Advertisement

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

03:47 PM Feb 28, 2021 | Team Udayavani |

ಬಾಗಲಕೋಟೆ: ಚಾಲುಕ್ಯ ಅರಸರ ಕಾಲದ ಅದ್ಭುತ ತಾಣಗಳ ಮೂಲಕ ವಿಶ್ವದ ಗಮನ ಸೆಳೆದ ಬಾದಾಮಿಯ ಮೇಣಬಸದಿ, ಅಗಸ್ತÂತೀರ್ಥ ಹೊಂಡದ ಸುತ್ತಲಿನ ಪರಿಸರದ ಮೂಲಕ ಕಳೆಗುಂದಿದ ವಾತಾವರಣಕ್ಕೆ ಇನ್ನು= ಮುಕ್ತಿ ಸಿಗಲಿದೆ. ಬಾದಾಮಿಯ ಪ್ರವಾಸಿ ತಾಣಗಳಿಗೆ ಶೀಘ್ರವೇ ಹೊಸ ಮೆರಗು ಬರಲಿದೆ.

Advertisement

ಹೌದು. ಬಾದಾಮಿ ಅಗಸ್ತ್ಯತೀರ್ಥ ಹೊಂಡದ ಮೇಲಿನ 96 ಮನೆಗಳ ಸ್ಥಳಾಂತರ ಸಮಸ್ಯೆ 40 ವರ್ಷಗಳ ಹಳೆಯದು. ಇಲ್ಲಿನ ಮನೆಗಳು ಹಾಗೂ ತಟಕೋಟೆ ಗ್ರಾಮ ಸ್ಥಳಾಂತರಿಸುವ ಮೂಲಕ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ ಬೇಡಿಕೆ ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಇದಕ್ಕಾಗಿ ಅಧಿಕಾರಿಗಳು, ಹೆಚ್ಚಿನ ಅನುದಾನ ಬರಲೆಂದು ಮಾಡಿದ ಪ್ರಭಾವದ ಕಾರ್ಯದಿಂದ ಅದು ಯಶಸ್ವಿಯಾಗಿರಲಿಲ್ಲ. ಇದೀಗ ಐಎಎಸ್‌ ತರಬೇತಿ ಅಧಿಕಾರಿಯೊಬ್ಬರ ದಿಟ್ಟ ಕ್ರಮದಿಂದ ಈ ಸಮಸ್ಯೆಗೆ ಕೇವಲ 40 ದಿನಗಳಲ್ಲಿ ಮುಕ್ತಿ ಸಿಕ್ಕಿದೆ. ಜತೆಗೆ ಸರ್ಕಾರಕ್ಕೆ 30 ಕೋಟಿ ರೂ. ಅನುದಾನವೂ ಉಳಿತಾಯವಾಗಿದೆ.

ಏನಿದು 40 ವರ್ಷಗಳ ಸಮಸ್ಯೆ: ಬಾದಾಮಿಯ ಹೊಂಡದ ಸುತ್ತಲಿನ ಜಾಗೆ ಸರ್ಕಾರಕ್ಕೆ ಸೇರಿದೆ. ಆದರೆ ಈ ಹೊಂಡದ ಮೇಲೆ 40 ವರ್ಷಗಳ ಹಿಂದೆಯೇ ಸುಮಾರು 96 ಜನರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು, ಇದರಿಂದ ಪ್ರವಾಸಿ ತಾಣಗಳ ಅಂದವೂ ಕೆಟ್ಟಿತ್ತು. ಇತ್ತ ಮನೆಗಳ ಸ್ಥಳಾಂತರ ಮಾಡದೇ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಸಮಸ್ಯೆಯಾಗಿತ್ತು. ಈ ಕುರಿತು 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಈ ಮನೆಗಳ ಸ್ಥಳಾಂತರಕ್ಕೆ 2.25 ಕೋಟಿ ರೂ. ಅನುದಾನ ಕೊಟ್ಟಿತ್ತು. ಆದರೆ ಅದು ಸಾಕಾರಗೊಂಡಿರಲಿಲ್ಲ.

ಪುನಃ 2018ರಲ್ಲಿ ಹೊಂಡದ ಸುತ್ತಲಿನ ಮನೆಗಳು, ಅಲ್ಲಿನ ಜಾಗೆ ಸ್ವಾಧೀನಪಡಿಸಿಕೊಂಡು ಪ್ರವಾಸಿ ತಾಣಗಳಿಗೆ ಮೆರಗು ಕಲ್ಪಿಸಲು 36 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರದ ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ)ಗೆ ಕಳುಹಿಸಲಾಗಿತ್ತು. ಸರ್ಕಾರದ ಜಾಗೆಯನ್ನೇ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಯೋಜನೆ ಇದಾಗಿದ್ದರಿಂದ ಅದಕ್ಕೆ ಅನುಮೋದನೆ ಸಿಗಲಿಲ್ಲ. ಹೀಗಾಗಿ ಯೋಜನೆ ಕುಂಠಿತಗೊಂಡಿತ್ತು. ಕಳೆದ ಆಗಸ್ಟ್‌ನಲ್ಲಿ ಜಿಲ್ಲೆಗೆ ಆಗಮಿಸಿದ ತರಬೇತಿ ಐಎಎಸ್‌ ಅಧಿಕಾರಿ ಯಶವಂತ ಗುರುಕಾರ, ಈ ಯೋಜನೆಗಾಗಿ ನೋಡಲ್‌ ಅಧಿಕಾರಿಯಾಗಿ ನೇಮಕಗೊಂಡರು. ಇಡೀ ಸಮಸ್ಯೆಯ ಆಳವನ್ನರಿತ ಅವರು ಸರ್ಕಾರಿ ಜಾಗೆಯನ್ನು ಸರ್ಕಾರವೇ ಸ್ವಾಧೀನಪಡಿಸಿಕೊಳ್ಳಬೇಕಾ, ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವೇನಿದೆ. ಅಲ್ಲಿರುವ 96 ಮನೆಗಳೂ ಸರ್ಕಾರಿ ಜಾಗೆ ಅತಿಕ್ರಮಣ ಮಾಡಿಕೊಂಡು ಕಟ್ಟಿಕೊಂಡರು. ಸರ್ಕಾರದ ನಿಯಮಾನುಸಾರ 30 ವರ್ಷ ಮೇಲ್ಪಟ್ಟು ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದರೆ ಅವರಿಗೆ ಪುನರ್ವಸತಿ ಮಾತ್ರ ಕಲ್ಪಿಸಬೇಕೆಂದಿದೆ. ಹೀಗಾಗಿ ಅಲ್ಲಿದ್ದ 96 ಮನೆಗಳಿಗೂ ನೋಟಿಸ್‌ ನೀಡಿ, ಸರ್ಕಾರಿ ಜಾಗೆ ಖಾಲಿ ಮಾಡಿ, ನಿಮಗೆ ಪ್ರತ್ಯೇಕ ಪುನರ್ವಸತಿ ಕಲ್ಪಿಸುವುದಾಗಿ ಸೂಚನೆ ನೀಡಿದರು.

ಈ ವಿಷಯದಲ್ಲಿ ಹಲವು ಒತ್ತಡ ಬಂದರೂ ಅಧಿಕಾರಿ ಹಿಂಜರಿಯಲಿಲ್ಲ. ಅದರ ಫಲವಾಗಿ 36ಕೋಟಿ ರೂ. ಯೋಜನೆ ಇದೀಗ ಕೇವಲ 9.16 ಕೋಟಿ ರೂ.ಗೆ ಪೂರ್ಣಗೊಳ್ಳಲಿದೆ. ಇತ್ತ ಬಾದಾಮಿಯ ಪ್ರವಾಸಿ ತಾಣಗಳಿಗೆ ಮೆರಗೂ ಬರಲಿದೆ. 6.16 ಕೋಟಿ ರೂ.ಯೋಜನೆಗೆ ಅನುಮತಿ: ಅಗಸ್ತ್ಯತೀರ್ಥ ಹೊಂಡದ ಮೇಲಿನ 96 ಮನೆಯ ವಾಸಿಗಳಿಗೆ ಬಾದಾಮಿ ಪಟ್ಟಣದಲ್ಲಿ ತಲಾ 50 ಲಕ್ಷರೂ.ನಂತೆ 3ಎಕರೆ ಭೂಮಿ ಖರೀದಿಸಿ 1.50 ಕೋಟಿ, ಅಲ್ಲಿ ಲೇಔಟ್‌ ನಿರ್ಮಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು 1.20 ಕೋಟಿ, 96 ಮನೆಗಳನ್ನು ನೆಲಸಮಗೊಳಿಸಿಸ್ಥಳಾಂತರಕ್ಕೆ 8 ಲಕ್ಷ ಸೇರಿ ಒಟ್ಟು 6.16 ಕೋಟಿ ಮೊತ್ತದ ಯೋಜನೆ ಹಾಕಿಕೊಳ್ಳಲಾಗಿದೆ. ಹೊಂಡದ ಮೇಲಿನ 96 ಮನೆಗಳ ನೆಲಸಮ ಕಾರ್ಯ 15 ದಿನಗಳಲ್ಲಿ ಆರಂಭಗೊಳ್ಳಲಿದ್ದು, ಕೇಂದ್ರದ ಭಾರತೀಯ ಪುರಾತತ್ವ ಇಲಾಖೆಗೆ ಇದಕ್ಕಾಗಿ ಒಟ್ಟು 6.16 ಕೋಟಿ ಅನುದಾನ ನೀಡಿದೆ.

Advertisement

ಬಾದಾಮಿ ಹೊಂಡದ ಮೇಲಿನ ಅತಿಕ್ರಮಣ ಮನೆಗಳ ಕುರಿತು 1964 ದಾಖಲೆ ಪರಿಶೀಲಿಸಿದ್ದು, 96 ಮನೆಗಳು ಸರ್ಕಾರಿ ಜಾಗೆಯಲ್ಲಿ ನಿರ್ಮಾಣಗೊಂಡಿವೆ. ಆ ಜಾಗೆ ಭೂಸ್ವಾಧೀನ, ಮನೆಗಳಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು 36 ಕೋಟಿ ರೂ.ಪ್ರಸ್ತಾವನೆ ಕೇಂದ್ರಕ್ಕೆ ಹೋಗಿತ್ತು. ಆದರೆ, ವಾಸ್ತವದಲ್ಲಿ ಭೂಸ್ವಾಧೀನ ಅಗತ್ಯವಿಲ್ಲ. ನಿಯಮಾನುಸಾರ ಅತಿಕ್ರಮಣದಾರರಿಗೆ ಪುನರ್ವಸತಿ ಹಾಗೂ ಶೇ.30 ಕಟ್ಟಿದ ಮನೆಗಳಿಗೆ ಪರಿಹಾರ ಕೊಡಬಹುದು. ಇದೆಲ್ಲವನ್ನೂ ಅಧ್ಯಯನ ಮಾಡಿ 40 ವರ್ಷಗಳ ಈ ಸಮಸ್ಯೆಗೆ ಮುಕ್ತಿ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ 30 ಕೋಟಿ ರೂ. ಉಳಿತಾಯವಾಗಲಿದ್ದು, ಅದ್ಭುತ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಇದ್ದ ತೊಡಕು ನಿವಾರಣೆಯಾಗಿದೆ. –ಯಶವಂತ ಗುರುಕಾರ, ತರಬೇತಿ ಐಎಎಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next