Advertisement

ಹೊಸ ಹುಚ್ಚು: ಹಳೇ ಕಿಚ್ಚು

05:38 PM Apr 06, 2018 | Team Udayavani |

ಯಾರಾದರೂ ತಪ್ಪು ಮಾಡಿದರೆ ಸಾಕು, ಬಡಿಯೋದೇ ಅವನ ಕೆಲಸ. ಮಗನ ಸಾಹಸಗಾಥೆಯನ್ನು ಕೇಳಿ ಅಮ್ಮನಿಗೂ ಸಿಟ್ಟು ಬಂದಿರುತ್ತದೆ. ಅದೇ ಸಿಟ್ಟಿನಲ್ಲಿ, “ಊರಲ್ಲಿ ಯಾರು ತಪ್ಪು ಮಾಡಿದ್ರೂ ಹೊಡೀತೀಯಾ?’ ಅಂತ ಕೇಳುತ್ತಾಳೆ. ಅವನು, “ಹೂಂ’ ಎನ್ನುತ್ತಾನೆ. ಒಂದು ಪಕ್ಷ ತಾನೇ ತಪ್ಪು ಮಾಡಿಬಿಟ್ಟರೆ ಅಂತ ಆಕೆ ಕೇಳಿ ಮುಗಿಸುವುದಕ್ಕಿಂತ ಮುಂಚೆಯೇ, ಸಾಯಿಸಿ ಬಿಡ್ತೀನಿ ಎಂಬ ಉತ್ತರ ಅವನಿಂದ ಉತ್ತರ ಬಂದಿರುತ್ತದೆ.

Advertisement

“ಹುಚ್ಚ 2′ ಅರ್ಧ ಮುಗಿಯುವಷ್ಟರಲ್ಲಿ, ರಾಮ್‌ನ ತಾಯಿಯೇ ಏನಾದರೂ ತಪ್ಪು ಮಾಡಿಬಿಟ್ಟರಾ ಎಂಬ ಪ್ರಶ್ನೆ ಬರುತ್ತದೆ. ಏಕೆಂದರೆ, ಚಿತ್ರ ಓಪನ್‌ ಆಗುವುದೇ ಆ ತಾಯಿಯ ಸಾವಿನೊಂದಿಗೆ. ಸತ್ತು ಬಿದ್ದಿರುವ ತಾಯಿಯ ಪಕ್ಕದಲ್ಲೇ ಮಗನೂ ಮಲಗಿರುತ್ತಾನೆ. ತಾಯಿಯ ಶವದ ಪಕ್ಕದಲ್ಲಿ ಮಗ ಇಡೀ ರಾತ್ರಿ ಮಲಗಿರುವುದನ್ನು ನೋಡಿ, ಇಡೀ ಊರೇ ಅವನನ್ನು ಹುಚ್ಚ ಅಂತ ಕರೆಯುತ್ತದೆ. ಆ ಕೊಲೆಯನ್ನು ಅವನೇ ಮಾಡಿದ್ದಾನೆ ಅಂತ ಪೊಲೀಸರು ಎತ್ತಾಕಿಕೊಂಡು ಹೋಗಿರುತ್ತಾರೆ.

ಅವನು ಯಾಕೆ ಕೊಲೆ ಮಾಡಿರಬಹುದು ಎಂದು ಯಾರಿಗೂ ಗೊತ್ತಿರುವುದಿಲ್ಲ. ಹಾಗಿರುವಾಗಲೇ ಫ್ಲಾಶ್‌ಬ್ಯಾಕ್‌ನಲ್ಲಿ ಅಮ್ಮ-ಮಗನ ನಡುವಿನ ಸಂಭಾಷಣೆ ಬರುವುದು ಮತ್ತು ಆಗಲೇ ಪ್ರೇಕ್ಷಕರಿಗೆ ಅಮ್ಮನ ಮೇಲೆ ಸಂಶಯ ಬರುವುದು. ಕ್ರಮೇಣ, ಹೊಸ ಹೊಸ ವ್ಯಕ್ತಿಗಳು ಬಂದು ಹೊಸ ಹೊಸ ವಿಷಯಗಳನ್ನು ಹೇಳುವಾಗ, ಅಲ್ಲಿ ಬೇರೆ ಇನ್ನೇನೋ ಆಗಿದೆ ಎಂಬ ಸಂಶಯ ಪ್ರೇಕ್ಷಕರಿಗೆ ಬರತೊಡಗುತ್ತದೆ. ಇಷ್ಟಕ್ಕೂ ಆಗಿದ್ದೇನು ಮತ್ತು ತಾಯಿಯನ್ನು ಕೊಂದಿದ್ದು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ “ಹುಚ್ಚ 2′ ನೋಡಬೇಕು.

“ಕಟ್ಟೆ’ ಚಿತ್ರದ ನಂತರ ಮಾಯವಾಗಿದ್ದ ಓಂಪ್ರಕಾಶ್‌ ರಾವ್‌, ಈಗ ತಾಯಿ-ಮಗನ ಸೆಂಟಿಮೆಂಟ್‌ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ತಾಯಿ-ಮಗನ ಸೆಂಟಿಮೆಂಟ್‌ ಅವರಿಗೆ ಹೊಸದೇನಲ್ಲ. ಈ ಹಿಂದೆ ಅವರ ನಿರ್ದೇಶನದ ಕೆಲವು ಚಿತ್ರಗಳಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಇತ್ತು. ಆದರೆ, ಅದನ್ನು ಮೀರಿಸುವಂತೆ ಆ್ಯಕ್ಷನ್‌ ಇರುತಿತ್ತು. ಆದರೆ, ಇಲ್ಲಿ ತಾಯಿ-ಮಗನ ಸೆಂಟಿಮೆಂಟ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ ಮತ್ತು ಆ್ಯಕ್ಷನ್‌ಗೆ ಎರಡನೆಯ ಸ್ಥಾನ ನೀಡಲಾಗಿದೆ.

ಕಾರಣ ಇದು ತಮಿಳಿನ “ರಾಮ್‌’ ಎನ್ನುವ ಚಿತ್ರದ ರೀಮೇಕ್‌. ಸುಮಾರು 13 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ ಓಂಪ್ರಕಾಶ್‌ ರಾವ್‌. ಅದನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆರಂಭದಲ್ಲಿ ಒಂದು ಕೊಲೆಯಾಗುತ್ತದೆ ಮತ್ತು ನಾಯಕ ತನ್ನ ತಾಯಿಯನ್ನು ಕೊಲೆ ಮಾಡಿದವರನ್ನು ಕೊಲೆ ಮಾಡುವ ಮೂಲಕ ಮೂಲಕ ಚಿತ್ರ ಮುಗಿಯುತ್ತದೆ. ಮಧ್ಯೆ ಫ್ಲಾಶ್‌ಬ್ಯಾಕ್‌ನಲ್ಲಿ ಸುಮ್ಮನೆ ಕಥೆ ಹೇಳುವ ಬದಲು, ಒಂದಿಷ್ಟು ಪಾತ್ರಗಳಿಂದ ಚಿತ್ರದ ಕಥೆ ಹೇಳಿಸುವ ಕೆಲಸ ಮಾಡಿಸಿದ್ದಾರೆ ಓಂಪ್ರಕಾಶ್‌ ರಾವ್‌.

Advertisement

ಆ ಅಂಶ ಪ್ರೇಕ್ಷಕರ ಗಮನಸೆಳೆಯುವುದು ಬಿಟ್ಟರೆ, ಮಿಕ್ಕಂತೆ ಕಥೆ ಅಥವಾ ನಿರೂಪಣೆಯಲ್ಲಿ ವಿಶೇಷವಾದುದ್ದೇನೂ ಇಲ್ಲ. ಹಾಗೆ ನೋಡಿದರೆ, ದ್ವಿತೀಯಾರ್ಧದಲ್ಲಿ ಓಂಪ್ರಕಾಶ್‌ ಅಭಿನಯದ ಒಂದಿಷ್ಟು ಕಾಮಿಡಿ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತಿತ್ತು. ತುಂಬಾ ಗಂಭೀರವಾಗಿ ಮತ್ತು ಕುತೂಹಲಭರಿತವಾಗಿ ನೋಡಿಸಿಕೊಂಡು ಹೋಗುವ ದೃಶ್ಯಗಳ ಮಧ್ಯೆ ಕಾಮಿಡಿ ಬೇಕಾಗಿರಲಿಲ್ಲ.

ಈ ತರಹದ ಒಂದಿಷ್ಟು ವಿಷಯಗಳನ್ನು ಬಿಟ್ಟರೆ, “ಹುಚ್ಚ 2′ ಚಿತ್ರದಲ್ಲಿ ನೆಗೆಟಿವ್‌ ಅಂಶಗಳು ಸಿಗುವುದು ಕಡಿಮೆಯೇ. ಇನ್ನು ಪಾಸಿಟಿವ್‌ ಎನ್ನುವಂತಹ ಅಂಶಗಳು ಎಂದರೆ ಕೃಷ್ಣ, ಮಾಳವಿಕಾ, ಸಾಯಿಕುಮಾರ್‌ ಮತ್ತು ಅವಿನಾಶ್‌ ಅವರ ಅಭಿನಯ, ಅನೂಪ್‌ ಸೀಳಿನ್‌ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ರವಿಕುಮಾರ್‌ ಅವರ ಛಾಯಾಗ್ರಹಣ, ಎಂ.ಎಸ್‌. ರಮೇಶ್‌ ಅವರ ಸಂಭಾಷಣೆಗಳು ಗಮನ ಸೆಳೆಯುತ್ತವೆ.

ಚಿತ್ರ: ಹುಚ್ಚ 2
ನಿರ್ಮಾಣ: ಉಮೇಶ್‌ ರೆಡ್ಡಿ
ನಿರ್ದೇಶನ: ಓಂಪ್ರಕಾಶ್‌ ರಾವ್‌
ತಾರಾಗಣ: ಕೃಷ್ಣ, ಶ್ರಾವ್ಯ, ಮಾಳವಿಕ, ಅವಿನಾಶ್‌, ಸಾಯಿಕುಮಾರ್‌, ಓಂಪ್ರಕಾಶ್‌ ರಾವ್‌, ಶ್ರೀನಿವಾಸಮೂರ್ತಿ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next