Advertisement

ಕೋವಿಡ್ ಹೊಸ ಮಾರ್ಗಸೂಚಿ ಬಿಡುಗಡೆ; 10 ದಿನಗಳವರೆಗೆ ಜ್ವರ ಇಲ್ಲದಿದ್ದರೆ ಮತ್ತೆ ಪರೀಕ್ಷೆ ಇಲ್ಲ

09:42 AM May 13, 2020 | Hari Prasad |

ನವದೆಹಲಿ: ಕೋವಿಡ್ ಸೋಂಕಿತ ರೋಗಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Advertisement

ರೋಗ ಲಕ್ಷಣಗಳು ಕಂಡು ಬಂದ ಅಥವಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ ದಿನದಿಂದ 17 ದಿನಗಳು ಪೂರೈಸಿದ ಬಳಿಕ ಕ್ವಾರಂಟೈನ್‌ ಅಂತ್ಯಗೊಳಿಸಬಹುದು. 10 ದಿನಗಳವರೆಗೆ ಜ್ವರ ಇಲ್ಲದಿದ್ದರೆ ಮತ್ತೆ ಪರೀಕ್ಷೆಗೆ ಒಳಪಡಿಸದೆ ಕ್ವಾರಂಟೈನ್‌ ಮುಕ್ತಾಯಗೊಳಿಸಬಹುದು.

ಪೂರ್ವ ರೋಗ ಲಕ್ಷಣ ಅಥವಾ ಸೌಮ್ಯವಾದ ರೋಗ ಲಕ್ಷಣಗಳು ಕಂಡು ಬರುವ ರೋಗಿಗಳು ತಮ್ಮ ಕುಟುಂಬದವರ ಸಂಪರ್ಕವನ್ನು ತಪ್ಪಿಸಲು ತಮ್ಮ ಮನೆಯಲ್ಲಿ ಸ್ವಯಂ ಪ್ರತ್ಯೇಕತೆ ವ್ಯವಸ್ಥೆ ಹೊಂದಿದ್ದರೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಬಹುದು.

ವೈದ್ಯಕೀಯ ಅಧಿಕಾರಿಯೊಬ್ಬರು ರೋಗಿಯನ್ನು ಪೂರ್ವ ರೋಗ ಲಕ್ಷಣ ಆಥವಾ ಸೌಮ್ಯವಾದ ಲಕ್ಷಣ ಪ್ರಕರಣ ಎಂದು ಘೋಷಿಸಬೇಕು. ಕಣ್ಗಾವಲು ತಂಡಗಳು ನಿರಂತರವಾಗಿ ರೋಗಿಗಳ ಆರೋಗ್ಯ ಸ್ಥಿತಿ ಕುರಿತು ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ನೀಡಬೇಕು.

ಸೋಂಕಿತರು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಇದಕ್ಕೆ ವೈಫೈ ಅಥವಾ ಬ್ಲೂಟೂತ್‌ ವ್ಯವಸ್ಥೆ ಕಲ್ಪಿಸಿ, ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂಬೆಲ್ಲಾ ಷರತ್ತುಗಳು ಈ ಹೊಸ ಮಾರ್ಗಸೂಚಿಯಲ್ಲಿ ಅಡಕವಾಗಿದೆ.

Advertisement

ದಾಖಲೀಕರಣಕ್ಕೆ ಐಸಿಎಂಆರ್‌ ಮಾರ್ಗಸೂಚಿ
ನ್ಯುಮೋನಿಯಾ, ಹೃದಯಕ್ಕೆ ಹಾನಿ ಮಾಡುವುದು, ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗುವುದೂ ಸೇರಿ ಹಲವು ರೀತಿಯಲ್ಲಿ ಮಾನವನ ದೇಹವನ್ನು ಆಂತರಿಕವಾಗಿ ಹಾನಿಗೊಳಿಸಿ ಸಾವಿನ ದವಡೆಗೆ ತಳ್ಳುವ ಕೋವಿಡ್ ಸೋಂಕನ್ನು ‘ಮರಣಕ್ಕೆ ಮೂಲ ಕಾರಣ’ ಎಂದು ಪರಿಗಣಿಸಲು ಐಸಿಎಂಆರ್‌ ನಿರ್ಧರಿಸಿದೆ.

ಇದೇ ವೇಳೆ ಸೋಂಕಿತ ರೋಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ, ಶವಪರೀಕ್ಷೆಯ ಅಗತ್ಯವಿಲ್ಲ. ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಮರಣ ಪ್ರಮಾಣಪತ್ರ ನೀಡಬಹುದು. ಕೆಲವೊಂದು ಶಂಕಿತ ಪ್ರಕರಣಗಳಲ್ಲಿ ವ್ಯಕ್ತಿಗಳು ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದರೆ ಅದು ಮೆಡಿಕೊ ಲೀಗಲ್‌ ಪ್ರಕರಣವಾಗುತ್ತದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶವ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಕೋವಿಡ್ ಪ್ರಕರಣದಲ್ಲಿ ಇದಕ್ಕೆ ವಿನಾಯಿತಿ ನೀಡಬಹುದು ಎಂದು ಐಸಿಎಂಆರ್ ತಾನು ಸೋಮವಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next