ನವದೆಹಲಿ: ದೆಹಲಿಯ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್ ನ (Coaching Institute) ನೆಲಮಾಳಿಗೆಯಲ್ಲಿ ಪ್ರವಾಹದಿಂದಾಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿ (UPSC Aspirants) ವಿದ್ಯಾರ್ಥಿಗಳು ಸಾವನ್ನಪ್ಪಿದ ದುರಂತ ಘಟನೆಯ ಹಿಂದಿನ ಸತ್ಯವನ್ನು ಪತ್ತೆ ಮಾಡಲು ದೆಹಲಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಪಶ್ಚಿಮ ದೆಹಲಿಯ ಜನಪ್ರಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ನೀರು ಹಠಾತ್ತನೆ ಪ್ರವೇಶಿಸಿದ ನಂತರ ನಾಲ್ಕು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಂದ್ರ ನಗರದ ರಾವ್ ಐಎಎಸ್ ಸ್ಟಡಿ ಸರ್ಕಲ್ ನ ನೆಲಮಾಳಿಗೆಯು ಶನಿವಾರ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಶನಿವಾರ ರಾತ್ರಿ 7.19 ಕ್ಕೆ ವಿದ್ಯಾರ್ಥಿಗಳು ನೆಲಮಾಳಿಗೆಯಲ್ಲಿ ಸಿಲುಕಿರುವ ಬಗ್ಗೆ ತಮಗೆ ಕರೆ ಬಂದಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಐದು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಮಹಿಳಾ ವಿದ್ಯಾರ್ಥಿಗಳು ಮತ್ತು ಓರ್ವ ಪುರುಷ ಘಟನೆಯಲ್ಲಿ ಅಸುನೀಗಿದ್ದಾರೆ.
ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಫೋರೆನ್ಸಿಕ್ ತಂಡಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿವೆ ಎಂದು ಕೇಂದ್ರೀಯ ಪೊಲೀಸ್ ಉಪ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದ್ದಾರೆ.
“ನಾವು ಸೂಕ್ತ ತನಿಖೆ ನಡೆಸಬೇಕು ಎಂಬ ಅಂಶಕ್ಕೆ ನಾವು ಬದ್ಧರಾಗಿದ್ದೇವೆ. ಬಲವಾದ ಪ್ರಕರಣವನ್ನು ದಾಖಲಿಸಲು ಮತ್ತು ಸತ್ಯವನ್ನು ಕಂಡುಹಿಡಿಯಲು ನಾವು ಬದ್ಧರಾಗಿದ್ದೇವೆ. ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ” ಎಂದು ಹರ್ಷವರ್ಧನ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.