Advertisement

Sri Lanka: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆ- ಭಾರತಕ್ಕೆ ಹೊಸ ಸಮಸ್ಯೆ!

11:37 AM Sep 23, 2024 | Team Udayavani |

ಕೊಲಂಬೋ: ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್ ವಾದಿ , ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಪಕ್ಷದ ನಾಯಕ ಅನುರಾ ಕುಮಾರ ದಿಸ್ಸಾ ನಾಯಕೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಂಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರದ ಗದ್ದುಗೆ ಓರ್ವ ಮಾರ್ಕ್ಸ್ ವಾದಿ ನಾಯಕನ ಕೈ ಸೇರಿದಂತಾಗಿದೆ.

Advertisement

ಲಂಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಮೊದಲಿಗೆ ಶೇ.50ರಷ್ಟು ಮತ ಗಳಿಸಿರುತ್ತಾರೋ ಅವರೇ ಅಧ್ಯಕ್ಷರಾಗುತ್ತಿದ್ದರು. ಈ ಬಾರಿ ಯಾರೂ ಶೇ.50ರ ಗಡಿ ದಾಟದ ಹಿನ್ನೆಲೆಯಲ್ಲಿ ಆ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 2ನೇ ಹಂತದ ಮತ ಎಣಿಕೆ ನಡೆಸಲಾಗಿದೆ. ಈ ವೇಳೆ ಶೇ.42.31ರ ಮತದೊಂದಿಗೆ ಅನುರಾ ಗೆದ್ದಿದ್ದು, ಸೋಮವಾರ ಪದಗ್ರಹಣ ನಡೆಯಲಿದೆ.

ಭಾರತಕ್ಕೆ ಮತ್ತೊಂದು ಬದಿಯಲ್ಲೂ ಹೊಸ ಸಮಸ್ಯೆ?
ಪಾಕಿಸ್ತಾನದಿಂದ ಉಗ್ರರ ಕಾಟ, ಚೀನಾ ವಿಸ್ತರಣಾ ವಾದ, ಬಾಂಗ್ಲಾದಿಂದ ಗಡಿ ಭದ್ರತೆಗೆ ಸವಾಲು, ಮಾಲ್ಡೀವ್ಸ್‌ನಿಂದ ಚೀನಾಗೆ ಕುಮ್ಕಕ್ಕು ಹೀಗೆ ಭಾರತ ತನ್ನ ಸುತ್ತಲೂ ಸಮಸ್ಯೆಗಳನ್ನೇ ಹೊದ್ದು ನಿಂತಿರುವಾಗ, ಲಂಕಾದಲ್ಲಿ ಮಾರ್ಕ್ಸ್ ವಾದಿ ನಾಯಕ ಅನುರಾ ರಾಷ್ಟ್ರದ ಗದ್ದುಗೆ ಏರಿದ್ದಾರೆ.

ಇದು ಭಾರತಕ್ಕೆ ಮತ್ತೊಂದು ಸವಾಲು ತಂದೊಡ್ಡುವ ಸಾಧ್ಯತೆಗಳಿಗೆ ಪುಷ್ಠಿ ನೀಡಿದೆ. ಅನುರಾ, ಭಾರತದ ಖಟ್ಟಾ ವಿರೋಧಿ ಸಂಘಟನೆ ಜನತಾ ವಿಮುಕ್ತಿ ಪೆರಮುನ(ಜೆವಿಪಿ) ನಾಯಕ. 1987ರ ಭಾರತ-ಲಂಕಾ ಒಪ್ಪಂದವನ್ನು ಈ ಸಂಘಟನೆ ತೀವ್ರವಾಗಿ ವಿರೋಧಿಸಿ, ಚೀನಾದ ಪರ ನಿಲುವು ಹೊಂದಿತ್ತು. ಇದೀಗ ಅನುರಾ ಕೂಡ ಅದೇ ರೀತಿ ಚೀನಾಪರ ನಿಲುವೊಂದಿಗೆ ಭಾರತದ
ಹಿತಾಸಕ್ತಿಗೆ ಧಕ್ಕೆಯಾಗುವ ಯೋಜನೆಯತ್ತ ಜಾರಬಹುದೆಂಬ ಗುಮಾನಿ ಶುರುವಾಗಿದೆ.

Advertisement

ನೆರೆ ರಾಷ್ಟ್ರದಿಂದ ಯಾವೆಲ್ಲ ಬೆದರಿಕೆ ಬರಬಹುದು
*ಲಂಕಾದಲ್ಲಿ ಭಾರತ ವಿರೋಧಿಗಳಿಗೆ ನೆಲೆ ಸಾಧ್ಯತೆ , ಕುತಂತ್ರಕ್ಕೆ ಪುಷ್ಠಿ
*ಚೀನಾ ಜತೆ ಸೇರಿ ಭಾರತದ ವ್ಯಾಪಾರಕ್ಕೆ ಧಕ್ಕೆ, ಭದ್ರತೆಗೂ ತೊಡಕು
*ಲಂಕಾದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹೂಡಿಕೆ ಹೆಚ್ಚಿಸಿ ಚೀನಾ ಪ್ರಾಬಲ್ಯ
*ಹಿಂದೂ ಮಹಾಸಾಗರ ಎಂಟ್ರಿಗೆ ಚೀನಾಗೆ ಶ್ರೀಲಂಕಾ ಹೊಸ ಅಸ್ತ್ರ

ಚೀನಾದ ನಿಕಟವರ್ತಿಕಮ್ಯೂನಿಸ್ಟ್‌ ಅಧ್ಯಕ್ಷ
ಕೆಕಿರಾವಾ ಗ್ರಾಮದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ಚವಿದ್ಯಾಲಯದ ಮೆಟ್ಟಿಲೇರಿದ ವಿದ್ಯಾವಂತ ಅನುರಾ ಕುಮಾರ ದಿಸ್ಸಾನಾಯಕೆ. 1990ರ ದಶಕದಲ್ಲಿ ಕಮ್ಯೂನಿಸಂ ಪ್ರತಿಪಾದನೆಯೊಂದಿಗೆ ವಿದ್ಯಾರ್ಥಿಯಾಗಿದ್ದಾಗಲೇ ಛಾಪು ಮೂಡಿಸಿದ್ದರು. ಬಳಿಕ ಜೆವಿಪಿ ಸಂಘಟನೆ ಸೇರಿ, 1998ರಲ್ಲಿ ಅದೇ ಸಂಸ್ಥೆಯ ನಿರ್ಣಯ ಸಮಿತಿ ಯ ಸದಸ್ಯರಾದರು. 2004ರಲ್ಲಿ ಸಂಸದೀಯ
ಚುನಾವಣೆಯಲ್ಲಿ ಗೆದ್ದು ಸಂಪುಟ ಸಚಿವರಾದರು. 2014ರಲ್ಲಿ ಜೆವಿಪಿ ಮುಖ್ಯಸ್ಥರಾಗಿ, 2015ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಪಕ್ಷದ ಮುಖ್ಯ ಸಚೇತಕರಾಗಿದ್ದರು.  ಇವರು ಚೀನಾದ ನಿಕಟವರ್ತಿಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next