ಉಡುಪಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸದಾಗಿ ಹೊರತಂದ 20 ರೂ. ನಾಣ್ಯವೀಗ ಚಲಾವಣೆಗೆ ಬಂದಿದೆ.
2019ರಲ್ಲಿ 2, 5, 10 ರೂ., 2020ರಲ್ಲಿ 20 ರೂ. ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಇದರ ಜತೆಗೇ 1 ರೂ. ನಾಣ್ಯವನ್ನು ಹೊರತರುವುದಾಗಿ ಹೇಳಿದ್ದರೂ ಅದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. 10 ರೂ. ನಾಣ್ಯದಲ್ಲಿ ಮಧ್ಯದ ಭಾಗದಲ್ಲಿ ನಿಕ್ಕಲ್ ಲೋಹವಿದ್ದರೆ, ಹೊರಗೆ ಹಿತ್ತಾಳೆ (ಬ್ರಾಸ್) ಲೋಹವಿತ್ತು. 20 ರೂ. ನಾಣ್ಯದಲ್ಲಿ ಮಧ್ಯದಲ್ಲಿ ಹಿತ್ತಾಳೆ, ಸುತ್ತ ನಿಕ್ಕಲ್ ಇದೆ. 10 ರೂ.ನಲ್ಲಿ ಉರುಟಾಗಿದ್ದರೆ, 20 ರೂ.ನಲ್ಲಿ ಅಂಚು ಇದೆ.
ಉಡುಪಿಯಲ್ಲಿ ಆರು ಕರೆನ್ಸಿ ಚೆಸ್ಟ್, ದ.ಕ. ಜಿಲ್ಲೆಯಲ್ಲಿ 11 ಕರೆನ್ಸಿ ಚೆಸ್ಟ್‌ಗಳಿದ್ದು ಇಂಡೆಂಟ್ ಹಾಕಿದಂತೆ ಆರ್‌ಬಿಐ ಹೊಸ ನಾಣ್ಯಗಳನ್ನು ಪೂರೈಸಿದೆ. ಇದು ಸಾರ್ವಜನಿಕರ ಕೈಯಲ್ಲಿ ಚಲಾವಣೆಯಾಗುತ್ತಿದ್ದರೂ ಈಗಷ್ಟೇ ಬಂದಿರುವುದರಿಂದ ಹೆಚ್ಚಾಗಿ ಕಂಡುಬರುತ್ತಿಲ್ಲ. ಅಪರೂಪದಲ್ಲಿ ಬಂದಿರುವುದರಿಂದ ಜನರಿಗೂ ನಾಣ್ಯ ಕುರಿತು ವಿಶೇಷ ಆಕರ್ಷಣೆ ಇದೆ.
10 ರೂ. ನಾಣ್ಯ ಕಾನೂನುಬದ್ಧ
10 ರೂ. ನಾಣ್ಯಗಳು ಹಲವು ದಿನಗಳಿಂದ ಚಲಾವಣೆಯಲ್ಲಿದ್ದರೂ ಕೆಲವರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಇದು ಕಾನೂನುಬದ್ಧವಾಗಿದೆ. ಆಟೋ, ಬಸ್‌ಗಳಲ್ಲಿ ಹೀಗೆ ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಚಲಾವಣೆಗೊಳ್ಳಬೇಕು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ಲೀಡ್ ಬ್ಯಾಂಕ್ ಮ್ಯಾನೇಜರ್‌ಗಳಾದ ಪ್ರವೀಣ್ ಮತ್ತು ರುದ್ರೇಶ್ ಹೇಳಿದ್ದಾರೆ.