ನೋಡುವಷ್ಟು ನೋಡಿ, ಹೊಸಬರು ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ಹೌಸ್‌ಫುಲ್ ಪ್ರದರ್ಶನದ ಅನುಮತಿಗೆ ಕಾದು ಸುಸ್ತಾದ ಹೊಸಬರು ಗಟ್ಟಿ ನಿರ್ಧಾರ ಮಾಡಿ, ತಮ್ಮ ಸಿನಿಮಾಗಳ ಬಿಡುಗಡೆಗೆ ಮುಂದಾಗಿದ್ದಾರೆ. ಈ ಮೂಲಕ ಸೆಪ್ಟೆಂಬರ್ ತಿಂಗಳನ್ನು ಪೂರ್ತಿ ಹೊಸಬರು ತಮ್ಮದಾಗಿಸಿ ಕೊಳ್ಳಲಿದ್ದಾರೆ.
ಹಾಗೆ ನೋಡಿದರೆ ಸೆ.10ಕ್ಕೆ ಶಿವ ರಾಜ್‌ಕುಮಾರ್ ಅಭಿನಯದ “ಭಜರಂಗಿ-2′ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ಶಿವಣ್ಣ ಅಭಿಮಾನಿಗಳಿಗೆ ಬೇಸರ ತಂದಿರಬಹುದು. ಆದರೆ, ಒಂದಷ್ಟು ಹೊಸಬರ ಸಿನಿಮಾಗಳು ಮಾತ್ರ ಈ ಗ್ಯಾಪ್‌ನಲ್ಲಿ ಬಿಡುಗಡೆ ಮಾಡಲು ಮುಂದಾಗಿವೆ. ಈಗಾಗಲೇ “ಲಂಕೆ’, “ಓಶೋ’, “ಆಶ್ಚರ್ಯ’, “ಚಡ್ಡಿದೋಸ್ತ್’, “ಜಿಗ್ರಿ ದೋಸ್ತ್’ ಸೇರಿದಂತೆ ಇನ್ನೂ ಒಂದಷ್ಟು ಸಿನಿಮಾಗಳು ಈ ತಿಂಗಳಲ್ಲೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಇದನ್ನೂ ಓದಿ:ಇಂದು ಅನಂತ್‌ನಾಗ್ ಬರ್ತ್‌ಡೇ: ಎವರ್‌ಗ್ರೀನ್ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು
ಇದರಲ್ಲಿ ಯೋಗಿ ಅಭಿನಯದ “ಲಂಕೆ’ಯೊಂದು ಬಿಟ್ಟರೆ ಮಿಕ್ಕಂತೆ ಬಹುತೇಕ ಸಿನಿಮಾಗಳು ಹೊಸಬರದ್ದೇ ಆಗಿವೆ. ಸೆ.10ಕ್ಕೆ ಯೋಗಿ ಅಭಿನಯದ “ಲಂಕೆ’, “ಓಶೋ’ ಹಾಗೂ “ಆಶ್ಚರ್ಯ’ ಎಂಬ ಚಿತ್ರಗಳು ತೆರೆಕಾಣಲಿವೆ. ಸೆ.17ರಂದು “ಚಡ್ಡಿದೋಸ್ತ್’, “ಜಿಗ್ರಿದೋಸ್ತ್’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದರ ಜೊತೆಗೆ ಇನ್ನೊಂದೆರಡು ಚಿತ್ರಗಳು ಕೂಡಾ ಬಿಡುಗಡೆಗೆ ಬರುವ ಸಾಧ್ಯತೆ ಇದೆ.
ಯಾಕೆ ಈ ನಿರ್ಧಾರ: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳು ಸಂಕಷ್ಟ ಎದುರಿಸುತ್ತಲೇ ಬರುತ್ತಿವೆ. ಅದು ರಿಲೀಸ್ ಸಮಯದಲ್ಲಿ. ಸ್ಟಾರ್ ಸಿನಿಮಾಗಳ ಮಧ್ಯೆ ರಿಲೀಸ್ ಆದರೂ ಸಮಸ್ಯೆ, ಹೊಸಬರ ನಾಲ್ಕೈದು ಚಿತ್ರಗಳ ಜೊತೆ ರಿಲೀಸ್ ಆದರೂ ಸಮಸ್ಯೆ. ಚಿತ್ರಮಂದಿರಗಳಿಗಾಗಿ “ಹೋರಾಟ’ ಮಾಡಬೇಕಾದ ಅನಿವಾರ್ಯತೆ. ಜೊತೆಗೆ ಚಿತ್ರಮಂದಿರಗಳ ಬಾಡಿಗೆ. ಈ ಎಲ್ಲಾ ಕಾರಣಗಳಿಂದಾಗಿ ಹೊಸಬರಿಗೆ ಸದ್ಯದ ಪರಿಸ್ಥಿತಿ ಸೂಕ್ತವಾಗಿದೆ. ಅತ್ತ ಕಡೆ ಚಿತ್ರಮಂದಿರಗಳು ಸಿಗುತ್ತವೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಶೋಗಳಿಗೆ ಅವಕಾಶವಿದೆ. ಜೊತೆಗೆ ಆರ್ಥಿಕವಾಗಿ ಹೊರೆಯೂ ಕಡಿಮೆಯಾಗುತ್ತದೆ. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಹೊಸಬರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಸ್ಪಷ್ಟತೆ ಇಲ್ಲದ ಸ್ಟಾರ್ ರಿಲೀಸ್: ಸ್ಟಾರ್ ಸಿನಿಮಾಗಳ ಬಿಡುಗಡೆ ಯಾವಾಗ ಎಂದು ಕೇಳಿದರೆ ಸದ್ಯಕ್ಕೆ ಉತ್ತರಿಸೋದು ಕಷ್ಟ. ಏಕೆಂದರೆ ಸ್ಟಾರ್ ಸಿನಿಮಾಗಳ ನಿರ್ಮಾಪಕರು ಚಿತ್ರಮಂದಿರಗಳ ಹೌಸ್‌ಫುಲ್ ಪ್ರದರ್ಶನದ ಅನುಮತಿಗೆ ಕಾಯುತ್ತಿದ್ದಾರೆ. ಅನುಮತಿ ಸಿಕ್ಕ ಬಳಿಕ ಯಾವ ಸ್ಟಾರ್ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ ಎಂಬ ಸ್ಪಷತೆ ಇನ್ನೂ ಸಿಕ್ಕಿಲ್ಲ.