ನವದೆಹಲಿ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ವಕೀಲರಿಗೆ ಹಾಗೂ ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್‌ನಿಂದ ಶೀಘ್ರವೇ ‘ವಸ್ತ್ರ ಸಂಹಿತೆ’ ನೀತಿ ರೂಪಿಸುವ ಸಾಧ್ಯತೆ ಇದೆ.
ಗೌನ್‌ನಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ವಕೀಲರು, ಜಡ್ಜ್ ಗಳು ನಿಲುವಂಗಿ ಧರಿಸದಂತೆ ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆ ಈ ಅಂಶ ಪ್ರಸ್ತಾವವಾಯಿತು. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಬೋಬ್ಡೆ, ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ, ಹೃಷಿಕೇಶ್ ರಾಯ್ ನೇತೃತ್ವದ ಪೀಠದ ಮುಂದೆ ವಕೀಲ ಕಪಿಲ್ ಸಿಬಲ್, ‘ಈ ಪೀಠದಲ್ಲಿ ನ್ಯಾಯಮೂರ್ತಿಗಳ ನಿಲುವಂಗಿ ಇಲ್ಲ’ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬೋಬ್ಡೆ, ಕೋವಿಡ್ ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಡ್ಜ್ ಗಳು, ವಕೀಲರು ನಿಲುವಂಗಿ ಧರಿಸದಂತೆ ಶೀಘ್ರ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ರಜೆ ಕಡಿತ: ಸುಪ್ರೀಂಕೋರ್ಟ್ ತನ್ನ ಏಳು ವಾರಗಳ ಅವಧಿಯ ಬೇಸಿಗೆ ರಜೆಯನ್ನು ಕಡಿತ ಮಾಡಿದೆ. ಮೇ 17ರ ಬಳಿಕ ನ್ಯಾಯಾಲಯದ ಕಾರ್ಯಚಟುವಟಿಕೆಗಳು ಶುರುವಾಗಲಿವೆ.