಸ ಮಾಡಿದೆ. ಅಂಚೆ ಇಲಾಖೆ ಮೂಲಕ ಕೇಂದ್ರ ಸರಕಾರದಿಂದ ಬರುವ ವಿವಿಧ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸಲು ಸಾಧ್ಯವಿದೆ. ಗ್ರಾಮ ಕರಣಿಕರ ಕಚೇರಿಯೂ ಗ್ರಾಮದ ಕೇಂದ್ರ ದಲ್ಲಿರಬೇಕಾದುದು ಅವಶ್ಯ ಎಂದರು.

Advertisement

ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ಗೌಡ, ಉಪಾಧ್ಯಕ್ಷೆ ಬಿಂದು ಕೆ.ಎಸ್‌., ಸದಸ್ಯರಾದ ಪ್ರಕಾಶ್‌ ಗುಂಡ್ಯ, ರಾಜೇಶ್‌, ಗ್ರಾಮಸ್ಥರಾದ ಮಲೆನಾಡು ಜನಹಿತ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ, ಶಶಿಧರ ಶಿರಾಡಿ, ಡೊಂಬಯ್ಯ ಗೌಡ, ಲಕ್ಷ್ಮಣ ಗೌಡ, ತಿಮ್ಮಪ್ಪ ಶಿರಾಡಿ ಕಾಲನಿ, ಟಿ. ವರ್ಗೀಸ್‌ ಅಡ್ಡಹೊಳೆ, ಸೋಮಶೇಖರ ಕಳಪ್ಪಾರು, ಗ್ರಾ.ಪಂ. ಕಾರ್ಯದರ್ಶಿ ಶಾರದಾ, ಸಿಬಂದಿಗಳಾದ ಏಲಿಯಾಸ್‌, ತನಿಯಪ್ಪ, ರಮ್ಯಾ, ಸ್ಮಿತಾ, ತೋಮಸ್‌, ವಾಸು, ಗ್ರಾಮ ಸಹಾಯಕ ಯುವರಾಜ್‌, ಅಂಚೆಪಾಲಕಿ ರೋಸಮ್ಮ ಉಪಸ್ಥಿತರಿದ್ದರು. ಗ್ರಾಮಕರಣಿಕ ಸಂತೋಷ್‌ ಯು.ಎಂ. ಸ್ವಾಗತಿಸಿ, ಪಿಡಿಒ ದಿನೇಶ್‌ ಶೆಟ್ಟಿ ವಂದಿಸಿದರು.

ಗ್ರಾಮಸ್ಥರ ಅಹವಾಲು ಸ್ವೀಕಾರ
ಉದ್ಘಾಟನ ಕಾರ್ಯಕ್ರಮದ ಬಳಿಕ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಸದಸ್ಯ ಪ್ರಕಾಶ್‌ ಗುಂಡ್ಯ ಮಾತನಾಡಿ, ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಟ್ಯಾಂಕ್‌ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ನೀರು ಪೂರೈಕೆಗೆ ಕ್ರಮ ಕೈಗೊಂಡಿಲ್ಲ. ಪೈಪ್‌ಲೈನ್‌ಗೆ ಗ್ರಾ.ಪಂ.ನಿಂದ ಅನುದಾನ ಕಾದಿರಿಸಲಾಗಿದೆ. ಆದರೆ ಆ ಬಳಿಕ ಚುನಾವಣೆ ನೀತಿ ಸಂಹಿತೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಪೆಂಡಿಂಗ್‌ ಆಗಿದೆ. ಇದೀಗ ಟೆಂಡರ್‌ ಕರೆಯದೆಯೇ ಕಾಮಗಾರಿ ನಿರ್ವಹಿಸಬಹುದು ಎಂದು ಸುತ್ತೋಲೆ ಬಂದಿರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ಸಂಬಂಧ ಜಿ.ಪಂ. ಎಂಜಿನಿಯರ್‌ ಭರತ್‌ ಅವರಿಗೆ ದೂರವಾಣಿ ಕರೆಮಾಡಿ ಮಾತನಾಡಿದ ಅಧ್ಯಕ್ಷರು, ಈ ಬಗ್ಗೆ ಎರಡು ದಿನದೊಳಗೆ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಡಿ.ಸಿ. ಮನ್ನಾ ಭೂಮಿ ಕಾದಿರಿಸಿ
ಶಿರಾಡಿ ಗ್ರಾಮದ ಸರ್ವೆ ನಂ.205/3ರಲ್ಲಿ 4.97 ಎಕ್ರೆ ಡಿ.ಸಿ. ಮನ್ನಾ ಭೂಮಿ ಇದೆ. ಆದರೆ ಇದು ಅತಿಕ್ರಮಣಗೊಂಡಿದೆ. ಸದ್ರಿ ಜಮೀನಿನನಲ್ಲಿ ಎಸ್ಸಿಯವರಿಗೆ ಮನೆ ನಿವೇಶನ ಮಂಜೂರುಗೊಳಿಸುವಂತೆ ಕೋರಿ ದಾನಾಜೆ ಕಾಲನಿಯ 10ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿರುವ ಬಗ್ಗೆ ಜಿ.ಪಂ. ಸದಸ್ಯರ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ಡಿ.ಸಿ. ಮನ್ನಾ ಭೂಮಿ ಅತಿಕ್ರಮಣ ಮಾಡಿದರೂ ಅದನ್ನು ಅತಿಕ್ರ ಮಣಕಾರರು ಬಿಟ್ಟುಕೊಡಬೇಕಾಗಿದೆ. ಪರಿ ಶಿಷ್ಟ ಜಾತಿಯವರಿಗೆ ಮನೆ ನಿವೇಶನಕ್ಕೆ ಸದ್ರಿ ಜಮೀನು ಹಂಚಿಕೆ ಮಾಡಿಕೊಡಲು ಅಧಿಕಾರವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರು.

ಉದ್ಯೊಗ ಖಾತ್ರಿ ಯೋಜನೆಗೆ ಸಂಬಂಧಿಸಿ ಹಿಂದೆ ವಿನೋದ್‌ ಎಂಬವರು ಶಿರಾಡಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ಅವರನ್ನು ಇಲ್ಲಿನ ಸದಸ್ಯರೊಬ್ಬರ ಒತ್ತಡದ ಮೇರೆಗೆ ಶಿರಾಡಿ ಗ್ರಾಮದಿಂದ ಬದಲಾಯಿಸಿ ಬೇರೊಬ್ಬರ ನೇಮಕ ಮಾಡಲಾಗಿದೆ. ಆದರೆ ಹೊಸದಾಗಿ ನೇಮಕಗೊಂಡವರು ಸಮಯಕ್ಕೆ ಸರಿಯಾಗಿ ಜಾಗಕ್ಕೆ ಭೇಟಿ ನೀಡದ ಕಾರಣ ಫ‌ಲಾನುಭವಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಜಿ.ಪಂ. ಅಧ್ಯಕ್ಷರಲ್ಲಿ ದೂರಿದರು.

Advertisement

ಶೌಚಾಲಯ ಕಡ್ಡಾಯ
ಗ್ರಾ.ಪಂ.ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಬಂದಿದ್ದರೂ ಆ ಪಂಚಾಯತ್‌ ವ್ಯಾಪ್ತಿಯ ಕೆಲ ಮನೆಗಳಲ್ಲಿ ಶೌಚಾಲಯವಿಲ್ಲದೇ ಇರುವುದು ಗಮನಕ್ಕೆ ಬಂದಿದೆ. ಇದೀಗ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿದೆ. ಆದ್ದರಿಂದ ಶೌಚಾಲಯ ನಿರ್ಮಾಣಕ್ಕೆ ಬಾಕಿ ಇರುವ ಮನೆಗಳ ಪಟ್ಟಿ ನೀಡುವಂತೆ ಜಿಲ್ಲಾ ಪಂಚಾಯತ್‌ನಿಂದ ಗ್ರಾ.ಪಂ.ಗಳಿಗೆ ಸುತ್ತೋಲೆ ಕಳುಹಿಸಿಕೊಡಲಾಗಿದೆ. ಆದ್ದರಿಂದ ಗ್ರಾ.ಪಂ.ಗಳು ಜಿ.ಪಂ.ಗೆ ಸರಿಯಾದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿ ಸಮೀಕ್ಷೆ ವೇಳೆ ಶೌಚಾಲಯವಿಲ್ಲದೆ ಇರುವುದು ಕಂಡುಬಂದಲ್ಲಿ ಪಿಡಿಒಗಳೇ ಹೊಣೆಗಾರರು ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಎಚ್ಚರಿಕೆ ನೀಡಿದರು.

ಗುಂಡ್ಯ: ಜಾಗ ಪರಿಶೀಲನೆ
ಸಭೆಯ ಬಳಿಕ ಅಧ್ಯಕ್ಷರು ಗುಂಡ್ಯಕ್ಕೆ ತೆರಳಿ ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿ ಜಾಗದ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾ.ಪಂ. ಸದಸ್ಯ ಪ್ರಕಾಶ್‌ ಗುಂಡ್ಯ, ಪ್ರಮುಖರಾದ ಕಿಶೋರ್‌ ಶಿರಾಡಿ, ಲಕ್ಷ್ಮಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next