Advertisement
ಕೇಂದ್ರ- ರಾಜ್ಯ ಹಾಗೂ ಮನಪಾ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಪುರಭವನದ ಮುಂಭಾಗದಿಂದ ರೈಲ್ವೇ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್ ನಿರ್ಮಾಣಕ್ಕೆ ಅಂದಾಜು ಪರಿಕಲ್ಪನೆ ನಡೆಸುವಂತೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸ್ಮಾರ್ಟ್‌ಸಿಟಿ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
Related Articles
ಸ್ಮಾರ್ಟ್ ಸಿಟಿ ಯೋಜನೆಯಡಿ ಎ.ಬಿ. ಶೆಟ್ಟಿ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗಿನ ರಸ್ತೆಯನ್ನು ‘ಸ್ಮಾರ್ಟ್ ರೋಡ್’ ಆಗಿ ಪರಿವರ್ತಿಸಲು ಎಸ್‌ಪಿವಿ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಮಂಗಳೂರಿನ ರಸ್ತೆಯೊಂದು ಸುಸಜ್ಜಿತವಾಗಿ ಸ್ಮಾರ್ಟ್ ರೋಡ್ ಆಗಿ ಪರಿವರ್ತನೆಗೊಳ್ಳಲಿದೆ. ಇದೇ ರಸ್ತೆಗೆ ಸಂಪರ್ಕ ಕಲ್ಪಿಸಿರುವ ರೈಲ್ವೇ ನಿಲ್ದಾಣ ರಸ್ತೆಯಿಂದ ಪುರಭವನದ ಭಾಗಕ್ಕೆ ಪಾದಾಚಾರಿಗಳು ರಸ್ತೆ ದಾಟಿ ಸಾಗಬೇಕಿದೆ. ಮುಂದೆ ಸ್ಮಾರ್ಟ್ ರಸ್ತೆ ಆಗುವ ರಸ್ತೆ ಯಲ್ಲಿ ಪಾದಾಚಾರಿಗಳು ಸಮಸ್ಯೆ ಅನುಭವಿಸಬಾರದು ಎಂಬ ಕಾರಣದಿಂದ ಅಂಡರ್ ಪಾಸ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
Advertisement
ವಿಶೇಷವೆಂದರೆ, ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳುವ ಇದೇ ರಸ್ತೆಯಲ್ಲಿ ಪಾದಾಚಾರಿಗಳಿಗೆ ನೆರವಾಗಲು ಸ್ಕೈವಾಕ್ ನಿರ್ಮಿಸುವ ಬಗ್ಗೆ ಹಿಂದೊಮ್ಮೆ ಚರ್ಚೆ ನಡೆದು, ಶಿಲಾನ್ಯಾಸವೂ ನಡೆದಿತ್ತು. ಆದರೆ, ಈ ಕಾಮಗಾರಿ ನಡೆಸಲು ಮಾತ್ರ ಮಹಾನಗರ ಪಾಲಿಕೆ ಮರೆತುಬಿಟ್ಟಂತಿದೆ!
ಶಿಲಾನ್ಯಾಸ ಮಾತ್ರ; ಕಾಮಗಾರಿ ಇಲ್ಲ!ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಮಂಗಳೂರಿನ ಪುರಭವನದ ಬಳಿಯಲ್ಲಿ ಹೊಸದಾಗಿ ಸ್ಕೈವಾಕ್ (ಮೇಲ್ಸೇತುವೆ) ನಿರ್ಮಾಣಕ್ಕೆ 2016ನೇ ಆ.23ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಸುಮಾರು 1.57 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಈ ಕಾಮಗಾರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 78 ಲಕ್ಷ ರೂ., ನಗರಾಭಿವೃದ್ಧಿ ಇಲಾಖೆಯಿಂದ 71 ಲಕ್ಷ ರೂ., ಹಾಗೂ ಮಂಗಳೂರು ಪಾಲಿಕೆಯಿಂದ 7 ಲಕ್ಷ ರೂ. ಅನುದಾನದ ಬಗ್ಗೆಯೂ ಅಂದು ಉಲ್ಲೇಖೀಸಲಾಗಿತ್ತು. ರೈಲ್ವೇ ನಿಲ್ದಾಣದಿಂದ ನಗರಕ್ಕೆ ಬರುವ
ಜನರು ರಸ್ತೆ ದಾಟಲು ಹಾಗೂ ರಸ್ತೆ ಬದಿಯಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ 100 ಅಡಿ ಉದ್ದದಲ್ಲಿ ಎಸ್ಕಲೇಟರ್ ಸ್ಕೈವಾಕ್ ಅನುಕೂಲವಾಗಲಿದೆ ಎಂದು ಅಂದು ಜನ ಪ್ರತಿನಿಧಿಗಳು ಹೇಳಿಕೆ ನೀಡಿದ್ದರು. ಹಗಲು ಹೊತ್ತು ಈ ರಸ್ತೆಯಲ್ಲಿ ವಾಹನದಟ್ಟಣೆ ಇರುವುದರಿಂದ ರಾತ್ರಿ ಸಮಯದಲ್ಲಿಯೇ ಕಾಮಗಾರಿ ನಡೆಸಿ, 10 ತಿಂಗಳ ಒಳಗೆ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇವೆಲ್ಲವೂ ಅಂದಿನ ಶಿಲಾನ್ಯಾಸದಂದೇ ಮರೆತು ಹೋದಂತಿದೆ! ಸವಾಲಿನ ಕೆಲಸ
ಸದಾ ವಾಹನಗಳಿಂದ ಗಿಜಿಗುಡುತ್ತಿರುವ ಮಂಗಳೂರಿನ ಹಂಪನಕಟ್ಟದ ಕ್ಲಾಕ್ ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ರಸ್ತೆಯಲ್ಲಿ ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳುವುದಾದರೆ, ಅದು ಸವಾಲಿನ ಕೆಲಸ. ಸ್ಕೈವಾಕ್‌ನಲ್ಲಿ ನಡೆದುಕೊಂಡು ಹೋಗಲು ಪಾದಾಚಾರಿಗಳಿಗೆ ಸ್ವಲ್ಪ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಅಂಡರ್‌ಪಾಸ್ ಮಾಡಿದರೆ ಉತ್ತಮ. ಈಗಾಗಲೇ ಜಪ್ಪು ಕುಡುಪಾಡಿ ಹಾಗೂ ಬಜಾಲ್‌ನಲ್ಲಿ ವಾಹನ ಸಂಚಾರಕ್ಕೆ ಅನುವಾಗುವ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಹೀಗಾಗಿ ಪಾದಾಚಾರಿಗಳಿಗೆ ಅನುವಾಗುವ ಚಿಕ್ಕ ಅಂಡರ್‌ಪಾಸ್ ಪುರಭವನ ಮುಂಭಾಗ ನಿರ್ಮಾಣವಾದರೆ ಉತ್ತಮ ಎಂಬ ಅಭಿಪ್ರಾಯವೂ ಇದೆ. ಬೆಂಗಳೂರಿನಲ್ಲಿ ಅಂಡರ್‌ಪಾಸ್ ಯಶಸ್ವಿಯಾಗಿಲ್ಲ
ಜನಸಂದಣಿ ಹಾಗೂ ವಾಹನ ದಟ್ಟನೆ ಅತಿಹೆಚ್ಚು ಇರುವ ಬೆಂಗಳೂರಿನಂಥ ನಗರದಲ್ಲಿ ಪಾದಚಾರಿಗಳ ಸಂಚಾರಕ್ಕೆ ಅಂಡರ್‌ಪಾಸ್‌ಗಳನ್ನು ಬಿಬಿಎಂಪಿ ನಿರ್ಮಿಸಿದೆ. ಆದರೆ, ಕೆಆರ್ ರಸ್ತೆಯಂಥ ಕಡೆಗಳಲ್ಲಿ ಪಾಲಿಕೆ ನಿರ್ಮಿಸಿದ್ದ ಅಂಡರ್‌ಪಾಸ್ ಗಳನ್ನು ಜನರು ಬಳಸುವುದಕ್ಕೆ ಹಿಂದೇಟು ಹಾಕಿದ್ದಾರೆ. ಏಕೆಂದರೆ, ಮಳೆಗಾಲದಲ್ಲಿ ಅಂಡರ್‌ಪಾಸ್ ಒಳಗೆ ನೀರು ತುಂಬಿಕೊಂಡಿರುತ್ತದೆ. ಅಲ್ಲದೆ, ಕತ್ತಲೆ ಹೊತ್ತು ಕೂಡ ಅಂಡರ್‌ಪಾಸ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಹಿಳೆಯರು, ಕಾಲೇಜು ಹುಡುಗಿಯರು ಅಂಡರ್‌ಪಾಸ್ ಮೂಲಕ ರಸ್ತೆದಾಟುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಭದ್ರತಾ ಸಿಬಂದಿಯನ್ನು ಅಂಡರ್‌ಪಾಸ್ ಕಾವಲಿಗೆ ನಿಯೋಜಿಸಲಾಗಿತ್ತು. ಹೀಗಿರುವಾಗ, ಇಂಥಹ ಅವೈಜ್ಞಾನಿಕ ಮತ್ತು ಪಾದಾಚಾರಿ ಸ್ನೇಹಿಯಲ್ಲದ ಅಂಡರ್‌ಪಾಸ್ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ನಿಟ್ಟಿನಲ್ಲಿ ಅಂಡರ್‌ಪಾಸ್ ಬದಲಿಗೆ ಸ್ಕೈವಾಕ್ ನಿರ್ಮಿಸುವುದೇ ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಅಂದಾಜು ಪರಿಕಲ್ಪನೆ ಬಳಿಕ ಡಿಪಿಆರ್
ಮಂಗಳೂರು ಪುರಭವನ ಮುಂಭಾಗ ಅಂಡರ್‌ಪಾಸ್ ನಿರ್ಮಾಣ ಸಂಬಂಧ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ವಿಶೇಷ ಸಭೆಯಲ್ಲಿ ಪ್ರಸ್ತಾವನೆಗೆ ಬಂದಿದೆ. ಇದರಂತೆ ಈ ಯೋಜನೆಯ ಅಂದಾಜು ಪರಿಕಲ್ಪನೆ (ಕಾನ್ಸೆಪ್ಟ್ ಪ್ಲಾನ್) ನಡೆಸಲು ನಿರ್ಧರಿಸಲಾಗಿದ್ದು, ಬಳಿಕ ಡಿಪಿಆರ್ ಸಿದ್ಧಪಡಿಸಲು ಸಭೆಯಲ್ಲಿ ಅನುಮೋದನೆ ದೊರಕಿದೆ.
– ಮೊಹಮ್ಮದ್ ನಝೀರ್,
ಮನಪಾ ಆಯುಕ್ತರು. ದಿನೇಶ್ ಇರಾ