Advertisement

ನೂತನ ಕೈಗಾರಿಕಾ ನೀತಿ: ಉದ್ಯಮಿಗಳಿಗೆ ಆಗಲಿದೆ ಅನುಕೂಲ

11:57 AM Jun 20, 2020 | Suhan S |

ಕಾರವಾರ: ನೂತನ ಕೈಗಾರಿಕಾ ನೀತಿ ರೂಪಿಸಲಾಗುತ್ತಿದ್ದು, ಉದ್ಯಮಿಗಳಿಗೆ ಕೈಗಾರಿಕೆ ಸ್ಥಾಪಿಸಲು ಇರುವ ಅಡೆ ತಡೆಗಳು ನಿವಾರಣೆಯಾಗಲಿವೆ ಹಾಗೂ ಉತ್ತರ ಕರ್ನಾಟಕ, ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನೆರವಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

Advertisement

ಕಾರವಾರದಲ್ಲಿ ಕೈಗಾರಿಕಾ ಇಲಾಖೆಯ ಹಾಗೂ ಬಂದರು ಸಂಬಂಧಿತ ಪ್ರದೇಶದ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸುಧಾರಣೆ ಕಾಯ್ದೆಗೆ ಈಚೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿ ಮಾಡಬೇಕೆನ್ನುವ ಶ್ರೀಮಂತರಿಗೆ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ  ನೆರವಾಗಲಿದೆ ಎಂದ ಅವರು, ಸಣ್ಣ ರೈತರ ಭೂಮಿಯನ್ನು ಶ್ರೀಮಂತರು ಖರೀದಿಸಲಿದ್ದಾರೆ ಎಂಬ ಭಯ ಬೇಡ. 1966ರಿಂದ ನಮ್ಮಲ್ಲಿದ್ದ ಭೂ ಸುಧಾರಣಾ ಕಾಯ್ದೆಯಿಂದ 25 ಲಕ್ಷಕ್ಕಿಂತ ಹೆಚ್ಚು ವರಮಾನ ಇದ್ದವರು ಕೃಷಿ ಭೂಮಿ ಖರೀದಿಸಲಾಗುತ್ತಿರಲಿಲ್ಲ. ಇದರಿಂದ ಕೃಷಿಯೂ ಅಭಿವೃದ್ಧಿಯಾಗಲಿಲ್ಲ. ಕೈಗಾರಿಕೆಗಳು ಸಹ ಬರಲಿಲ್ಲ. 1966ರಿಂದ 2020ರ ತನಕ ಕೃಷಿಭೂಮಿಯಲ್ಲಿ 65 ಸಾವಿರ ಎಕರೆ ಮಾತ್ರ ವಿವಿಧ ಕೃಷಿಯೇತರ ಚಟುವಟಿಕೆಗೆ ಬಳಕೆಯಾಗಿದೆ. ಭೂ ಸುಧಾರಣೆ ಕಾಯ್ದೆ 70, 71(ಎ) ಹಾಗೂ 80ನ್ನು ಉಲ್ಲಂಘಿಸಿ ಭೂಮಿ ಖರೀದಿಸಿದ ಪ್ರಕರಣಗಳಲ್ಲಿ 55 ಸಾವಿರ ಎಕರೆ ಭೂಮಿ ಇದೆ. ಇದರಲ್ಲಿ ಸರ್ಕಾರದ ಅಧಿಕಾರಿಗಳು ನೋಟಿಸ್‌ ನೀಡಿ ವಶಕ್ಕೆ ಪಡೆದದ್ದು 55 ಎಕರೆ ಭೂಮಿ ಮಾತ್ರ. ಅದು ಸಹ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಯಾವುದೇ ಸರ್ಕಾರಗಳಿರಲಿ, ಭೂಮಿ, ಭೂ ಸುಧಾರಣೆಯ ವಿಷಯದಲ್ಲಿ ರೈತರ ಹಿತಕಾದಿವೆ ಎಂಬುದು ಪ್ರಯೋಜನಕಾರಿಯಾಗಿಲ್ಲ. ಈಗ ತಂದ ಕಾಯ್ದೆಯಿಂದ ರೈತರ ಭೂಮಿಗೆ ಹೆಚ್ಚಿನ ಬೆಲೆ ಬರಲಿದೆ. ಶ್ರೀಮಂತರು 104 ಎಕರೆಗಿಂತ ಹೆಚ್ಚಿನ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮವೂ ಇದೆ. ಹಾಗಾಗಿ ಕೃಷಿ ಭೂಮಿಗೆ, ಕೃಷಿಕರಿಗೆ ಯಾವುದೇ ತೊಂದರೆಯಿಲ್ಲ ಎಂದು ಸಚಿವ ಶೆಟ್ಟರ್‌ ವಿವರಿಸಿದರು.

1966ರಲ್ಲಿ ಬಂದ ಭೂ ಸುಧಾರಣಾ ಕಾಯ್ದೆ ಜನಪರವಾಗಿರಲಿಲ್ಲ, ಅಭಿವೃದ್ಧಿಪರ ವಾಗಿರಲಿಲ್ಲ. 1966-2020ರ ಅವಧಿಯಲ್ಲಿ ಯಾರೇ ಅಧಿಕಾರದಲ್ಲಿರಲಿ, ಕಾಂಗ್ರೆಸ್‌ ಅಥವಾ ಬಿಜೆಪಿ ಭೂ ಸುಧಾರಣಾ ಕಾಯ್ದೆಯನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಅಂದಿನ ಕಾನೂನು ಪ್ರಮಾಣಿಕವಾಗಿ ಅನುಷ್ಠಾನವೂ ಆಗಿರಲಿಲ್ಲ. ಅದರಿಂದ ನಾಡಿನ ಅಭಿವೃದ್ಧಿಗೆ ಪೂರಕವೂ ಆಗಿರಲಿಲ್ಲ, ಈಗ ಸರ್ಕಾರ ತರಲು ಹೊರಟಿರುವ ಕಾಯ್ದೆ ಉದ್ಯಮಿಗಳಿಗೆ ನೆರವಾಗಲಿದೆ ಎಂದರು.

ಏಕಗಾವಕ್ಷಿಯಲ್ಲಿ ಪರವಾನಿಗೆ ಸಹ ಸರಳವಾಗಲಿದೆ. ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವವರಿಗೆ 3 ದಿನದಲ್ಲಿ ಫಲಿತಾಂಶ ಸಿಗಬೇಕು. ಹಾಗೆ ನೂತನ ಕೈಗಾರಿಕಾ ನೀತಿ ಇರಲಿದೆ. ಅಲ್ಲದೇ ಧಾರಣೆ ಕಾಯ್ದೆ 70, 71(ಎ) ಹಾಗೂ 80ನ್ನು ಸಹ ರದ್ದು ಮಾಡಲಾಗುವುದು ಎಂದರು. ಈಗ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ಜಾರಿಯಲ್ಲಿದೆ. ಹಾಗಾಗಿ ಅವರು ಕೃಷಿ ಮತ್ತು ಕೈಗಾರಿಕೆಗಳಲ್ಲಿ ಅಭಿವೃದ್ಧಿಯತ್ತ ಸಾಗಿದ್ದಾರೆ. ನಮ್ಮಲ್ಲಿ ಸಹ ಮುಂದೆ 2 ಮತ್ತು 3ನೇ ದರ್ಜೆ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ. ಕರಾವಳಿಯಲ್ಲಿ ಸಹ ಎರಡು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆಸಕ್ತಿ ಇದ್ದು, ಇದಕ್ಕೆ ಪೂರ್ವ ತಯಾರಿ ನಡೆದಿದೆ ಎಂದರು. ಬೇಲೇಕೇರಿ ಬಂದರು ಅಭಿವೃದ್ಧಿಗೆ ಪಿಪಿಪಿ ಮಾಡೆಲ್‌ನಲ್ಲಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಜೆಟ್‌ನಲ್ಲಿ ಬಂದರು ಅಭಿವೃದ್ಧಿ ಘೋಷಿಸಲಾಗಿದೆ. ಸಚಿವ ಸಂಪುಟದ ಮುಂದೆ ಈ ಸಂಗತಿ ಬರಲಿದೆ. ಅಲ್ಲದೇ ವಿಮಾನ ನಿಲ್ದಾಣ ಸ್ಥಾಪನೆಗೆ ಬೇಕಾದ ನೆರವನ್ನು ನೇವಿ ಜೊತೆ ಮಾತುಕತೆ ಮಾಡಿ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಸೀಬರ್ಡ್‌ 2ನೇ ಹಂತ ಮುಗಿದಾಗ 1.60 ಲಕ್ಷ ಜನಸಂಖ್ಯೆ ಹೆಚ್ಚಲಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ಕಾರ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಅಲ್ಲದೇ ನ್ಯಾಯಾಲಯದ ಎದುರು ಸಮರ್ಥವಾಗಿ ಸರ್ಕಾರ ವಾದಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next