Advertisement
ಕನ್ನಡ ಹಾಗೂ ಭಾರತೀಯ ಬ್ರಾಹ್ಮೀ ಲಿಪಿ ಆಧಾರಿತ ಭಾಷಾ ಕಲಿಕೆಗೆ ವಿಶೇಷವಾಗಿ “ಕ-ನಾದ’ ಕೀಲಿಮಣಿ ಸಿದ್ಧಪಡಿಸಿರುವ ಸಂಸ್ಥೆಯು ಇದೀಗ “ತುಳುಶ್ರೀ’ ಹೆಸರಿನ ಹೊಸ ಅಚ್ಚು ಅಭಿವೃದ್ಧಿಪಡಿಸಿದೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಕೀಲಿಮಣಿಯಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳ, ತೆಲುಗು, ಬಂಗಾಳಿ, ಪಂಜಾಬಿ, ಗುಜರಾತಿ, ಹಿಂದಿ, ಒಡಿಯಾ ಭಾಷೆಗಳಲ್ಲೇ ಟೈಪ್ ಮಾಡಿ “ತುಳುಶ್ರೀ’ ಅಚ್ಚುಗಳಲ್ಲಿ ಟೈಪ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ “ತುಳುಶ್ರೀ’ ಅಚ್ಚು ಬಳಕೆ ತರಬೇತಿ ಕಾರ್ಯಕ್ರಮ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಂಗಳೂರಿನಲ್ಲಿ ಭಾನುವಾರ ನಡೆಯಲಿದೆ.
Related Articles
Advertisement
ಎಲ್ಲರೂ ಒಟ್ಟುಗೂಡಿ ಯುನಿಕೋಡ್‌ಗೆ ಸರಿಯಾಗಿ ಹೊಂದುವ, ಮುದ್ರಿಸಲು ಅನು ಕೂಲವಾಗುವಂತೆ “ತುಳುಶ್ರೀ’ ಫಾಂಟ್‌ನ್ನು ತುಳು ಅಕಾಡೆಮಿಯ ಆಶ್ರಯದಲ್ಲಿ ಸಿದ್ಧಪಡಿಸಲಾಯಿತು ಎಂದು ಮಾಹಿತಿ ನೀಡಿದರು. ಈವರೆಗೆ ಅಭಿವೃದ್ಧಿಪಡಿಸಲಾಗಿರುವ ತುಳು ಫಾಂಟ್‌ಗಳು ಬಹುತೇಕ ಮಲಯಾಳ ಲಿಪಿಯನ್ನು ಹೋಲುವಂತಿವೆ. ಹಾಗಾಗಿ, ತುಳು ಅಕಾಡೆಮಿಯಿಂದ ಒಂದಷ್ಟು ಪುರಾವೆಗಳನ್ನು ಸಂಗ್ರಹಿಸಿ, ಆ ಮೂಲಕ ಗ್ರಾಫಿಕ್ ಚಿತ್ರ ಬಿಡಿಸಿ, ಫಾಂಟ್ ಅಭಿವೃದ್ಧಿಪಡಿಸಿ ಅದನ್ನು ಸ್ಕ್ಯಾನ್ ಮಾಡಿ ಪರಿಶೀಲಿಸಿ, ಅಚ್ಚಿಗೆ ಅಂತಿಮ ರೂಪ ನೀಡಲಾಗಿದೆ ಎಂದು ತಿಳಿಸಿದರು.
ಐಟಿಬಿಟಿ ಇಲಾಖೆ ನೆರವು: ನಮ್ಮ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಐಟಿ-ಬಿಟಿ ಇಲಾಖೆಯ ಆರ್ಥಿಕ ಸಹಕಾರವೂ ಇದೆ. ಸುಧಾರಿತ ಕೀಲಿಮಣಿ ಹಾಗೂ ಫಾಂಟ್ (ಸುಮಾರು 4 ಲಕ್ಷ ರೂ.) ಅಭಿವೃದ್ಧಿಗೆ ಒಟ್ಟು 48 ಲಕ್ಷ ರೂ.ವೆಚ್ಚವಾಗಿದೆ. ಎರಡು ವರ್ಷದ ಹಿಂದೆ ಪ್ರಿಯಾಂಕ್ ಖರ್ಗೆಯವರು ಐಟಿ-ಬಿಟಿ ಸಚಿವರಾಗಿದ್ದ ವೇಳೆ ಕನ್ನಡ ಮತ್ತು ಸಂಸ್ಕೃತಿ ಬೆಳವಣಿಗೆಗೆ ಸಂಬಂಧಪಟ್ಟ ನವೋದ್ಯಮಗಳಿಗೆ ನೀಡುವ ಅನುದಾನದಡಿ ನಮ್ಮ ಸಂಸ್ಥೆಗೂ 25 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಅದರಂತೆ ತಿಂಗಳ ಹಿಂದೆ “ತುಳುಶ್ರೀ’ ಫಾಂಟ್ ಅಂತಿಮ ರೂಪ ಪಡೆದಿದೆ ಎಂದು ತಿಳಿಸಿದರು.
ಸಂಸ್ಥೆಯೇ ಸಿದ್ಧಪಡಿಸಿರುವ ಕೀಲಿಮಣಿಯಲ್ಲಿ ಹತ್ತಾರು ಭಾಷೆಗಳಲ್ಲಿ ಟೈಪ್ ಮಾಡುವ ಮೂಲಕ “ತುಳುಶ್ರೀ’ ಅಕ್ಷರಗಳನ್ನು ಮೂಡಿಸ ಬಹುದು. ಇಂಗ್ಲಿಷ್ ಅಕ್ಷರಗಳುಳ್ಳ ಕೀಲಿಮಣಿಯಲ್ಲೂ (ಕ್ಯೂಡಬ್ಲ್ಯುಇಆರ್ಟಿ) ಹೊಸ “ತುಳುಶ್ರೀ’ ಅಚ್ಚು ಮೂಡಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಆ್ಯಂಡ್ರಾಯ್ಡ ಮೊಬೈಲ್ ಫೋನ್‌ನಲ್ಲೂ ಹೊಸ “ಅಚ್ಚ’ನ್ನು ಶೇ.75ರಷ್ಟು ಬಳಸಲು ಅವಕಾಶವಿದೆ. ಯೂನಿಕೋಡ್‌ಗೆ ಪರಿವರ್ತಿಸುವ ವ್ಯವಸ್ಥೆ ತರುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆದಿದೆ. “ತುಳುಶ್ರೀ’ ಫಾಂಟ್‌ನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಬಳಸಬಹುದಾಗಿದೆ ಎಂದು ಹೇಳಿದರು.
“ತುಳುಶ್ರೀ’ ಅಚ್ಚು ಡೌನ್‌ಲೋಡ್‌ಗೆ ಸಂಪರ್ಕ ವೆಬ್‌ಸೈಟ್ ವಿಳಾಸ: thetulufont.com
ಮಲಯಾಳಂ ಲಿಪಿಯು ತುಳುಲಿಪಿಯ ಸ್ವರೂಪ: ಹಿಂದಿನ ಕಾಲದಲ್ಲಿ ತುಳು ಲಿಪಿ ಸಾರ್ವತ್ರಿಕವಾಗಿತ್ತು. ದಕ್ಷಿಣ ಭಾರತದ ಸಂಸ್ಕೃತ ಗ್ರಂಥಗಳನ್ನು ತುಳು ಲಿಪಿಯಲ್ಲಿ ಬರೆದಿರುವ ತಾಡೆಯೋಲೆ ಪ್ರತಿಗಳು ದೊರಕಿದ್ದು, ಇದರಿಂದ ತುಳುವಿಗೆ ಲಿಪಿ ಇತ್ತು ಅನ್ನೋದು ಸಾಬೀತಾಗುತ್ತದೆ. ಮುದ್ರಣ ಯಂತ್ರ ಬರುವ ಮುಂಚೆ ಯಾವುದೇ ತುಳು ಭಾಷೆಯ ಗ್ರಂಥಗಳನ್ನು ಬೇರೆ ಭಾಷೆಯಲ್ಲಿ ಬರೆದ ಉದಾಹರಣೆಗಳಿಲ್ಲ.
ಆದರೆ, ಅಚ್ಚುಮೊಳೆ ತಯಾರಿಸುವಾಗ ತುಳುಲಿಪಿಯ ಪೂರ್ಣ ಮಾಹಿತಿ ಇರದ ಕಾರಣ ಬ್ರಿಟಿಷರು ತುಳು ಭಾಷೆಯನ್ನು ಕನ್ನಡದಲ್ಲಿ ಬರೆಯುವ ಅನಿವಾರ್ಯತೆ ಸೃಷ್ಟಿಸಿತು. ಇಂದಿನ ಮಲಯಾಳಂ ಲಿಪಿಯು ತುಳುಲಿಪಿಯ ಒಂದು ಸ್ವರೂಪವೇ ಆಗಿದೆ. ಕೆ.ಪಿ.ರಾವ್ ಅಭಿವೃದ್ಧಿ ಪಡಿಸಿದ ಪದ ತಂತ್ರಾಂಶ ದಿಂದ ಹಾಗೂ ಗುರುಗಳ ಮಾರ್ಗದರ್ಶನ ದಿಂದ ತಾಡೆ ಯೋಲೆ ಪ್ರತಿಯ ಆಧಾರದಿಂದ 10ನೇ ತರಗತಿಯ ವಿದ್ಯಾರ್ಥಿ ನಿಷ್ಕಲ್ ರಾವ್ ಹಾಗೂ ಆತನ ಸಹೋದರ ನಿಶ್ಚಿತ್ ರಾವ್ ಸೇರಿ ಶ್ರೀಹರಿ ತುಳು ಫಾಂಟ್ ಮಾಡಿದರು.
ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಜಿ.ವಿ.ಕೆ ಉಳ್ಳಾಲ ಅವರು ತುಳು ಅಕ್ಷರಮಾಲೆ ಪುಸ್ತಕದಲ್ಲಿ ಮುದ್ರಿಸಲಾದ ಅಕಾಡೆಮಿ ಅಂಗೀಕರಿಸಿದ ಲಿಪಿಯನ್ನು ನೀಡಿದರು. ಆ ಆಧಾರ ದಲ್ಲಿ ಸಿದ್ಧಗೊಂಡ ಫಾಂಟ್ ತುಳುಶ್ರೀ ತುಳು ಲಿಪಿ ಫಾಂಟ್. ಅದನ್ನೇ “ಕ-ನಾದ’ ಕೀಲಿಮಣೆಯಲ್ಲಿ ಬಳಸ ಲಾ ಗಿದ್ದು, ಕಂಪ್ಯೂಟರ್‌ನಲ್ಲಿ ತುಳುವಿನಲ್ಲಿ ಬರೆಯುವವರಿಗೆ ಸುಲಭ ಆಗುವಂತೆ ರೂಪಿಸಲಾಗಿದೆ ಎಂದು ನಮ್ಮ ತುಳುನಾಡು ಟ್ರಸ್ಟಿ ವಿದ್ಯಾಶ್ರೀ ಎಸ್.ಉಳ್ಳಾಲ ಹೇಳಿದರು.
* ಎಂ.ಕೀರ್ತಿಪ್ರಸಾದ್