ಪಣಜಿ: ಈ ಬಾರಿ ಇಫಿ (ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ) ಹೊಸ ಬಗೆಯ ಪ್ರಯೋಗಕ್ಕೆ ಒಡ್ಡಿಕೊಂಡಿದೆ. ಅಬ್ಬರಗಳಿಲ್ಲದ ಮೆರವಣಿಗೆ.
ಒಂದು ಲೆಕ್ಜದಲ್ಲಿ ಬಹಳ ಸರಳವಾದ ಉತ್ಸವ ಎನ್ನುವಂತಿದೆ. ಅದು ನಿಜದ ನೆಲೆಯೋ, ಅನಿವಾರ್ಯತೆಯೋ ಖಚಿತವಾಗಲು ಸಮಯ ಬೇಕು. ಬಹಳ ಸೀಮಿತ ಸಂಖ್ಯೆಯ ಪ್ರತಿನಿಧಿಗಳು, ಒಂದಿಷ್ಟು ಸಿನಿಮಾಗಳು, ಗಜಿಬಿಜಿ ಇಲ್ಲದ ಥಿಯೇಟರ್ ಗಳು, ಅಷ್ಟೇನೂ ಒತ್ತಡವಿಲ್ಲದೇ ನಿಟ್ಟುಸಿರು ಬಿಡುತ್ತಿರುವ ರಸ್ತೆಗಳು, ಉತ್ಸವದ ಮೊದಲನೇ ದಿನವೇ ಪ್ರವೇಶ ದ್ವಾರಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಾ ಉತ್ಸವ ಮುಗಿದರೆ ಸಾಕಪ್ಪ ಎನ್ನುವಂತಿದ್ದ ಭದ್ರತಾ ಸಿಬದಿಗಳ ಮುಖದಲ್ಲಿ ಕೊಂಚ ರಿಲ್ಯಾಕ್ಸ್.. ಒಟ್ಟು ಕೊರೊನಾ ಅಬ್ಬರದ ಸುಂದರಿಯನ್ನು ಒತ್ತಾಯಪೂರ್ವಕವಾಗಿ ಸ್ಲಿಮ್ ಮಾಡಿಸಿದೆ.
ಜಾತ್ರೆಯಿಲ್ಲ
ಸಿನೆಮಾ ಜಾತ್ರೆ ಎನ್ನುವ ಜಾಯಮಾನಕ್ಕೆ ಅಪವಾದ ಎಂಬಂತಾಗಿದೆ ಈ ಬಾರಿಯ ಉತ್ಸವ. ಎಲ್ಲೆಲ್ಲೂ ಜನರೇ ತುಂಬಿರುತ್ತಿತ್ತು. ವಿಶೇಷವಾಗಿ ವಾರಾಂತ್ಯ ದಿನಗಳಲ್ಲಿ ಜನರೆಲ್ಲ ಸಿನೆಮಾ ಮಂದಿರದ ಹತ್ತಿರ ಸುಳಿದು, ಆ ಬಳಿಕ ಗೋಬಿ, ಪಾವ್ ಬಾಜಿ ತಿಂದು ಮಾರ್ಕೆಟ್ ನಿಂದ (ಚಿತ್ರೋತ್ಸವ ನಡೆಯುವ ಐನಾಕ್ಸ್ ಸಿನೆಮಾ ಮಂದಿರ ಇರುವ ಇಎಸ್ ಜಿ ಸಮುಚ್ಚಯ) ಕಲಾ ಅಕಾಡೆಮಿವರೆಗೆ ಫುಟ್ ಪಾತ್ ನಲ್ಲಿ ನಡೆದುಕೊಂಡು ಸಣ್ಣಪುಟ್ಟ ಶಾಪಿಂಗ್ ಮಾಡುತ್ತಿದ್ದವರೆಲ್ಲಾ ರಜೆ ಮಾಡಿದ್ದಾರೆ. ಹಾಗಾಗಿ ಆಧುನಿಕ ಭಾಷೆಯ ಕ್ರೌಡ್ ಈ ಬಾರಿ ಇಲ್ಲ.
ಇದನ್ನೂ ಓದಿ:ಬಾಂಗ್ಲಾದೇಶ ಕಂಟ್ರಿ ಫೋಕಸ್: ನೋಡಲು ಮರೆಯಬೇಡಿ ‘ಇತಿ, ತೊಮಾರಿ ಢಾಕಾ‘
ಎಲ್ಲವೂ ಡಿಜಿಟಲ್, ಹೈಬ್ರಿಡ್ !
ಈ ಮಾತು ಅನುಕೂಲಕ್ಕೋ, ಕೊರೊನಾ ಕಾರಣಕ್ಕೋ ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಚಿತ್ರೋತ್ಸವದಲ್ಲಿ ಚಾಲ್ತಿಯಲ್ಲಿದೆ. ಈ ಬಾರಿ ಸಿನಿಮಾ ಸ್ಕ್ರೀನ್ ಷೆಡ್ಯೂಲ್ಸ್ ಎಲ್ಲೆಂದರಲ್ಲಿ ಸಿಗುತ್ತಿಲ್ಲ. ಅದರ ಬದಲಾಗಿ ಎಲ್ಲವೂ ಇಫಿ ವೆಬ್ ಸೈಟ್ ನಲ್ಲಿದೆ. ಅಲ್ಲಿಂದಲೇ ಪಡೆಯಬೇಕು. ಬಳಿಕ ಟಿಕೆಟ್ ಬುಕ್ಕಿಂಗ್ ಸಹ ಅಷ್ಟೇ. ಎಲ್ಲವೂ ಆನ್ ಲೈನ್ ನಲ್ಲೇ. ಭೌತಿಕ ಟಿಕೆಟುಗಳು ಅಸ್ತಿತ್ವದಲ್ಲಿಲ್ಲ !
ಕೆಟಲಾಗ್ ಕೇಳಬೇಡಿ !
ಪ್ರತಿ ಚಿತ್ರೋತ್ಸವದಲ್ಲಿ ಸಿನಿಮಾಗಳ ಕುರಿತಾದ ಕೆಟಲಾಗ್ ಮತ್ತು ಹ್ಯಾಂಡ್ ಬುಕ್ ನೀಡಲಾಗುತ್ತಿತ್ತು. ಚಿತ್ರ ರಸಿಕರು ಅದನ್ನು ಆಧರಿಸಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದರಿಂದ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಅವುಗಳೆಲ್ಲವೂ ವೆಬ್ ಸೈಟ್ ನಲ್ಲಿದೆ. ಹಾಗಾಗಿ ಇಫಿ ಸಂಯೋಜಕರು ಕೆಟಲಾಗ್ ಕೇಳಬೇಡಿ, ಆನ್ ಲೈನ್ ನಲ್ಲೇ ಓದಿಕೊಳ್ಳಿ ಎನ್ನುತ್ತಿದ್ದಾರೆ.
ಹೊಸಬಗೆಯ ಚಿತ್ರೋತ್ಸವ
ಕೊರೊನಾ ಭಯದ ಹಿನ್ನೆಲೆಯಲ್ಲಿ ತೆರೆದುಕೊಂಡಿರುವ ಈ ಚಿತ್ರೋತ್ಸವ ಹೊಸ ಪ್ರಯೋಗದಂತೆ ಕಾಣುತ್ತಿದೆ. ಚಿತ್ರ ರಸಿಕರು ಚಪ್ಪಾಳೆ ತಟ್ಟುತ್ತಾರೊ, ಗೋಬ್ಯಾಕ್ ಎನ್ನುತ್ತಾರೋ ಕಾದು ನೋಡಬೇಕು.