Advertisement
ನಗರದ ಬಾವುಟಗುಡ್ಡೆ ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಕೇಂದ್ರ ಗ್ರಂಥಾಲಯವು ಸುಮಾರು 65 ವರ್ಷಗಳ ಇತಿಹಾಸ ಹೊಂದಿದೆ. ಹದಿನೈದು ವರ್ಷಗಳ ಹಿಂದೆ ತೀರಾ ದುಃಸ್ಥಿತಿಯಲ್ಲಿದ್ದ ನಗರ ಕೇಂದ್ರ ಗ್ರಂಥಾಲಯವು ಬಳಿಕದ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಸಫಲವಾಗಿತ್ತು. ಪಾಲಿಕೆಯಿಂದ ಗ್ರಂಥಾಲಯ ನಿಧಿಗೆ ಸಲ್ಲಿಕೆಯಾಗುವ ಗ್ರಂಥಾಲಯ ಕರವನ್ನು ಉಪಯೋಗಿಸಿಕೊಂಡು ಓದುಗ ಸ್ನೇಹಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ನಗರ ಕೇಂದ್ರ ಗ್ರಂಥಾಲಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಇದೀಗ ಗ್ರಂಥಾಲಯ ನಿಧಿಯಲ್ಲಿ ಸಂಗ್ರಹವಾದ ಹಣವನ್ನು ಬಳಸಿಕೊಂಡು ಎರಡು ಮಹಡಿಯ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ‘ನೂತನ ಕಟ್ಟಡವು ಈಗಿನ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಿರಲಿದೆ. ಹೊಸ ಕಟ್ಟಡದ ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮತ್ತು ಮೊದಲ ಮಹಡಿಯಲ್ಲಿ ಸುಸಜ್ಜಿತ ಅಡಿಟೋರಿಯಂ ಇರಲಿದೆ. ಆಡಿಟೋರಿಯಂನಲ್ಲಿ ಸ್ಟೇಜ್, ಆಸನ ವ್ಯವಸ್ಥೆ ಸಹಿತ ಇತರ ಸೌಲಭ್ಯಗಳನ್ನು ಕೂಡ ಈ ಗ್ರಂಥಾಲಯ ಹೊಂದಲಿದೆ. ಆದರೆ, ಇನ್ನೂ ಕೂಡ ಕಟ್ಟಡದ ಅಂತಿಮ ನೀಲನಕ್ಷೆ ಸಿದ್ಧಗೊಂಡಿಲ್ಲ. ಹೀಗಾಗಿ, ಕಟ್ಟಡದ ವಿನ್ಯಾಸದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಹಳೆ ಗ್ರಂಥಾಲಯದಲ್ಲಿದ್ದ ಮಕ್ಕಳ ಆಟ ಮತ್ತು ಸಾಹಿತ್ಯ ವಿಭಾಗವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆಯಿದೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾಘವೇಂದ್ರ ಅವರು ಸುದಿನಕ್ಕೆ ತಿಳಿಸಿದ್ದಾರೆ. 2012-13ನೇ ಸಾಲಿನ ಗ್ರಂಥಾಲಯ ನಿಧಿಯ 18.45 ಲಕ್ಷ ರೂ. ಅನುದಾನದಲ್ಲಿ ನೆಲ ಮತ್ತು ಗೋಡೆಗೆ ಫ್ಲೋರಿಂಗ್ ನಡೆಸಲಾಗಿತ್ತು. 2013-14ನೇ ಸಾಲಿನಲ್ಲಿ 11 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ಮೊದಲ ಮಹಡಿಗೆ ಫಾಲ್ ಸೀಲಿಂಗ್ ಮಾಡಲಾಗಿತ್ತು. ಮೊದಲಿದ್ದ ಅಲ್ಯೂಮಿನಿಯಂ ಶೀಟ್‌ನ್ನು ತೆಗೆದು ಹಾಕಿ ಫಾಲ್ ಸೀಲಿಂಗ್‌ನ್ನು ಅಳವಡಿಸಲಾಗಿತ್ತು. ಮಕ್ಕಳಲ್ಲಿ ಆಟದ ಜತೆಗೆ ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶದಿಂದ ಮಕ್ಕಳ ಆಟ ಮತ್ತು ಸಾಹಿತ್ಯ ವಿಭಾಗ ತೆರೆಯಲಾಗಿತ್ತು. ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿತ್ತು. ಪುಸ್ತಕ ಪಡೆದುಕೊಳ್ಳುವ ಸಂದರ್ಭ ಸದಸ್ಯತ್ವ ಕಾರ್ಡ್ ಮತ್ತು ಪುಸ್ತಕವನ್ನು ಸ್ಕ್ಯಾನ್ ಮಾಡಿ ನೀಡುವ ರಾಜ್ಯದ ಕೆಲವೇ ಸರಕಾರಿ ಗ್ರಂಥಾಲಯಗಳ ಪೈಕಿ ಮಂಗಳೂರು ನಗರ ಕೇಂದ್ರ ಗ್ರಂಥಾಲಯವೂ ಒಂದಾಗಿದೆ. ಅಲ್ಲದೆ ಇನ್ನೂ ಅನೇಕ ಸೌಲಭ್ಯಗಳನ್ನು ಈ ಗ್ರಂಥಾಲಯದಲ್ಲಿ ಕಲ್ಪಿಸಿ ಕೊಡಲಾಗಿದೆ.
Related Articles
ಹೊಸ ಕಟ್ಟಡದಲ್ಲಿ ನಿರ್ಮಾಣಗೊಳ್ಳಲಿರುವ ಆಡಿಟೋರಿಯಂ ಅನ್ನು ಬಹು ಉದ್ದೇಶಕ್ಕೆ ಬಳಸಿಕೊಳ್ಳಲು ಗ್ರಂಥಾಲಯ ಪ್ರಮುಖರು ನಿರ್ಧರಿಸಿದ್ದಾರೆ. ಗ್ರಂಥಾಲಯ ಸಂಬಂಧಿ ಕಾರ್ಯಕ್ರಮಗಳು, ಮಕ್ಕಳಿಗೆ ಗ್ರಂಥಾಲಯ ತರಬೇತಿ, ವಿವಿಧ ತರಗತಿಗಳನ್ನು ನಡೆಸಲು ಇದು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು, ಹೊಸ ಕಟ್ಟಡದ ಕಾಮಗಾರಿಗೆ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಶೀಘ್ರದಲ್ಲೇ ನಿರ್ಮಾಣ ಕೆಲಸ ಪ್ರಾರಂಭವಾಗುವ ಸಾಧ್ಯತೆಯಿದೆ.
Advertisement
ಓದುಗರಿಗೆ ಹೆಚ್ಚಿನ ಸೌಲಭ್ಯಮಂಗಳೂರು ನಗರ ಕೇಂದ್ರ ಗ್ರಂಥಾಲಯಕ್ಕೆ ದಿನಕ್ಕೆ ಕನಿಷ್ಠ 400-500 ಮಂದಿ ಬರುತ್ತಾರೆ. ಓದುಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಟ್ಟಡ ಹೊಸದಾಗಿ ನಿರ್ಮಾಣವಾಗುತ್ತಿದೆ. ಗ್ರಂಥಾಲಯ ನಿಧಿಯನ್ನು ಬಳಸಿಕೊಂಡು ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.
– ಡಿ. ವೇದವ್ಯಾಸ ಕಾಮತ್,
ಶಾಸಕರು ವಿಶೇಷ ವರದಿ