ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಟರ್ನಿಂಗ್ ಪಾಯಿಂಟ್’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೇ ವೇಳೆ ಚಿತ್ರದ ಚಿತ್ರೀಕರಣದ ಅನುಭವ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಈ ಹಿಂದೆ ಸುನೀಲ್ ಕುಮಾರ್ ದೇಸಾಯಿ ಅವರೊಂದಿಗೆ ಕೆಲಸ ಮಾಡಿದ ಅನುಭವವಿರುವ, ಕೆಲವು ಕೊಡವ ಮತ್ತು ತುಳು ಚಿತ್ರಗಳನ್ನು ನಿರ್ದೇಶಿಸಿದ್ದ ವಿನು ಮಹೇಶ್ ರೈ “ಟರ್ನಿಂಗ್ ಪಾಯಿಂಟ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಮೊದಲು ಚಿತ್ರದ ಬಗ್ಗೆ ಮಾತಿಗಿಳಿದ ವಿನು ಮಹೇಶ್ ರೈ, “ಇದೊಂದು ತಾಯಿ ಸೆಂಟಿಮೆಂಟ್ ಜೊತೆಗೆ ಲವ್ ಸ್ಟೋರಿಯಿರುವ ಚಿತ್ರ. ಚಿತ್ರದ ಕಥೆ ಎರಡು ಟ್ರ್ಯಾಕ್‌ನಲ್ಲಿ ನಡೆಯುತ್ತದೆ. ಚಿಕ್ಕ ವಯಸ್ಸಿನಲ್ಲಿ ಹುಡುಗನೊಬ್ಬ ಅಚಾನಕ್ಕಾಗಿ ತನ್ನ ತಾಯಿಯಿಂದ ಬೇರೆಯಾಗಿ ಸಿಕ್ಕಿಂಗೆ ಹೋಗುತ್ತಾನೆ. ದೊಡ್ಡವನಾದ ನಂತರ ಅದೇ ಹುಡುಗ ತನ್ನ ತಾಯಿಯನ್ನು ಹುಡುಕಿಕೊಂಡು ಮರಳಿ ಮನೆಗೆ ಬರುತ್ತಾನೆ. ಆಗ ಅಲ್ಲೊಂದಷ್ಟು ಊಹಿಸಲಾರದ ಬೆಳವಣಿಗೆಗಳು ನಡೆದಿರುತ್ತವೆ. ಅದು ಏನೆಂಬುದು ಅನ್ನೋದೆ “ಟರ್ನಿಂಗ್ ಪಾಯಿಂಟ್’ ಚಿತ್ರದ ಕಥಾಹಂದರ. ಅದನ್ನು ತೆರೆಮೇಲೆ ನೋಡಬೇಕು’ ಎಂದು ಚಿತ್ರದ ಕಥೆಯ ಎಳೆಯನ್ನು ತೆರೆದಿಟ್ಟರು.
ಇನ್ನು ಚಿತ್ರದ ನಾಯಕ ಆದಿ ಕೇಶವ್ ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ತಾಯಿಯಿಂದ ಬೇರಾಗುವ ಬಳಿಕ ತಾಯಿಯನ್ನು ಹುಡುಕಿಕೊಂಡು ಬರುವ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಮಾಡಿಕೊಂಡ ತಯಾರಿ ಮತ್ತು ತಮ್ಮ ಹಿನ್ನೆಲೆಯನ್ನು ತೆರೆದಿಟ್ಟರು ನಾಯಕ ಆದಿ ಕೇಶವ್. ಚಿತ್ರದಲ್ಲಿ ನಾಯಕಿಯಾಗಿ ಅನಿಕಾ ರಾಮ್ ಮತ್ತು ದಿಶಾ ಪೂವಯ್ಯ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದಿಶಾ ಪೂವಯ್ಯ ಸೋಫಿಯಾ ಎನ್ನುವ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಉಳಿದಂತೆ ಜೈ ಜಗದೀಶ್, ವಿನಯಾ ಪ್ರಸಾದ್, ಶ್ರೀನಿವಾಸ ಮೂರ್ತಿ, ಜೋ ಸೈಮನ್, ರಾಧಿಕಾ, ರಾಘವೇಂದ್ರ ರೈ, ಉಮೇಶ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಶ್ರೀ ಲಕ್ಷ್ಮೀ ವೆಂಕಟೇಶ್ವರ ಮೂàವಿ ಮೇಕರ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಟರ್ನಿಂಗ್ ಪಾಯಿಂಟ್’ ಚಿತ್ರವನ್ನು ವಿ. ನಾಗರಾಜ್ ಮತ್ತು ಮನೋಜ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಎ.ಟಿ ರವೀಶ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಎ.ಆರ್ ವಿನ್ಸೆಂಟ್ ಛಾಯಾಗ್ರಹಣವಿದ್ದು, ಸುರೇಶ್ ಅರಸ್ ಸಂಕಲನವಿದೆ. ಬೆಂಗಳೂರು, ಕುಶಾಲ ನಗರ, ಮಡಿಕೇರಿ, ಸುಳ್ಯ, ಮಂಗಳೂರು ಸುತ್ತಮುತ್ತ ಸುಮಾರು ಮೂವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಮುಂದಿನ ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.