ವೆಲ್ಲಿಂಗ್ಟನ್ : ಈಗಾಗಲೇ ಏಕದಿನ ಸರಣಿ ಸೋತಿರುವ ನ್ಯೂಜಿಲ್ಯಾಂಡ್ ತಂಡ ಮುಂಬರುವ T-20 ಸರಣಿಗೆ ಬಲಿಷ್ಠ ತಂಡವನ್ನೇ ಕಟ್ಟಿದೆ. ದೇಶೀಯ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ ಇಬ್ಬರು ಹೊಸ ಆಟಗಾರರು ಕಿವೀಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೂರು ಪಂದ್ಯಗಳ ಟಿ -ಟ್ವೆಂಟಿ ಸರಣಿಗೆ ತಂಡ ಪ್ರಕಟಿಸಿದ ಕಿವೀಸ್ ಕ್ರಿಕೆಟ್ ಮಂಡಳಿ ಆಲ್ ರೌಂಡರ್ ಡ್ಯಾರೆಲ್ ಮಿಚೆಲ್ ಮತ್ತು ಯುವ ವೇಗಿ ಬ್ಲೇರ್ ಟಿಕ್ನರ್ ಗೆ ಸ್ಥಾನ ನೀಡಿದೆ. ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿರುವ ಡ್ಯಾರೆಲ್ ಮಿಚೆಲ್ ಎಲ್ಲಾ ಮೂರು ಪಂದ್ಯಗಳಿಗೆ ಲಭ್ಯವಿದ್ದರೆ, ಟಿಕ್ನರ್ ಅಂತಿಮ ಪಂದ್ಯಕ್ಕೆ ಮಾತ್ರ ಲಭ್ಯವಾಗುತ್ತಾರೆ. ಇವರಿಗಾಗಿ ಲ್ಯೂಕಿ ಫರ್ಗ್ಯೂಸನ್ ಜಾಗ ತೆರವು ಮಾಡಲಿದ್ದಾರೆ.
ಕಳೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿಯಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಸೆತ್ ರಾನ್ಸ್ ತಂಡದಿಂದ ಹೊರಗುಳಿಯಲಿದ್ದಾರೆ. ಇವರೊಂದಿಗೆ ವೇಗಿ ಟ್ರೆಂಟ್ ಬೌಲ್ಟ್ ಗೂ ವಿಶ್ರಾಂತಿ ನಿಡಲಾಗಿದೆ.
ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ ಡ್ಯಾರೆಲ್ ನ್ಯೂಜಿಲ್ಯಾಂಡ್ ಎ ಪರವಾಗಿ 23 ಎಸೆತಗಳಲ್ಲಿ 61 ರನ್ ಸಿಡಿಸಿದ್ದರು. ಡೆತ್ ಓವರ್ ಗಳಲ್ಲಿ ನಿಖರ ಬೌಲಿಂಗ್ ನಡೆಸುವ ಡ್ಯಾರೆಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಕಾಲಿನ್ ಡಿ ಗ್ರಾಂಡ್ ಹೋಮ್, ಲ್ಯೂಕಿ ಫರ್ಗುಸನ್ (ಮೊದಲೆರಡು ಪಂದ್ಯಗಳಿಗೆ), ಡಗ್ ಬ್ರೇಸ್ ವೆಲ್, ಸ್ಕಾಟ್ ಕುಗ್ಲಿಜಿನ್, ಡ್ಯಾರೆಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಈಶ್ ಸೋಧಿ, ರಾಸ್ ಟೇಲರ್, ಬ್ಲೇರ್ ಟಿಕ್ನೆರ್ (ಕೊನೆಯ ಪಂದ್ಯಕ್ಕೆ).