ಉಡುಪಿ: ನವರಾತ್ರಿ, ದೀಪಾವಳಿ ಹೀಗೆ ಹಬ್ಬಗಳ ಸರಣಿಗಳು ಬರುತ್ತಿರುವಂತೆ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಬ್ಬಗಳ ಸಮಯದಲ್ಲಿ ದೇವಸ್ಥಾನಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿರುವುದರಿಂದ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗಿದೆ. ಈಗಾಗಲೇ ಅನ್ನಸಂತರ್ಪಣೆ ನಡೆಯುತ್ತಿದ್ದ ದೇವಸ್ಥಾನಗಳಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಆದರೆ ಹೊಸದಾಗಿ ಆರಂಭಿಸುವುದು ಬೇಡ…
ಉತ್ಸವ ಆಚರಣೆ ನಡೆಸುವ ಸಂದರ್ಭ ಪಾಲಿಸಬೇಕಾದ ಕ್ರಮಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆಗಳನ್ನು ನೀಡಿದರು.
ಕೋವಿಡ್ ಮುನ್ನೆಚ್ಚರಿಕೆಯಾಗಿ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಸ್ಥಾನದ ಅಧಿಕಾರಿ ವರ್ಗಕ್ಕೆ ತಿಳಿಸಿದರು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ 6 ಅಡಿ ಅಂತರದ ಬಾಕ್ಸ್ ಗಳ ಮಾರ್ಕ್‌ಗಳನ್ನು ಹಾಕಬೇಕು. ಮುಖಗವಸು ಧರಿಸಿರಬೇಕು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈ ತೊಳೆಯುವಿಕೆ ಅಥವಾ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಭಕ್ತರ ಸಂಖ್ಯೆ ಹೆಚ್ಚಿರುವ ದಿನಗಳಲ್ಲಿ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದರು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರಕೋಡಿ: ಸಿನಿಮೀಯ ರೀತಿಯಲ್ಲಿ ಮನೆಯೊಳಗೆ ನುಗ್ಗಿ ಗುಂಡಿನ ದಾಳಿ
ದೇವಾಲಯಗಳ ಜಾತ್ರೆ, ಬ್ರಹ್ಮಕಲಶೋತ್ಸವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇವುಗಳನ್ನು ನಿಲ್ಲಿಸಲು ಸಂಪ್ರದಾಯದಲ್ಲಿ ಅವಕಾಶವಿಲ್ಲದೆ ಇದ್ದರೆ ದೇವಾಲಯಗಳಲ್ಲಿ ತಂತ್ರಿಗಳು, ಅರ್ಚಕರು, ಸಿಬಂದಿ ಸಾಂಕೇತಿಕವಾಗಿ ನಡೆಸಬೇಕು. ಸಾರ್ವಜನಿಕರ ಸಂದಣಿ ಇಲ್ಲದಂತೆ ಎಚ್ಚರವಹಿಬೇಕು ಎಂದರು.
ಉಪವಿಭಾಗ ಅಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಇಲಾಖೆಯವರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಮಾರ್ಗಸೂಚಿಗಳು ಪಾಲನೆಯಾಗುತ್ತಿರುವ ಬಗ್ಗೆ ಗಮನಿಸಬೇಕು. ತಪ್ಪಿದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಸುಧಾಕರ್ ಹಾಜರಿದ್ದರು.