Advertisement
ಕಳೆದ ಎರಡು ತಿಂಗಳಿನಿಂದಲೂ ಗುಜರಾತ್ ಮಾದರಿ ಎನ್ನುತ್ತಾ ಶಾಸಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಬಿಜೆಪಿ ವರಿಷ್ಠರು ಈ ಹೊಸ ಪ್ರಯೋಗ ಹಲವರಿಗೆ ಸಂತಸ, ಹಲವರಿಗೆ ಬೇಸರ ತಂದಿದೆ. ತಿಂಗಳಿಗೂ ಹೆಚ್ಚುಕಾಲ ಆಂತರಿಕ ಸಮೀಕ್ಷೆ, ಅಭ್ಯರ್ಥಿಗಳ ಜಾತಿಯ ಪ್ರಭಾವ ಇತ್ಯಾದಿ ಲೆಕ್ಕಾಚಾರವನ್ನು ಅಳೆದು ತೂಗಿ ಮೊದಲ ಹಂತದಲ್ಲಿ ಕರಾವಳಿಯ 13ರಲ್ಲಿ 12 ಸ್ಥಾನಗಳಿಗೆ ಏ.11ರಂದು ಹಾಗೂ ಬೈಂದೂರಿಗೆ 12ರಂದು ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಪುತ್ತೂರು ಹಾಗೂ ಸುಳ್ಯದಲ್ಲಿ ಅಭ್ಯರ್ಥಿ ಬದಲಾವಣೆಗೆ ಬಹಳಷ್ಟು ಒತ್ತಡ ಕಾರ್ಯಕರ್ತರಿಂದಲೇ ಇತ್ತು. ಪುತ್ತೂರಿನಲ್ಲಿ ಶಾಸಕರ ಫೋಟೊ ವೈರಲ್ ಆಗಿದ್ದು ಅವರ ಟಿಕೆಟ್ ನಿರಾಕರಣೆಯ ಹಲವು ಕಾರಣಗಳಲ್ಲಿ ಒಂದು. ವರ್ಷದ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಸುಳ್ಯ, ಪುತ್ತೂರು ಎರಡೂ ಕ್ಷೇತ್ರಗಳ ಶಾಸಕರ ಮೇಲೆ ಕಾರ್ಯಕರ್ತರು ಮುನಿಸಿಕೊಂಡಿದ್ದು ಇದುವರೆಗೂ ಶಮನ ಗೊಂಡಿಲ್ಲ.
Related Articles
Advertisement
ಸೋಲನುಭವಿಸುತ್ತಿದ್ದುದೇ ಜಾಸ್ತಿ: ಇದುವರೆಗೆ ಕರಾವಳಿ ಬಿಜೆಪಿಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಶಾಸಕರು-ಸಚಿವರನ್ನು ಬದಲಿಸಿದ ನಿದರ್ಶನ ಸಿಗುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಮತದಾರರ /ಕಾರ್ಯಕರ್ತರ ಬೇಸರದ ಮಧ್ಯೆ ಟಿಕೆಟ್ ಪಡೆದು ಕಣಕ್ಕಿಳಿದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲನುಭವಿಸುತ್ತಿದ್ದರು.
2013ರಲ್ಲಿ ಆಗಿನ ಬಿಜೆಪಿ ಸರಕಾರದ ವಿರುದ್ಧ ಇದ್ದ ಜನಾಭಿಪ್ರಾಯದಿಂದ ಸುಳ್ಯ ಬಿಟ್ಟು ಉಳಿದ ಕ್ಷೇತ್ರ ಕಳೆದುಕೊಂಡಿದ್ದರೆ 2018ರಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ ಕರಾವಳಿಯಲ್ಲಿ ಬಿಜೆಪಿಯು ಮಂಗಳೂರು ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವನ್ನೂ ಗೆದ್ದುಕೊಂಡಿತ್ತು.
ಪರಿಣಾಮವೇನಾಗಬಹುದು?ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಹೊಸ ಪ್ರಯೋಗವಾದ ಕಾರಣ ಇದರ ಪರಿಣಾಮವೇನಾ ಗಬಹುದು ಎನ್ನುವುದು ಸದ್ಯದ ಕುತೂಹಲ. ಕೆಲವೊಂದು ಕಡೆ ಶಾಸಕರ ಬೆಂಬಲಿಗರ ಬೇಸರ ವ್ಯಕ್ತವಾದರೂ ಇದು ಚುನಾವಣೆಯಲ್ಲಿ ಪರಿಣಾಮ ಬೀರದು. ಬಿಜೆಪಿ ಸೈದ್ಧಾಂತಿಕವಾಗಿ ಬಲವಾಗಿರುವ ಪಕ್ಷ. ಅಲ್ಲದೆ ಮತದಾರರು ಹೊಸ ಮುಖಗಳನ್ನು ಸ್ವಾಗತಿಸುತ್ತಾರೆ. ಹಾಗಾಗಿ ಕರಾವಳಿಯಲ್ಲಿ ಮತ್ತೆ ಕೇಸರಿ ಬಾವುಟ ಹಾರುವುದು ಪಕ್ಕಾ ಎನ್ನುವುದು ಪಕ್ಷದ ನಾಯಕರ ಲೆಕ್ಕಾಚಾರ. ~ ವೇಣುವಿನೋದ್ ಕೆ.ಎಸ್.