ವರ್ಷ ಮುಗಿಯುತ್ತಾ ಬಂದಿದೆ. ಇಲ್ಲಿವರೆಗೆ ಸುಮಾರು 165ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಕಂಡಿವೆ. ಇನ್ನೂ ಸಾಕಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಸ್ಟಾರ್ ಸಿನಿಮಾಗಳ, ಹಿಟ್ ಸಿನಿಮಾಗಳ ಹವಾದ ಮಧ್ಯೆ ಸಿನಿಮಾ ಬಿಡುಗಡೆ ಮಾಡುವುದು ಹೊಸಬರಿಗೆ ಸವಾಲು. ಆದರೂ, ನವೆಂಬರ್‌ನಲ್ಲಿ ಧೈರ್ಯ ಮಾಡಿ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ತೆರೆಗೆ ಬರುತ್ತಿದ್ದಾರೆ.
ನವೆಂಬರ್ ತುಂಬಾ ಹೊಸಬರದ್ದೇ ಹವಾ ಎಂದರೂ ತಪ್ಪಲ್ಲ. ನವೆಂಬರ್‌ನಲ್ಲಿ 20ಕ್ಕೂ ಹೆಚ್ಚು ಹೊಸಬರ ಸಿನಿಮಾಗಳು ತೆರೆಕಾಣುವ ಮೂಲಕ ನವೆಂಬರ್ ಕಲರ್‌ಫುಲ್ ಆಗಲಿದೆ. ಸದ್ಯ ಒಂದು ತಿಂಗಳಿನಿಂದ ದೇಶಾದ್ಯಂತ “ಕಾಂತಾರ’ ಹವಾ ಜೋರಾಗಿಯೇ. ಈಗ “ಗಂಧದ ಗುಡಿ’ ಪರಿಮಳವೂ ಪಸರಿಸಿದೆ. ಈ ಎರಡು ಸಿನಿಮಾಗಳ ಮಧ್ಯೆಯೇ ಹೊಸಬರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇಲ್ಲಿ ಹೊಸಬರ ಚಿತ್ರವೆಂದರೆ ಸಂಪೂರ್ಣ ಹೊಸಬರು ಎನ್ನುವಂತಿಲ್ಲ. ಆದರೆ, ಬಹುತೇಕ ಚಿತ್ರಗಳ ನಾಯಕ ನಟರು ಮಾತ್ರ ಹೊಸಬರು ಅಥವಾ ಒಂದೆರಡು ಸಿನಿಮಾ ಮಾಡಿದವರಾಗಿತ್ತಾರೆ. ಹಾಗೆ ನೋಡಿದರೆ ತೀರಾ ಹೊಸಬರಲ್ಲದ ಚಿತ್ರವೆಂದರೆ ಸದ್ಯ ತೆರೆಗೆ ಸಿದ್ಧವಾಗಿರುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ “ದಿಲ್ ಪಸಂದ್’. ಅದರಾಚೆ ಅನೌನ್ಸ್ ಆಗಿರುವ ಚಿತ್ರಗಳ ನಿರ್ದೇಶಕರು ನಾಲ್ಕೈದು ಸಿನಿಮಾ ಮಾಡಿದರಾಗಿದ್ದು, ಹೀರೋಗಳು ಮಾತ್ರ ನ್ಯೂ ಫೇಸ್.
ಇದನ್ನೂ ಓದಿ:ಗೋಮಾಂಸ ಬಳಕೆ ವದಂತಿ: ಕ್ಯಾಡ್ಬರಿ ವಿರುದ್ಧ ಶುರುವಾಯಿತು ಬಾಯ್ಕಾಟ್ ಟ್ರೆಂಡ್
ಸದ್ಯ ನವೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಹೆಸರಿಸುವುದಾದರೆ, “ರಾಣ’, “ಕಂಬ್ಳಿಹುಳ’, “ಬನಾರಸ್’, “ಸೆಪ್ಟೆಂಬರ್ 13′, “ದಿಲ್ ಪಸಂದ್’, “ಯೆಲ್ಲೋ ಗ್ಯಾಂಗ್ಸ್’, “ಓ’, “ವಿಧಿ 370′, “ಆರ್‌ಸಿ ಬ್ರದರ್ಸ್’, “ರೆಮೋ’, “ಹುಬ್ಬಳ್ಳಿ ಡಾಬಾ’, “ಖಾಸಗಿ ಪುಟಗಳು’, “ಕ್ಷೇಮಗಿರಿಯಲ್ಲಿ ಕರ್‌ನಾಟಕ’, “ಕುಳ್ಳನ ಹೆಂಡತಿ’, “ವಾಸಂತಿ ನಲಿದಾಗ’, “ಮಾರಿಗುಡ್ಡದ ಗಡ್ಡಧಾರಿಗಳು’, “ನಹೀ ಜ್ಞಾನೇನ ಸದೃಶ್ಯಂ’… ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಪ್ರತಿ ಸಿನಿಮಾ ತಂಡಗಳು ವಿಭಿನ್ನ ಸಿನಿಮಾ ಮಾಡಿದ ಖುಷಿಯಲ್ಲಿವೆ.
ಸಿನಿಮಾವೊಂದರ ಗೆಲುವು ಹೊಸ ಹೀರೋ ಅಥವಾ ನಿರ್ದೇಶಕನ ಮೇಲೆ ಅವಲಂಭಿತವಾಗಿರುವುದಿಲ್ಲ. ಸಿನಿಮಾದ ಕಂಟೆಂಟ್ ಹಾಗೂ ಮೇಕಿಂಗ್ ಮೇಲೆ ನಿಂತಿರುತ್ತದೆ. ಇವತ್ತು ಸ್ಟಾರ್‌ಗಳಾಗಿರುವವರು ಆರಂಭದಲ್ಲಿ ಹೊಸಬರೇ. ಇದೇ ವಿಶ್ವಾಸದೊಂದಿಗೆ ಚಿತ್ರತಂಡಗಳು ಬಿಡುಗಡೆಗೆ ತಮ್ಮ ಸಿನಿಮಾ ಬಿಡುಗಡೆಗೆ ಮುಂದಾಗಿದೆ.