ಮಂಗಳೂರು: ಗೋವಾದಲ್ಲಿ ನಡೆದ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮ ವಿಭಾಗದಲ್ಲಿ ಆಯ್ಕೆಗೊಂಡ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಯ “ರೈಲ್ವೇ ಚಿಲ್ಡ್ರನ್’ ಡಿಸೆಂಬರ್ ಕೊನೆಯ ವಾರದಲ್ಲಿ ತೆರೆಕಂಡಿದೆ . ಇತ್ತೀಚೆಗೆ ಹೊಸ ಅಲೆಯ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಚಿತ್ರರಂಗದ ಮಟ್ಟಿಗೆ ಆಶಾದಾಯಕ ಬೆಳವಣಿಗೆ. ತಿಥಿ, ರಾಮಾ ರಾಮಾ ರೇ, ಒಂದು ಮೊಟ್ಟೆಯ ಕಥೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜಿಜ್ಞಾಸೆ ಹುಟ್ಟು ಹಾಕಿರುವ ಇತ್ತೀಚಿನ ಸಿನೆಮಾಗಳು. ಇದೇ ಸಾಲಿಗೆ ರೈಲ್ವೇ ಚಿಲ್ಡ್ರನ್ ಸೇರ್ಪಡೆಗೊಳ್ಳುವ ನಿರೀಕ್ಷೆ ಮೂಡಿಸಿದೆ.
ಪ್ರಶಸ್ತಿ, ಶ್ಲಾಘನೆ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆದಾಗಲೇ ಈ ಚಿತ್ರ ಸುದ್ದಿ ಮಾಡಿತ್ತು. ಉತ್ತಮ ನಟನ ಕೌಶಲಕ್ಕಾಗಿ ಈ ಚಿತ್ರದ ಮನೋಹರ್ ಕೆ. ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ನಂತರ ಅವರಿಗೆ ಶ್ರೇಷ್ಠ ನಟನೆಗಾಗಿ ರಾಜ್ಯ ಪ್ರಶಸ್ತಿಯೂ ದೊರಕಿತ್ತು. ಕರ್ನಾಟಕ ಸರಕಾರ ರೈಲ್ವೇ ಚಿಲ್ಡ್ರನ್ ಚಿತ್ರವನ್ನು ಕಳೆದ ಸಾಲಿನ ಎರಡನೇ ಅತ್ಯುತ್ತಮ ಚಲನಚಿತ್ರ ವೆಂದು ಗುರುತಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರುಗಳಿಸಿದ ಈ ಚಿತ್ರಕ್ಕೆ, ವಿಮರ್ಶಕರ ಮುಕ್ತ ಕಂಠದ ಹೊಗಳಿಕೆ ದೊರಕಿದೆ. ಝಿÉನ್ ಅಂತಾರಾಷ್ಟ್ರೀಯ ಚಲಚಿತ್ರೋತ್ಸವದಲ್ಲಿ ರೈಲ್ವೇ ಚಿಲ್ಡ್ರನ್ ಈಕ್ಯುಮೇನಿಕಲ್ ಜ್ಯೂರಿ ಅವಾರ್ಡ್ ಗಳಿಸಿತು. ಹೊಸತನದ ಕಥೆ ಮತ್ತು ಅದರ ನಿರ್ವಹಣೆಯಲ್ಲಿನ ನಾವೀನ್ಯಕ್ಕೆ ನೀಡಲಾಗುವ ಪ್ರಶಸ್ತಿ ಇದು.
ಬಾರ್ಸಿಲೋನಾದಲ್ಲಿ ನಡೆದ ದಕ್ಷಿಣ ಏಷ್ಯಾಗಳ ಚಲಚಿತ್ರೋತ್ಸವದಲ್ಲಿ ರೈಲ್ವೇ ಚಿಲ್ಡ್ರನ್ ತೀರ್ಪುಗಾರರ ಮೆಚ್ಚುಗೆ ಗಳಿಸಿದರೆ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಮುಕ್ತಾಯಗೊಂಡ ಆಲ್‌ಲೈಟ್ಸ್ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾರತೀಯ ಪನೋರಮ ವಿಭಾಗದ ಶ್ರೇಷ್ಠ ಚಲಚಿತ್ರಕ್ಕಿರುವ ಪ್ರಶಸ್ತಿಯನ್ನು ಬಾಚಿಕೊಂಡಿದೆ.