Advertisement

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

01:51 AM Oct 06, 2024 | Team Udayavani |

ವಿಶೇಷ ವರದಿ:
ಸುಬ್ರಹ್ಮಣ್ಯ: ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣ ಅ.6ರಿಂದ ಆರಂಭಗೊಳ್ಳಲಿದೆ. ಆನ್‌ಲೈನ್‌ ಮೂಲಕ ನೋಂದಾಯಿಸಿದವರಿಗೆ ಮಾತ್ರ ಚಾರಣಕ್ಕೆ ಅವಕಾಶ.

Advertisement

ಕುಮಾರ ಪರ್ವತಕ್ಕೆ ಚಾರಣಕ್ಕೆ ಕುಕ್ಕೆ ಸಮೀಪದ ದೇವರಗದ್ದೆಯಿಂದ ಅಥವಾ ಸೋಮವಾರ ಪೇಟೆ ಬಳಿಯಿಂದ ತೆರಳಬಹುದು. ಕಳೆದ ವರ್ಷ ಕುಮಾರಪರ್ವತ ಚಾರಣಕ್ಕೆ ಭಾರೀ ಸಂಖ್ಯೆಯ ಚಾರಣಿಗರು ಆಗಮಿಸಿದ್ದರಿಂದ ಸಮಸ್ಯೆ ಉಂಟಾದ ಕಾರಣ ನಿರ್ದಿಷ್ಟ ಸೀಮಿತ ಚಾರಣಿಗರ ಭೇಟಿಗೆ ಅವಕಾಶ ನೀಡಲಾಗಿತ್ತು. ಬಳಿಕ ಮತ್ತೆ ಮಳೆ ಆರಂಭ, ಬೇಸಗೆಯಿಂದ ಚಾರಣ ನಿರ್ಬಂಧಿಸಿ ಈ ವರ್ಷದಿಂದ ಆನ್‌ಲೈನ್‌ ಬುಕ್ಕಿಂಗ್‌, ಹೊಸ ಮಾರ್ಗಸೂಚಿಯೊಂದಿಗೆ ಪರಿಸರ ಸ್ನೇಹಿ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಕಳೆದ ಬೇಸಗೆಯಲ್ಲಿ ಸುಬ್ರಹ್ಮಣ್ಯದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು.

ಆನ್‌ಲೈನ್‌ನಲ್ಲಿ ಬುಕ್ಕಿಂಗ್‌
ಈ ವರ್ಷದಿಂದ ಅರಣ್ಯ ಇಲಾಖೆಯ ಅರಣ್ಯ ವಿಹಾರ ಎಂಬ ವೆಬ್‌ಸೈಟ್‌ನಲ್ಲಿ ನೋಂದಾಯಿಸಿ ಚಾರಣ ಕೈಗೊಳ್ಳಬಹುದು. ದಿನವೊಂದಕ್ಕೆ 335 ಚಾರಣಿಗರಿಗೆ ಮಾತ್ರ ಅವಕಾಶ ಇರಲಿದೆ. ಕುಕ್ಕೆ ಸುಬ್ರಹ್ಮಣ್ಯ – ಕುಮಾರಪರ್ವತ, ಕೊಡಗಿನ ಬೀದಹಳ್ಳಿ – ಕುಮಾರ ಪರ್ವತ – ಬೀದಹಳ್ಳಿ, ಬೀದಹಳ್ಳಿ- ಕುಮಾರ ಪರ್ವತ – ಸುಬ್ರಹ್ಮಣ್ಯ ಎಂಬ ಮೂರು ಆಯ್ಕೆಗಳನ್ನು ಪ್ರವೇಶ ಚಾರಣ ಮಾರ್ಗ ಆಯ್ಕೆ ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ ಸೂಚಿಸಲಾಗಿದೆ.

ಗಿರಿಗದ್ದೆಯಲ್ಲಿ ತಂಗಲು ನಿರ್ಬಂಧ
ಈ ಹಿಂದೆ ಕುಮಾರ ಪರ್ವತ ಚಾರಣ ಕೈಗೊಳ್ಳುವವರು ಗಿರಿಗದ್ದೆಯಲ್ಲಿ ವಾಸ್ತವ್ಯ ಮಾಡಿ (ತಂಗಿ) ಮರುದಿನ ಬೆಳಗ್ಗೆ ಪರ್ವತದ ಮೇಲಿನ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ನಿರ್ಬಂಧಿಸಲಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆಯ ಕುಮಾರಪರ್ವತ ಚಾರಣ ಪ್ರವೇಶಕ್ಕೆ ಬೆಳಗ್ಗೆ ಗಂಟೆ 6ರಿಂದ 9ರ ಅವಧಿಯಲ್ಲಿ ಪ್ರವೇಶಿಸಬೇಕು.

ಬೆಳಗ್ಗೆ 11 ಗಂಟೆಗೆ ಗಿರಿಗದ್ದೆಯಿಂದ ಮೇಲಿನ ಪ್ರದೇಶಕ್ಕೆ ತೆರಳಬೇಕು. ಸಂಜೆ 6 ಗಂಟೆ ಮೊದಲು ಚಾರಣದಿಂದ ಕಡ್ಡಾಯವಾಗಿ ನಿರ್ಗಮಿಸಬೇಕು. ಚಾರಣದ ಮಧ್ಯೆ ಎಲ್ಲೂ ತಂಗಲು ಅವಕಾಶ ಇರುವುದಿಲ್ಲ ಒಂದೇ ದಿನದಲ್ಲಿ ಮರಳಬೇಕು ಸಹಿತ ಹಲವು ಷರತ್ತುಗಳನ್ನು ಅರಣ್ಯ ಇಲಾಖೆ ವಿಧಿಸಿದೆ. ಗಿರಿಗದ್ದೆಯಲ್ಲಿ ತಂಗಲು ಅವಕಾಶ ಇಲ್ಲವಾದ್ದರಿಂದ ಸುಬ್ರಹ್ಮಣ್ಯದಿಂದ ಸುಮಾರು 12 ಕಿ.ಮೀ. ದೂರದ ಕಠಿನ ಹಾದಿಯ ಪರ್ವತವನ್ನು ಗರಿಷ್ಠ 12 ಗಂಟೆಯೊಳಗೆ (ಬೆಳಗ್ಗೆ 6ರಿಂದ – ಸಂಜೆ 6 ಗಂಟೆ) ವೀಕ್ಷಿಸಿ ಮರಳುವುದು ಅನಿವಾರ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next