ಬಾಗಲಕೋಟೆ: ರಾಜ್ಯದಲ್ಲಿ 100 ಹಾಗೂ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ 6 ಹೊಸ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರದ ಎಂಸಿಎಚ್ ಯೋಜನೆಯಡಿ ಮಂಜೂರಾಗಿವೆ. ಅದರಲ್ಲಿ ಜಮಖಂಡಿಗೆ 100 ಹಾಸಿಗೆಯ ಹೊಸ ಆಸ್ಪತ್ರೆ ಮಂಜೂರಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಯಿ ಮತ್ತು ಮಗುವಿನ ಆರೈಕೆಗಾಗಿ 100 ಹಾಸಿಗೆಯ ಆಸ್ಪತ್ರೆ ಮಂಜೂರಾಗಿದ್ದು, ರಾಜ್ಯ ಸರ್ಕಾರದಿಂದ ಇದಕ್ಕಾಗಿ 22 ಕೋಟಿ ಖರ್ಚು ಮಾಡಲಾಗುತ್ತಿದೆ. ಈಗಿರುವ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ, ಶೀಘ್ರವೇ ಈ ಹೊಸ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದರು.
3 ತಿಂಗಳಲ್ಲಿ ಹೆರಕಲ್ ಯೋಜನೆ: ಬಾಗಲಕೋಟೆ ನಗರ ಹಾಗೂ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಿಟಿಡಿಎಯಿಂದ ಕೈಗೊಂಡ 69 ಕೋಟಿ ವೆಚ್ಚದ ಹೆರಕಲ್ ಕುಡಿಯುವ ನೀರು ಪೂರೈಕೆ ಯೋಜನೆ ಕೆಲವು ಸಮಸ್ಯೆಗಳಿಂದ ಆರು ವರ್ಷದಿಂದ ಪೂರ್ಣಗೊಂಡಿಲ್ಲ. ಈ ಕುರಿತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿದ್ದು, ಈ ವಾರದಲ್ಲಿ ಕೆಡಿಪಿ ಸಭೆ ಕೂಡ ನಡೆಸಲಿದ್ದೇವೆ. ಆ ವೇಳೆ ಈ ಯೋಜನೆ ವಿಳಂಬದ ಕುರಿತು ಸಮಗ್ರ ಮಾಹಿತಿ ಪಡೆಯಲಾಗುವುದು. ಈಗಾಗಲೇ ಈ ಯೋಜನೆ ಪೂರ್ಣಗೊಳಿಸಲು 3 ತಿಂಗಳ ಕಾಲಾವಶವನ್ನು ಅಧಿಕಾರಿಗಳು ಕೇಳಿದ್ದಾರೆ. ಬೇಸಿಗೆ ವೇಳೆ ಈ ಯೋಜನೆಯಡಿ ನೀರು ಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಸಧ್ಯಕ್ಕಿಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು: ಇಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಲಾಗಿದೆ. ಆದರೆ, ನಿಯಮಾವಳಿ ಪ್ರಕಾರ 500 ಹಾಸಿಗೆಯ ಆಸ್ಪತ್ರೆ ಇರಬೇಕು. ಸಧ್ಯಕ್ಕೆ 400 ಹಾಸಿಗೆಯ ಜಿಲ್ಲಾ ಆಸ್ಪತ್ರೆ ಇದೆ. ಅಲ್ಲದೇ 600 ಕೋಟಿ ಹಣ ಬೇಕು.
ಅನುದಾನದ ಸಮಸ್ಯೆ ಇಲ್ಲ. ಆದರೆ, ಕನಿಷ್ಠ 60 ಎಕರೆ ಭೂಮಿಬೇಕು. 500 ಹಾಸಿಗೆಯ ಆಸ್ಪತ್ರೆ ಹಾಗೂ 60 ಎಕರೆ ಭೂಮಿ ಕೊರತೆಯಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಂಡಿಲ್ಲ. ಹಾಗಂತ, ರದ್ದುಪಡಿಸಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಬಿಟಿಡಿಎ ಅನುದಾನ ಬಳಸಿಲ್ಲ : ನವನಗರ 2 ಮತ್ತು 3ನೇ ಹಂತದ ಅಭಿವೃದ್ಧಿಗೆ ಆದ್ಯತೆ ಕೊಡಲಾಗಿದೆ. ಬಿಟಿಡಿಎ ಆಡಳಿತ ಮಂಡಳಿಇರದಿದ್ದರೂ ಸಮಸ್ಯೆ ಇಲ್ಲ. ಆಡಳಿತ ಮಂಡಳಿ ಇದ್ದಾಗಿನಕ್ಕಿಂತಲೂ ಹೆಚ್ಚಿನ ಕೆಲಸ ಈಗ ನಡೆದಿವೆ. ಆದರೆ, ಕಳೆದ ವರ್ಷ ನೀಡಿದ್ದ ಅನುದಾನವನ್ನೇ ಬಿಟಿಡಿಎ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಿಲ್ಲ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು