ಬೆಂಗಳೂರು: ವಿದ್ಯಾರ್ಥಿಗಳು ಹೊಸ ಆವಿಷ್ಕಾರದೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸಲಹೆ ನೀಡಿದರು. ಪಿಇಎಸ್ ವಿಶ್ವವಿದ್ಯಾಲಯವು ಶನಿವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ. ಸಿಎನ್‌ಆರ್ ರಾವ್ ಹಾಗೂ ಪ್ರೊ. ಎಂ.ಆರ್.ಡಿ ಹೆಸರಿನಲ್ಲಿ ಅತ್ಯುನ್ನತ ಶ್ರೇಣಿ ಪಡೆದ 3774 ವಿದ್ಯಾರ್ಥಿಗಳಿಗೆ 2.35 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಕನ್ನಂಬಾಡಿ ಕಟ್ಟೆ, ವಿಧಾನಸೌಧ ನಿರ್ಮಿಸಿದ ಇಂಜಿನಿಯರ್‌ಗಳು ದೂರದೃಷ್ಟಿ ಚಿಂತನೆ ಹೊಂದಿದ್ದರಿಂದಲೇ ಈ ಕಟ್ಟಡಗಳು ಶಾಶ್ವತವಾಗಿ ಉಳಿದಿವೆ. ಇಂದಿನ ವಿದ್ಯಾರ್ಥಿಗಳು ಕೂಡ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಓದಿನಿಂದ ಧೈರ್ಯ, ನಾಯಕತ್ವ ಗುಣ, ಸ್ವಾವಲಂಬನೆ ಜೀವನ ಸಾಧ್ಯವಾಗುತ್ತದೆ. ಮೌಲ್ಯಯುಳ್ಳ ಶಿಕ್ಷಣ ದೊರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬಹುದು. ವಿದ್ಯಾರ್ಥಿಗಳು ದೂರದೃಷ್ಟಿಯಿಂದ ಆಲೋಚಿಸುವ ಮೌಲ್ಯಯುತ ಶಿಕ್ಷಣವನ್ನು ಕಾಲೇಜುಗಳು ನೀಡಿದಾಗ ದೇಶ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಅಧ್ಯಕ್ಷ ಎಂ.ಕೆ. ಶಂಕರ ಲಿಂಗೇಗೌಡ ಮಾತನಾಡಿ, ಆರ್ಥಿಕ ಸರ್ವೆ ಪ್ರಕಾರ ಭಾರತವು 6ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ಜಪಾನ್, ಇಂಗ್ಲೆಂಡ್, ಜರ್ಮನಿ ಬಳಿಕ ಭಾರತವಿದೆ. 2025ರ ವೇಳೆಗೆ ಅಮೆರಿಕವನ್ನು ಚೀನಾ ಹಿಂದಿಕ್ಕುವ ರೀತಿಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ವಿದ್ಯಾರ್ಥಿಗಳ ವಿನೂತನ ಯೋಚನೆ, ಆಲೋಚನಾ ಕ್ರಮ ಅಗತ್ಯ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ದೊರೆಯುವಷ್ಟು ಪ್ರಮಾಣದಲ್ಲಿ ಉನ್ನತ ಶಿಕ್ಷಣ ಸಿಗುತ್ತಿಲ್ಲ. ಇದಕ್ಕಾಗಿ ಸೆಂಟರ್ ಫಾರ್ ಎಕ್ಸಲೆನ್ಸ್ ಕೇಂದ್ರ ಆರಂಭಿಸಿ, ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಿಇಎಸ್ ವಿವಿ ಕುಲಾಧಿಪತಿ ಪ್ರೊ. ಎಂ.ಆರ್. ದೊರೆಸ್ವಾಮಿ, ಕುಲಪತಿ ಡಾ.ಕೆ.ಎನ್.ಬಾಲಸುಬ್ರಹ್ಮಣ್ಯ, ಪ್ಲೇಸ್‌ಮೆಂಟ್ ಅಧಿಕಾರಿ ಶ್ರೀಧರ್ ಪಾಲ್ಗೊಂಡಿದ್ದರು.