ಅಹಮದಾಬಾದ್: ಗುಜರಾತ್ ನ ಗಾಂಧಿನಗರದ ರಾಜ್ ಭವನದಲ್ಲಿ ಗುರುವಾರ(ಸೆಪ್ಟೆಂಬರ್ 16) ನಡೆದ ಸರಳ ಸಮಾರಂಭದಲ್ಲಿ ಶಾಸಕರಾದ ನರೇಶ್ ಭಾಯಿ ಪಟೇಲ್, ಹರ್ಷ ಸಾಂಘ್ವಿ, ಮನೀಶ್ ವಕಿಲ್, ಕ್ರಿಸ್ಟಿನಾ ಜಿಟುಭಾ ರಾಣಾ ಸೇರಿದಂತೆ 24 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ಸೆ.17: ಉದಯವಾಣಿ ಕಚೇರಿಗೆ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಭೇಟಿ
ಇತ್ತೀಚೆಗಷ್ಟೇ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಭೂಪೇಂದ್ರ ಪಟೇಲ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಹಿಂದಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಸಂಪುಟದಲ್ಲಿದ್ದ ಹಲವರನ್ನು ಈ ಬಾರಿ ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ.
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಚಿವರ ಪ್ರಮಾಣವಚನ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಜರಿದ್ದರು.
ಇಂದು ಬೆಳಗ್ಗೆ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತೆರವಾದ ಸ್ಪೀಕರ್ ಸ್ಥಾನಕ್ಕೆ ಭುಜ್ ವಿಧಾನಸಭಾ ಕ್ಷೇತ್ರದ ಶಾಸಕಿ ನಿಮಾಬೆನ್ ಆಚಾರ್ಯ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ಸಚಿವರ ಪ್ರಮಾಣವಚನ ಕಾರ್ಯಕ್ರಮ ಬುಧವಾರ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ ರಾಜಭವನದಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಸಚಿವರ ಪ್ರಮಾನವಚನ ಸ್ವೀಕಾರ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.