Advertisement

ಕಿಮ್ಸ್ ನ ಹಳೆಯ ಕಟ್ಟಡಕ್ಕೆ ಹೊಸ ರೂಪ 

05:41 PM Sep 28, 2018 | |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಸುಮಾರು 5-6 ದಶಕಗಳಷ್ಟು ಹಳೆಯದಾದ ತುರ್ತು ಹಾಗೂ ಶಸ್ತ್ರಚಿಕಿತ್ಸಾ (ಓಟಿ) ಘಟಕ ಕಟ್ಟಡ ಇನ್ಮುಂದೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡವಾಗಿ ರೂಪ ಪಡೆಯಲಿದೆ.

Advertisement

ಕಿಮ್ಸ್‌ನ ಇದೇ ಘಟಕದಲ್ಲಿ ವರ್ಷಕ್ಕೆ ಸುಮಾರು 50-60 ಸಾವಿರ ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ಕೈಗೊಳ್ಳುತ್ತಿದ್ದು, ಹಳೆಯ ಕಟ್ಟಡದಲ್ಲಿ ಹವಾ ನಿಯಂತ್ರಿತ ಯಂತ್ರ ಅಳವಡಿಸುವುದು ಕಷ್ಟವಾಗಿತ್ತು. ಆದರೆ ಬರುವ ದಿನಗಳಲ್ಲಿ ಈ ಕಟ್ಟಡ ಅತ್ಯಾಧುನಿಕ-ಸುಸಜ್ಜಿತ ಸೌಲಭ್ಯಗಳ ತಾಣವಾಗಲಿದೆ.

ಇರುವ ಕಟ್ಟಡದಲ್ಲೇ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ, ಉಪಕರಣಗಳನ್ನೊಳಗೊಂಡ ತುರ್ತು ಹಾಗೂ ಶಸ್ತ್ರಚಿಕಿತ್ಸಾ ಘಟಕ ಸಂಕೀರ್ಣ ನಿರ್ಮಿಸಲು ಕಿಮ್ಸ್‌ನ ನಿರ್ದೇಶಕರು ಮುಂದಾಗಿದ್ದು,ಆ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.

ಜಿ +4 ಮಾದರಿ ಕಟ್ಟಡ: ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಜಿ+4 ಮಾದರಿಯಲ್ಲಿ ಒಟ್ಟು 3659.50 ಚದುರ ಮೀಟರ್‌ ವಿಸ್ತೀರ್ಣದಲ್ಲಿ ಈ ನೂತನ ತುರ್ತು ಹಾಗೂ ಶಸ್ತ್ರಚಿಕಿತ್ಸಾ ಘಟಕದ ಸಂಕೀರ್ಣ ನಿರ್ಮಾಣವಾಗುತ್ತಿದೆ. ಪ್ರತಿ ಮಹಡಿ ಅಂದಾಜು 605 ಚದುರ ಮೀಟರ್‌ ವಿಸ್ತೀರ್ಣ ಹೊಂದಿರಲಿದ್ದು,
ಡಿ.ಜಿ.ಸೆಟ್‌, ಸೋಲಾರ್‌ ಬಿಸಿ ನೀರು, ಮಳೆ ನೀರು ಕೊಯ್ಲು, ಎರಡು ಲಿಫ್ಟ್‌, ನಾಲ್ಕು ಸುಸಜ್ಜಿತ ಓಟಿಗಳು ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ನೂತನ ಸಂಕೀರ್ಣ ಹೊಂದಲಿದೆ.

ನೆಲ ಮಾಳಿಗೆಯಲ್ಲಿ ವಾಹನಗಳ ನಿಲುಗಡೆ ಸ್ಥಳ, ಲಾಂಡ್ರಿ, ಉಗ್ರಾಣ ಹಾಗೂ ನೆಲಮಹಡಿಯಲ್ಲಿ ಪ್ರವೇಶ ದ್ವಾರ, ಕಾಯುವ ಸ್ಥಳ, ಎಮರ್ಜೆನ್ಸಿ ಟ್ರಾಮಾ, ಸಿಟಿ ಮಸೀನ್‌, ಸಾಮಾನ್ಯ ಓಟಿ, ಲ್ಯಾಬ್‌, ಎಕ್ಸರೇ, ಕಚೇರಿ ಹಾಗೂ ಮೊದಲ ಮಹಡಿಯಿಂದ ನಾಲ್ಕನೇ ಮಹಡಿವರೆಗೆ ತೀವ್ರ ನಿಗಾ ಘಟಕ (ಐಸಿಯು)ದ ವಾರ್ಡ್‌ಗಳು ಇರಲಿವೆ.

Advertisement

ನೂತನ ತುರ್ತು ಮತ್ತು ಶಸ್ತ್ರಚಿಕಿತ್ಸಾ ಘಟಕ ಸಂಕೀರ್ಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್‌ ವಿಭಾಗ ನಿರ್ಮಿಸಲಿದ್ದು, ಇನ್ನು 2-3 ತಿಂಗಳಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಿಮ್ಸ್‌ ಈ ಮೊದಲು 150 ಎಂಬಿಬಿಎಸ್‌ ಸೀಟ್‌ ಪ್ರವೇಶ ಅವಕಾಶ ಹೊಂದಿತ್ತು. ಈಗ ಅದು 200 ಸೀಟ್‌ಗಳಿಗೆ ವಿಸ್ತರಣೆಯಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಿಮ್ಸ್‌ನ ಆವರಣದಲ್ಲಿ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರಕಾರ
ಈಗಾಗಲೇ ಅದಕ್ಕಾಗಿ ತನ್ನ ಪಾಲಿನ 30 ಕೋಟಿ ರೂ. ಬಿಡುಗಡೆ ಮಾಡಿ ರಾಜ್ಯ ಸರಕಾರಕ್ಕೆ ಕಳುಹಿಸಿದೆ. ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್‌ ವಿಭಾಗವು ಈ ನೂತನ ಸಂಕೀರ್ಣ ನಿರ್ಮಾಣದ ಹೊಣೆ ಹೊರಲಿದೆ.

ಕಿಮ್ಸ್‌ನಲ್ಲಿ ತುರ್ತು ಮತ್ತು ಶಸ್ತ್ರಚಿಕಿತ್ಸಾ ಘಟಕದ ಕಟ್ಟಡ ಸುಮಾರು 6-7 ದಶಕಗಳದ್ದಾಗಿದ್ದು, ಈಗ ಅಲ್ಲಿ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಜಿ+4 ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ನೂತನ ಸಂಕೀರ್ಣ ನಿರ್ಮಿಸಲಾಗುವುದು. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2-3 ತಿಂಗಳಲ್ಲಿ ಈ ಕಾಮಗಾರಿ ಕಾರ್ಯಾರಂಭವಾಗಲಿದೆ.
. ಡಾ| ದತ್ತಾತ್ರೇಯ ಡಿ. ಬಂಟ್‌,
  ನಿರ್ದೇಶಕರು, ಕಿಮ್ಸ್ 

. ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next