Advertisement

4 ಎಕರೆ ಪ್ರದೇಶದಲ್ಲಿ ತಾ|ಕಚೇರಿಗಳ ಸಂಕೀರ್ಣ: ಶಾಸಕ ಲಾಲಾಜಿ

10:15 PM Oct 09, 2020 | mahesh |

ಕಾಪು: ಕಾಪು ಪ್ರವಾಸಿ ಬಂಗ್ಲೆ ಆವರಣದ ಸುಮಾರು 4 ಎಕರೆ ಜಮೀನಿನಲ್ಲಿ ಸರಕಾರಿ ಕಚೇರಿಗಳ ಸಮುಚ್ಚಯ ನಿರ್ಮಾಣ ಮಾಡಿ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಕಚೇರಿಗಳು ಇಲ್ಲಿಯೇ ಕಾರ್ಯಚಟುವಟಿಕೆ ನಡೆಸುವಂತೆ ಮಾಡುವ ಉದ್ದೇಶವಿದೆ ಎಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ತಿಳಿಸಿದರು.

Advertisement

ಕಾಪು ಮಿನಿ ವಿಧಾನಸೌಧ ನಿರ್ಮಾಣ ಕುರಿತಂತೆ ಶುಕ್ರವಾರ ಅಧಿಕಾರಿಗಳೊಂದಿಗೆ ಪ್ರವಾಸಿ ಬಂಗ್ಲೆ ಪರಿಸರಕ್ಕೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಕಾಪು ತಾಲೂಕಿಗೆ ಈಗಾಗಲೇ 10 ಕೋ. ರೂ.ವೆಚ್ಚದ ಮಿನಿ ವಿಧಾನ ಸೌಧ ಮಂಜೂರಾಗಿದ್ದು, ಇಲ್ಲಿ ತಹಶೀಲ್ದಾರ್‌ ಕಚೇರಿ ಸಹಿತ 30 ಇಲಾಖೆಗಳು ಕಾರ್ಯಾಚರಿಸಲಿವೆ. ಕರ್ನಾಟಕ ಗೃಹ ಮಂಡಳಿ ಮೂಲಕ ನಿರ್ಮಾಣವಾಗುವ ಯೋಜನೆಗೆ ಪ್ರಾಥಮಿಕ ಹಂತದ 3 ಕೋ. ರೂ. ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.

ಕಾಪು ಮಿನಿ ವಿಧಾನಸೌಧದಲ್ಲಿ ತಾ| ಮ್ಯಾಜಿಸ್ಟ್ರೇಟ್‌ ಕಚೇರಿ, ತಾಲೂಕು ನ್ಯಾಯಾಲಯ ರಚನೆ ಸಹಿತವಾಗಿ ಅಗತ್ಯದ ಕಚೇರಿಗಳ ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಕಾಪು ತಾ.ಪಂ. ಕಚೇರಿ ನಿರ್ಮಾಣವಾಗಲಿದ್ದು, ಜಮೀನು ಮಂಜೂರಾತಿಯಾಗಿದೆ. ಹೊಸ ಸರಕಾರಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಬಂಗ್ಲೆ ಆವರಣದಲ್ಲಿರುವ ವಸತಿ ಗೃಹಗಳನ್ನು ತೆರವು ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಸದಸ್ಯ ರಮೇಶ್‌ ಕೆ. ಪೂಜಾರಿ ಉಳಿಯಾರಗೋಳಿ, ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಕಂದಾಯ ಪರಿವೀಕ್ಷಕ ಕೆ. ರವಿಶಂಕರ್‌, ಗೃಹಮಂಡಳಿ ಎಇಇ ಹರೀಶ್‌, ಗುತ್ತಿಗೆದಾರ ಕೆ. ವಾಸುದೇವ ಶೆಟ್ಟಿ, ವಿನ್ಯಾಸಕ ಯೋಗೀಶ್‌ ಚಂದ್ರಾದರ್‌, ಕಾಪು ಪುರಸಭೆ ಸದಸ್ಯರಾದ ರಮೇಶ್‌ ಹೆಗ್ಡೆ, ಸುರೇಶ್‌ ದೇವಾಡಿಗ ಉಪಸ್ಥಿತರಿದ್ದರು.

ಸರಕಾರಿ ಸಮುಚ್ಚಯದಲ್ಲಿ ಏನೇನಿರಲಿವೆ?
ಕಾಪು ಬಂಗ್ಲೆ ಮೈದಾನದಲ್ಲಿ ಈಗಾಗಲೇ ಪುರಸೌಧ ಕಟ್ಟಡ, ವಿದ್ಯಾರ್ಥಿ- ವಿದ್ಯಾರ್ಥಿನಿಯರ ವಸತಿ ನಿಲಯ, ಕೃಷಿ ಇಲಾಖೆ, ಅರಣ್ಯ ಇಲಾಖೆಯ ಕಚೆೇರಿ, ವಸತಿ ಗೃಹಗಳು ನಿರ್ಮಾಣಗೊಂಡಿವೆ. ಶೀಘ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ. ಮುಂದಿನ ಹಂತದಲ್ಲಿ ತಾಲೂಕು ಪಂಚಾಯತ್‌ ಕಟ್ಟಡ, ಮೆಸ್ಕಾಂ ಕಚೆೇರಿ, ಸುಸಜ್ಜಿತ ತಾಲೂಕು ಪ್ರವಾಸಿ ಬಂಗ್ಲೆ ಸಹಿತ ವಿವಿಧ ಸರಕಾರಿ ಯೋಜನೆಗಳು ಸರಕಾರಿ ವಸತಿ ಸಮುಚ್ಚಯದಲ್ಲಿ ನಿರ್ಮಾಣಗೊಳ್ಳಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next