ಕಾಶಿನಾಥ್ ಪುತ್ರ ಅಭಿಮನ್ಯು ಹೊಸ ಚಿತ್ರ ಒಪ್ಪಿಕೊಂಡಿದ್ದು ಗೊತ್ತೇ ಇದೆ. “ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಈಗ ಶೇ.60 ರಷ್ಟು ಮುಗಿದಿದ್ದು, ಇನ್ನು ಶೇ.40ರಷ್ಟು ಚಿತ್ರೀಕರಣಗೊಂಡರೆ ಚಿತ್ರೀಕರಣ ಮುಗಿಯಲಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಹೊರಬಂದಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಹಿಂದೆ ಉಪೇಂದ್ರ ಅವರು ತಮ್ಮ ಗುರು ಕಾಶಿನಾಥ್ ಅವರ ಪುತ್ರ ಎಂಬ ಕಾರಣಕ್ಕೆ ಪ್ರೀತಿಯಿಂದಲೇ ಟೈಟಲ್ ಲಾಂಚ್ ಮಾಡಿದ್ದರು.
ಕಿರಣ್ ಸೂರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ದರ್ಶನ ಆರ್ಟ್ ಬ್ಯಾನರ್‌ನಲ್ಲಿ ನಂದೀಶ್ ಗೌಡ ಮತ್ತು ಜಿತಿನ್ ಜಿ.ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಒಂದು ಹಂತದ ಚಿತ್ರೀಕರಣ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡುವ ಸಮಯದಲ್ಲೇ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದಾಗಿ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ.
ಚಿತ್ರದಲ್ಲಿ ಹೊಸ ವಿಷಯ ಹೇಳಹೊರಟಿರುವ ನಿರ್ದೇಶಕರು, ಮಿಸ್ಟ್ರಿ ಹಾಗು ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಅಭಿಮನ್ಯು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದನೆಯ ಕೂದಲು ಹಾಗು ಗಡ್ಡ ಬಿಟ್ಟು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅದೊಂದು ವಿಶೇಷ ಪಾತ್ರ ಎಂಬುದು ಅವರ ಮಾತು. ಚಿತ್ರದಲ್ಲಿ ಗಣೇಶ್ ಕಾಸರಗೋಡು ಅವರು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಗಣೇಶ್ ನಾರಾಯಣನ್ ಸಂಗೀತವಿದೆ. ಉಳಿದಂತೆ ಸಿ.ರವಿಚಂದ್ರನ್, ಗಣೇಶ್,ಗೌತಮ್ ಮನು, ರವಿಕುಮಾರ್, ವಿನೋದ್‌ಕುಮಾರ್, ರಮೇಶ್ ನಾಯಕ್, ವಿಶ್ವಾಸ್, ರೇಣುಕ ಪ್ರಕಾಶ್ ಇತರರು ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ ಸಡಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೆ ಶೂಟಿಂಗ್‌ಗೆ ಹೋಗುವ ಯೋಚನೆ ನಿರ್ದೇಶಕ ಕಿರಣ್ ಸೂರ್ಯ ಅವರಿಗಿದೆ.