Advertisement

New Delhi: ಅಕ್ರಮ ಬಂಧನ: ಪೊಲೀಸರಿಗೆ 50 ಸಾವಿರ ರೂ. ದಂಡ

10:26 PM Oct 06, 2023 | Team Udayavani |

ನವದೆಹಲಿ: ಅಕ್ರಮವಾಗಿ ಬಂಧಿಸಿ, ಸುಮಾರು 30 ನಿಮಿಷಗಳ ಕಾಲ ವ್ಯಕ್ತಿಯನ್ನು ಲಾಕಪ್‌ನಲ್ಲಿ ಇರಿಸಿದಕ್ಕಾಗಿ ಪೊಲೀಸರಿಗೆ ದೆಹಲಿ ಹೈಕೋರ್ಟ್‌ 50 ಸಾವಿರ ರೂ. ದಂಡ ವಿಧಿಸಿದೆ. ನಾಗರಿಕರನ್ನು ನಡೆಸಿಕೊಳ್ಳುವಲ್ಲಿ ಪೊಲೀಸ್‌ ಅಧಿಕಾರಿಗಳ ವರ್ತನೆಯು “ಭಯಾನಕ’ವಾಗಿದೆ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುಬ್ರಮಣ್ಯಂ ಪ್ರಸಾದ್‌ ಅವರಿದ್ದ ನ್ಯಾಯಪೀಠ, ಕಾನೂನುಬಾಹಿರವಾಗಿ ಬಂಧನಕ್ಕೊಳಪಟ್ಟ ವ್ಯಕ್ತಿಗೆ 50,000 ರೂ. ಪರಿಹಾರ ಘೋಷಿಸಿತು. ಈ ಮೊತ್ತವನ್ನು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳ ಸಂಬಳದಿಂದ ನೀಡಬೇಕು ಎಂದು ಆದೇಶಿಸಿತು.

“ನಿರಾಕಾರಣವಾಗಿ ಅರ್ಜಿದಾರರನ್ನು ಬಂಧಿಸಿ, ಲಾಕಪ್‌ನಲ್ಲಿ ಇರಿಸಲಾಗಿದೆ. ಬಂಧನದ ಅವಧಿ ಕಡಿಮೆ ಇದ್ದರೂ ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಅರ್ಜಿದಾರರ ವೈಯಕ್ತಿಕ ಸ್ವಾತಂತ್ರ್ಯವನ್ನು ಲೆಕ್ಕಿಸಿಲ್ಲ ಹಾಗೂ ಕಾನೂನು ಪ್ರಕ್ರಿಯೆಯನ್ನು ಪಾಲಿಸಿಲ್ಲ. ಪೊಲೀಸ್‌ ಅಧಿಕಾರಿಗಳು ಕಾನೂನಿಗಿಂತ ದೊಡ್ಡವರಲ್ಲ’ ಎಂದು ಖಾರವಾಗಿ ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಹಿಳೆ ಮತ್ತು ತರಕಾರಿ ಮಾರಾಟಗಾರನ ನಡುವಿನ ವಿವಾದಕ್ಕೆ ಸಂಬಂಧಿಸಿದ ದೂರಿನ ಆಧಾರದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳದೇ, ಅಕ್ರಮವಾಗಿ ಅರ್ಜಿದಾರರನ್ನು ವಶಕ್ಕೆ ಪಡೆದು, ಲಾಕಪ್‌ನಲ್ಲಿ ಪೊಲೀಸರು ಇರಿಸಿದ್ದರು. ಇದರ ವಿರುದ್ಧ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲು ಏರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next