Advertisement

ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ: ಅಜಯಸಿಂಗ್‌

04:11 PM Jan 30, 2021 | Team Udayavani |

ಕಲಬುರಗಿ: ಸ್ವ ಗ್ರಾಮ ನೆಲೋಗಿಯಲ್ಲೂ ಒಂದಿನವೂ ವಾಸ್ತವ್ಯ ಮಾಡಿಲ್ಲ. ಕಲಬುರಗಿಯಲ್ಲೇ ಸ್ನಾನ, ಇತ್ಯಾದಿ ಮುಗಿಸಿಕೊಂಡು ಬರುತ್ತಿದ್ದೆ. ಜೇರಟಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದು ನಿಜಕ್ಕೂ ಹೊಸ ಅನುಭವ ನೀಡಿತು ಎಂದು ಜೇವರ್ಗಿ ಕ್ಷೇತ್ರದ ಶಾಸಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್‌ ತಿಳಿಸಿದರು.

Advertisement

ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಕೈಗೊಳ್ಳಲಾಗಿದ್ದ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಯಲ್ಲಿ ವಾಸ್ತವ್ಯ ಮಾಡಿ, ಸ್ನಾನ ಮಾಡಿದ ಉದಾಹರಣೆಯೇ ಇರಲಿಲ್ಲ. ಹೀಗಾಗಿ ಗ್ರಾಮ ವಾಸ್ತವ್ಯ ಹೊಸ ಅನುಭವ ನೀಡಿತ್ತಲ್ಲದೇ ಜನರ ಸಮಸ್ಯೆಗಳನ್ನು ಅವರೊಂದಿಗೆ ಬೆರೆತು ಅರಿಯಲು ಸಾಧ್ಯವಾಯಿತು ಎಂದರು.

ಹೆಣ್ಣು ಮಕ್ಕಳು ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೆ, ರೈತರು ಸಾಲ ಮನ್ನಾದಲ್ಲಿ ಗೊಂದಲಗಳಿದ್ದು ಪರಿಹರಿಸಲು ಸರ್ಕಾರದ ಮೇಲೆ
ಒತ್ತಡ ಹಾಕಲು ಅಳಲು ತೋಡಿಕೊಂಡಿದ್ದಾರೆ. ಅಂಗವಿಕಲರು ತ್ರಿಚಕ್ರವಾಹನ ನೀಡುವಂತೆ, ಗ್ರಾಮಸ್ಥರು ಬಸ್‌ ನಿಲ್ದಾಣ, ರಸ್ತೆ ನಿರ್ಮಿಸುವ ಕುರಿತು ಅಹವಾಲು ನೀಡಿದ್ದಾರೆ. ತಿಂಗಳೊಳಗೆ ಇವುಗಳಿಗೆಲ್ಲ ಸ್ಪಂದಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಿಂಗಳ ನಂತರ ಆಯಾ ಜನರಿಗೆ ಪತ್ರ ಬರೆದು ಯಾವ ನಿಟ್ಟಿನಲ್ಲಿ ಕೆಲಸ ಆಗಿದೆ ಹಾಗೂ ಯಾವ ಪ್ರಯತ್ನ ನಡೆದಿದೆ ಎನ್ನುವ ಕುರಿತು ವಿವರಣೆ ನೀಡಲಾಗುವುದು ಎಂದರು.

2019-20ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ, 2020-21ರಲ್ಲಿ ಕೊರೊನಾದಿಂದ ಆರ್ಥಿಕ ಸ್ಥಿತಿ ಕುಸಿತವಾಗಿದ್ದರಿಂದ ಸೂಕ್ತ ಅನುದಾನ ಬಿಡುಗಡೆಯಾಗಿಲ್ಲ. ಈ ವರ್ಷ ಅನುದಾನ ಬಿಡುಗಡೆ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ತಿಳಿಸಲಾಗಿದೆ. ಅನುದಾನ ಬಂದ ನಂತರ ಗ್ರಾಮ ವಾಸ್ತವ್ಯದಲ್ಲಿ ಬೇಡಿಕೆ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು. ಒಟ್ಟಾರೆ ಗ್ರಾಮ ವಾಸ್ತವ್ಯವನ್ನು ಧನಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ವಾಸ್ತವ್ಯ ಮಾಡಿರುವ ಮೋದಿನ್‌ಸಾಬ್‌ ಮನೆ ಬಿದಿದ್ದು, ಮನೆ ಹಾಕಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಗ್ರಾಮ ವಾಸ್ತವ್ಯ ಯಡ್ರಾಮಿ ತಾಲೂಕಿನಲ್ಲಿ ಕೈಗೊಳ್ಳುವೆ. ಸುಮ್ಮನೆ ಗ್ರಾಮ ವಾಸ್ತವ್ಯ ಮಾಡಲ್ಲ. ದೂರುಗಳು ಏನಾಗಿವೆ ಎನ್ನುವುದನ್ನು ಪರಾಮರ್ಶಿಸಲಾಗುವುದು ಎಂದರು. ಜೇವರ್ಗಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರುಕುಂ ಪಟೇಲ್‌ ಪೊಲೀಸ್‌ ಪಾಟೀಲ, ಮುಖಂಡರಾದ ರಾಜಶೇಖರ ಸೀರಿ, ಕಾಶೀಂ ಪಟೇಲ್‌, ಶರಣಬಸಪ್ಪ ಜೋಗುರ, ಅಣ್ಣರಾವ ದೇಶಮುಖ ಮುಂತಾದವರಿದ್ದರು.

Advertisement

ಸರ್ಕಾರಕ್ಕೆ ಪ್ರೋತ್ಸಾಹಧನ ನೀಡಲು ಯೋಗ್ಯತೆಯಿಲ್ಲ

ಕಲಬುರಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಮಸ್ಯೆಗಳಿಗೆ ಆಲಿಸಲು ಕಣ್ಣು ಇಲ್ಲ, ಕಿವಿಯೂ ಇಲ್ಲ. ಸರ್ಕಾರದ ಧೋರಣೆಗಳ ವಿರುದ್ಧ ಜನರು ರೋಸಿ ಹೋಗಿದ್ದಾರೆ. ಹಿಡಿಶಾಪ ಹಾಕುತ್ತಿದ್ದಾರೆ. ಈಗಲಾದರೂ ಅರಿತು ಸರ್ಕಾರ ಜನಪರ ಆಡಳಿತ ನಡೆಸಲಿ ಎಂದು ಡಾ| ಅಜಯಸಿಂಗ್‌ ಆಗ್ರಹಿಸಿದರು. ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದರೂ ಯಾವ ಖರೀದಿ ಕೇಂದ್ರದಲ್ಲೂ ನಯಾಪೈಸೆ ತೊಗರಿ ಖರೀದಿಯಾಗಿಲ್ಲ. ರಾಜ್ಯ ಸರ್ಕಾರ ಪ್ರೋತ್ಸಾಹಧನ ಕೊಡದಿರುವುದೇ ಇದಕ್ಕೆ ಕಾರಣವಾಗಿದೆ.

ದಶಕದ ಅವಧಿಯಿಂದ ಪ್ರೋತ್ಸಾಹಧನ ಕೊಡುತ್ತಾ ಬರಲಾಗಿದೆ. ಆದರೆ ಈ ವರ್ಷ ರಾಜ್ಯ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ಪ್ರೋತ್ಸಾಹ ಧನ ನೀಡಲು ಯೋಗ್ಯತೆಯಿಲ್ಲ ಎನ್ನುವುದನ್ನು ನಿರೂಪಿಸುತ್ತದೆ ಎಂದು ವಾಗ್ಧಾಳಿ ನಡೆಸಿದರು.

ಕೊನೆ ಹಳ್ಳಿಯಾಗಿರುವ ಜೇರಟಗಿಯನ್ನು ಮೊದಲ ಬಾರಿ ಗ್ರಾಮ ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿದ್ದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಲಾಗುವುದು. ಬಿಜೆಪಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕವೆಂದರೆ ಅಲರ್ಜಿ. ಇದೇ ಕಾರಣಕ್ಕೆ ಈ ಭಾಗಕ್ಕೆ ಅನುದಾನ ಕೊಡ್ತಾ ಇಲ್ಲ.
ಡಾ| ಅಜಯಸಿಂಗ್‌, ಶಾಸಕ, ಜೇವರ್ಗಿ

Advertisement

Udayavani is now on Telegram. Click here to join our channel and stay updated with the latest news.

Next