ಧಾರವಾಡ: ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರುವ ಪ್ರಮುಖ ಜವಾಬ್ದಾರಿಯನ್ನು ಧಾರವಾಡದಲ್ಲಿರುವ ಸಿಸ್ಲೆಪ್‌ಗೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ ರಾಜ್ಯ ಶಾಲಾ ನಾಯ ಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣ ಸಂಸ್ಥೆಗೆ (ಸಿಸ್ಲೆಪ್) ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಸಿಸ್ಲೆಪ್ ಸಂಸ್ಥೆಯ ಕಾರ್ಯ ಮಹತ್ವದ್ದಾಗಿದೆ. ಸರಳ, ನೈತಿಕ, ಜವಾಬ್ದಾರಿಯುತ, ಪ್ರತಿಕ್ರಿಯಾತ್ಮಕ ಹಾಗೂ ಪಾರದರ್ಶಕ ಗುಣವುಳ್ಳ ಶಾಲಾ ನಾಯಕತ್ವ ಮತ್ತು ಶೈಕ್ಷಣಿಕ ಯೋಜನೆ ರೂಪಿಸುವ ಕಾರ್ಯವನ್ನು ಸಿಸ್ಲೆಪ್ ಮಾಡಲಿದೆ ಎಂದರು.
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಗಿರಿಧರ ರಚಿಸಿರುವ Ordinary People Extraordinary Teacher ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ, ಶಿಕ್ಷಕರಿಗೆ ತರಬೇತಿ ಅವಧಿಯಲ್ಲಿ ಒದಗಿಸುವ ಕಾರ್ಯ ಕೈಗೊಳ್ಳಲು ಸಿಸ್ಲೆಪ್ ನಿರ್ದೇಶಕರಿಗೆ ಸೂಚಿಸಿದರು.
ಸೆ. 12ರಂದು ಮಾರ್ಗಸೂಚಿ ಪ್ರಕಟ
ಕೇಂದ್ರ ಸರಕಾರದಿಂದ ಹಸಿರು ನಿಶಾನೆ ಬಂದ ಬಳಿಕವೇ ಶಾಲೆ ಗಳನ್ನು ಆರಂಭಿಸಲಾಗುವುದು. ಅದಕ್ಕೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ, ಸಲಹೆ ಪಡೆಯ ಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದರು. ಸೆ. 21ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿ ಗಳು ಶಾಲೆಗೆ ಆಗಮಿಸಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಅವಕಾಶವಿದೆ. ಈ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಂದಿದ್ದು, ರಾಜ್ಯದ ಮಾರ್ಗಸೂಚಿಯನ್ನು ಸೆ. 12ರಂದು ಪ್ರಕಟಿಸುತ್ತೇವೆ ಎಂದರು.