ಬೆಂಗಳೂರು: ಸಹಕಾರ ಕ್ಷೇತ್ರವನ್ನು ಏಕರೂಪದಲ್ಲಿ ದೇಶಾದ್ಯಂತ ಡಿಜಿಟಲೀಕರಣ ಹಾಗೂ 2023ಕ್ಕೆ ನೂತನ ಸಹಕಾರ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಹಕಾರ ಸಮ್ಮೇಳನದಲ್ಲಿ ನಂದಿನಿ ಸಹಕಾರ ಕ್ಷೀರ ಸಮೃದ್ಧಿ ಬ್ಯಾಂಕ್ ಲೋಗೊ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಎ ಗ್ರೇಡ್ ಇದೆ. ಕರ್ನಾಟಕ ಸಹಕಾರ ಕ್ಷೇತ್ರ ಐತಿಹಾಸಿಕವಾಗಿದೆ. ಕರ್ನಾಟಕಕ್ಕೆ ಬಂದಾಗಲೆಲ್ಲ ಸಹಕಾರ ಕ್ಷೇತ್ರದ ಮೂಲ ಪುರುಷ ಗದಗ ಜಿಲ್ಲೆಯ ಸಿದ್ದನಗೌಡ ಸಂಗನಗೌಡ ಪಾಟೀಲರನ್ನು ನೆನೆಯುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡಲು ಯೋಜನೆ ರೂಪಿಸಲು ಸೂಚಿಸಿದ್ದಾರೆ. ಶೀಘ್ರವೇ ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ಒದಗಿಸಲಾಗುವುದು. ದೇಶದಲ್ಲಿ ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ ಮಾಡಿರುವುದು ಕರ್ನಾಟಕವೇ ಮೊದಲು. ಇದರಿಂದ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಹಕಾರಿ ಇಲಾಖೆಯನ್ನು ಕೃಷಿ ಇಲಾಖೆಯಿಂದ ಪ್ರತ್ಯೇಕಗೊಳಿಸುವ ಕೆಲಸ ಮಾಡಿದ್ದು, ದೇಶದ ಮೊದಲ ಸಹಕಾರ ಸಚಿವನಾಗಿರುವ ಹೆಮ್ಮೆ ನನಗಿದೆ. ಕೇಂದ್ರ ಹಣಕಾಸು ಸಚಿವರು ಸಹಕಾರ ಇಲಾಖೆಗೆ 900 ಕೋಟಿ ರೂ. ನೀಡಿದ್ದಾರೆ. ದೇಶದ 63 ಸಾವಿರ ಪ್ಯಾಕ್ಸ್ ಗಳನ್ನು ಕಂಪ್ಯೂಟರೀಕರಣ ಮಾಡಲು ತೀರ್ಮಾನಿಸಲಾಗಿದ್ದು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಜಾರಿಗೆ ತರುತ್ತೇವೆ. ಅಲ್ಲದೇ ಸಹಕಾರಿ ವಿವಿ ಸ್ಥಾಪನೆ ಮಾಡುವ ಆಲೋಚನೆಯೂ ಇದೆ ಎಂದರು.
ಸಹಕಾರಿ ಕ್ಷೇತ್ರ ಹಳತಾಗಿದೆ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ಆದರೆ, ಕೃಷಿ ಕ್ಷೇತ್ರದ ಶೇ.25 ಸಾಲವನ್ನು ಸಹಕಾರಿ ರಂಗದಿಂದ ಒದಗಿಸಲಾಗುತ್ತಿದೆ. ಹಾಲು ಉತ್ಪಾದನೆ, ಮೀನುಗಾರಿಕೆ ಸೇರಿ ಬೇರೆ ಬೇರೆ ರಂಗದಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಗಣನೀಯವಾಗಿದೆ ಎಂದು ಹೇಳಿದರು.
ರಾಜ್ಯದ ಹಾಲು ಉತ್ಪಾದಕರಿಗಾಗಿಯೇ ಆರಂಭಿಸಲಿರುವ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ರಾಜ್ಯದ ಹಾಲು ಉತ್ಪಾದಕರ ಶಕ್ತಿಯನ್ನು ತೋರಿಸುತ್ತದೆ. ಬ್ಯಾಂಕ್ ಸ್ಥಾಪನೆ ಒಂದು ಕ್ರಾಂತಿಕಾರಿ ಹೆಜ್ಜೆ. –
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ