ವಿಜಯಪುರ: ಬುಧವಾರ ಬಸವನಾಡಿನ ಎಲ್ಲೆಡೆ ಭೂದೇವಿ ಮಡಿಲಿಗೆ ಅನ್ನದಾತ-ಅನ್ನದಾತೆಯರು ಉಡಿ ತುಂಬುವ ಸಂಭ್ರಮವೋ ಸಂಭ್ರಮ. ಪ್ರಕೃತಿ ವೈಪರಿತ್ಯದ ಮಧ್ಯೆಯೂ ಜೀವ ಹಿಡಿದಿರುವ ಬೆಳೆಗಳಿಗೆ ಎಳ್ಳ ಅಮಾವಸ್ಯೆ ದಿನ ಚರಗ ಚೆಲ್ಲಿ, ಭೂದೇವಿಗೆ ಉಡಿ ತುಂಬಿ, ಪೂಜೆ ಸಲ್ಲಿಸಿ, ಸಮೃದ್ಧ ಫಲ ಸಿಗಲಿ ಎಂದು ಭೂರಮೆಯನ್ನು ಬೇಡಿಕೊಂಡರು. ಸಾಂಪ್ರದಾಯಿಕ ರೈತರು ಎತ್ತುಗಳ ಚಕ್ಕಡಿ ಕಟ್ಟಿಕೊಂಡು ಹೊಲಕ್ಕೆ ಬಂದರೆ, ಆಧುನಿಕ ಅನ್ನದಾತ ಟ್ರಾಕ್ಟರ್, ಕಾರು, ಟಂಟಂ, ಆಟೋ, ಬೈಕ್‌ಗಳಂಥ ಸಾರಿಗೆ ಸಾಧನಗಳನ್ನು ಬಳಸಿ ಹೊಲದತ್ತ ಮುಖ ಮಾಡಿದ್ದರು. ತಮ್ಮೊಂದಿಗೆ ಹಬ್ಬದ ಸಂಭ್ರಮ ಸವಿಯಲು ಬಂಧುಗಳು, ಸ್ನೇಹಿತರನ್ನೆಲ್ಲ ಹೊಲಕ್ಕೆ ಕರೆದೊಯ್ದು ಎಳ್ಳ ಅಮಾಮಾಸ್ಯೆ ಸಂಭ್ರಮ ಆಚರಿಸಿದರು.
ಪುರುಷರು, ಮಹಿಳೆಯರು, ಮಕ್ಕಳು ಎಂಬ ಭೇದವಿಲ್ಲದೇ ಅಬಾಲ ವೃದ್ಧರು ಕೋವಿಡ್ ಹಾಗೂ ಅತಿವೃಷ್ಟಿ, ಪ್ರವಾಹದ ಸಂಕಷ್ಟಗಳನ್ನೆಲ್ಲ ಮರೆತು ಎಳ್ಳ ಅಮಾಮಾಸ್ಯೆ ಚರಗದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ:ಚರಗ ಚೆಲ್ಲಿ ಭೂತಾಯಿಗೆ ಭಕ್ತಿ ಸಮರ್ಪಣೆ : ರೈತ ಕುಟುಂಬಗಳಿಂದ ಸಡಗರದ ಎಳ್ಳ ಅಮಾವಾಸ್ಯೆ ಆಚರಣೆ
ಎಳ್ಳ ಅಮಾಮಾಸ್ಯೆ ನಿಮಿತ್ತ ಭೂದೇವಿಗೆ ನೈವೇದ್ಯ ನೀಡಲು ಎಳ್ಳು, ಶೇಂಗಾ, ಹೂರಣ ಹೋಳಿಗೆ, ಎಣ್ಣಿ ಹೋಳಿಗೆ ಕರ್ಚಿಕಾಯಿ, ವಿವಿಧ ಬಗೆಯ ಪಾಯಸ, ಜೋಳ-ಸಜ್ಜೆ ಖಡಕ್ ರೊಟ್ಟಿ, ಚಪಾತಿ ರೊಟ್ಟಿ, ಹೆಸರು, ಮಡಿಕೆ, ಕಡಲೆ, ತೊಗರಿ ಕಾಳುಗಳ ಪಲ್ಲೆ, ಬದನೆಕಾಯಿ ಪಲೆÂ ಬೇಳೆ, ಹಾಲು, ಮೊಸರು, ತುಪ್ಪ, ಗುರೆಳ್ಳು ಚಟ್ನಿ, ಅಗಸೆ ಹಿಂಡಿ, ಕಡಲೆ ಚಟ್ನಿ ಪುಡಿ, ಹಸಿ ಮೆಣಸಿನಕಾಯಿ ಚಟ್ನಿ, ಕೆಂಪು ಹಿಂಡಿ, ಮೊಸರನ್ನ, ಚಿತ್ರಾನ್ನ, ಪಲಾವ್ ಅನ್ನ, ಬಿಳಿ ಅನ್ನ-ಸಾಂಬಾರ, ಹಪ್ಪಳ, ಸಂಡಿಗೆ, ಹೀಗೆ ತರೆಹಾವರಿ ಖಾದ್ಯಗಳಿಂದ ಮಾಡಿದ ಎಡೆಯನ್ನು ನೈವೇದ್ಯ ಮಾಡಿ ಹೊಲದಲ್ಲಿನ ಬೆಳೆಗೆ, ಮರಗಳ ಸುತ್ತ ಕಲ್ಲುಗಳನ್ನು ಇರಿಸಿ (ಪಾಂಡವರು-ಕರ್ಣ) ಮೂರ್ತಿ ಮಾಡಿ ಪೂಜೆ ಸಲ್ಲಿಸಿದರು.
ಅನ್ನದಾತರು ಭೂರಮೆಗೆ ಪೂಜೆ ಸಲ್ಲಿಸಿ ನಮಿಸಿದರೆ, ಅನ್ನದಾತೆಯರು ಉಡಿ ತುಂಬಿ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ತಾವು ಮನೆಯಲ್ಲಿ ತಯಾರಿಸಿ ತಂದ ಊಟದ ಎಲ್ಲ ಎಡೆಯನ್ನು ಹೊಲದ ತುಂಬೆಲ್ಲ ಎರಚುತ್ತ “ಹುಲ್ಲುಲ್ಲಿಗೋ, ಚಳ್ಳಂಬ್ರಿಗೋ’ ಎಂದು ಚೆರಗ ಚಲ್ಲಿದ ಅನ್ನದಾತನ ಮಕ್ಕಳು, ಕರಕಿ ಹುಲ್ಲಿನಂತೆ, ಚಳ್ಳಂಬರಿ ಬಳ್ಳಿಯಂತೆ ತನ್ನ ಹೊಲದಲ್ಲಿ ಬೆಳೆದ ಬೆಳೆ ಹುಲುಸಾಗಿ ಬೆಳೆಯಲಿ ಎಂದು ಘೋಷ ಮೊಳಗಿಸುವುದು ಸಾಮಾನವಾಗಿತ್ತು. ನಂತರ ಕುಟುಂಬದವರು, ತಮ್ಮ ಹೊಲಕ್ಕೆ ಬಂದಿದ್ದ ಕುಟುಂಬದ ಆಪೆ¤ಷ್ಟರು, ಸ್ನೇಹಿತರೊಂದಿಗೆ ಚರಗದ ಹಬ್ಬಕ್ಕೆ ಮಾಡಿದ ವಿವಿಧ ಬಗೆ ಖಾದ್ಯದ ಊಟವನ್ನು ಸಾಮೂಹಿಕ ಭೋಜನದ ಮೂಲಕ ಸವಿದರು. ಸಂಜೆ ಸೂರ್ಯ ವಿದಾಯ ಹೇಳುವ ಗೋಧೂಳಿ ಸಂದರ್ಭದಲ್ಲಿ ಭೂದೇವಿಗೆ ಮತ್ತೂಮ್ಮೆ ನಮಿಸಿ ಮನೆಗಳತ್ತ ಹೆಜ್ಜೆ ಹಾಕಿದ್ದರು.