Advertisement

ನವೆಂಬರ್‌ನಲ್ಲಿ ನೂತನ ಬಸ್‌ ಟರ್ಮಿನಲ್‌ ಉದ್ಘಾಟನೆ ಡೌಟ್‌

11:43 AM Nov 04, 2017 | Team Udayavani |

ಹುಬ್ಬಳ್ಳಿ: ಆಮೆ ವೇಗಕ್ಕೂ ಸವಾಲೊಡ್ಡುವ ರೀತಿಯಲ್ಲಿ ಸಾಗುತ್ತಿರುವ ಬಿಆರ್‌ಟಿಎಸ್‌ ಯೋಜನೆಯಡಿ ಇಲ್ಲಿನ ಹೊಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್‌ ಟರ್ಮಿನಲ್‌ ನವೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗಿತ್ತಾದರೂ, ಕಾಮಗಾರಿ ಪೂರ್ಣಗೊಳ್ಳದೆ ಟರ್ಮಿನಲ್‌ ಲೋಕಾರ್ಪಣೆ ಡಿಸೆಂಬರ್‌ ಅಥವಾ ಮುಂದಿನ ವರ್ಷದ ಜನವರಿಗೆ ಮುಂದೂಡಿಕೆಯಾಗಿದೆ.

Advertisement

ಸೆಪ್ಟೆಂಬರ್‌ ಮೊದಲ ವಾರದದಲ್ಲಿ ನೂತನ ಬಸ್‌ ಟರ್ಮಿನಲ್‌ ಒಂದು ಭಾಗವನ್ನು ಬಳಕೆಗೆ ಒದಗಿಸುವ ಭರವಸೆ ನೀಡಿದ್ದರಾದರೂ ಇಂದಿಗೂ ಅದು ಈಡೇರಿಲ್ಲ. ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಟರ್ಮಿನಲ್‌ಗೆ ಭೇಟಿ ನೀಡಿ ನವೆಂಬರ್‌ ಒಳಗಾಗಿ ಟರ್ಮಿನಲ್‌ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಾಧ್ಯವಾಗಿಲ್ಲ. 

ಬಸ್‌ ಟರ್ಮಿನಲ್‌ನಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳದಿರುವುದೇ ಲೋಕಾರ್ಪಣೆ ಹಿನ್ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮಳೆಯ ಕಾರಣದಿಂದಾಗಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ನೂತನ ಟರ್ಮಿನಲ್‌ ನಿರ್ಮಾಣ ನಿಟ್ಟಿನಲ್ಲಿ ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಶೇ. 20ರಷ್ಟು ಕಾಮಗಾರಿ ಆಗಬೇಕಾಗಿದೆ ಎಂಬುದು ಅಧಿಕಾರಿಗಳ ಅನಿಸಿಕೆ. 

ಹುಬ್ಬಳ್ಳಿಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಪ್ರಮಾಣದ ಮಳೆ ಆರಂಭವಾಗಿದ್ದೇ ಸೆಪ್ಟೆಂಬರ್‌ ಕೊನೆ ಹಾಗೂ ಅಕ್ಟೋಬರ್‌ನಲ್ಲಿ . ನೂತನ ಟರ್ಮಿನಲ್‌ ಒಳಗಿನ ಕಾಮಗಾರಿಗೆ ಮಳೆ ಅಷ್ಟೊಂದು ಅಡ್ಡಿಯಾಗಿಲ್ಲ, ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳು ಮಳೆ ನೆಪ ಹೇಳುತ್ತಿದ್ದಾರೆ ಎಂಬುದು ಕೆಲವರ ಆರೋಪ. 

ಸುಮಾರು 52 ಕೋಟಿ ರೂ. ವೆಚ್ಚದಲ್ಲಿ  15 ಎಕರೆ 16 ಗುಂಟೆ ವಿಸ್ತಿರ್ಣದಲ್ಲಿ ನಿರ್ಮಿಸುತ್ತಿರುವ ಅತ್ಯಾಧುನಿಕ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿವಿಧ ಆಧುನಿಕ ಸೌಲಭ್ಯ ಕಲ್ಪಿಸಲಾಗುತ್ತದೆ. ನಿಲ್ದಾಣದಲ್ಲಿ 22 ಪ್ಲಾಟ್‌ಫಾರಂ ಹಾಗೂ ನಗರ ಸಾರಿಗೆ ಬಸ್‌ಗಳಿಗಾಗಿ 6 ಫ್ಲಾಟ್‌ ಫಾರಂ ನಿರ್ಮಿಸಲಾಗುತ್ತಿದ್ದು, 4 ಹವಾನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೋಣೆ,

Advertisement

ದ್ವಿಚಕ್ರ ವಾಹನ ಹಾಗೂ ಕಾರುಗಳ ನಿಲುಗಡೆಗೆ ವ್ಯವಸ್ಥೆ, 2 ಎಕ್ಸಲೇಟರ್‌, 6 ಲಿಫ್ಟ್, ಸಬ್‌ವೇ, ಪಕ್ಕದಲ್ಲಿಯೇ ಡೀಪೊ, ಐದು ಮಹಡಿಯ ಕಟ್ಟಡ ಹಾಗೂ ಅತ್ಯಾಧುನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಬಸ್‌ ನಿಲ್ದಾಣದ ಮುಖ್ಯದ್ವಾರ ನ್ಯಾಯಾಲಯದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿದ್ದು,

ಮಹಿಳಾ ವಿದ್ಯಾಪೀಠದ ಮುಂಭಾಗದಿಂದ ಪ್ರಯಾಣಿಕರು ಆಗಮಿಸುವ ವ್ಯವಸ್ಥೆ ಹಾಗೂ ಬಿಆರ್‌ಟಿಎಸ್‌ ಬಸ್‌ ಪ್ರಯಾಣಿಕರು ಆಗಮಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಡಿಸೆಂಬರ್‌ನಲ್ಲಾದರೂ ನೂತನ ಬಸ್‌ ಟರ್ಮಿನಲ್‌ ಲೋಕಾರ್ಪಣೆ ಆಗಲಿದೆಯೋ ಅಥವಾ ಇನ್ನಷ್ಟು ನೆಪಗಳನ್ನು ಹೇಳಿ ಮತ್ತೆ ಮುಂದೂಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

ಅಲ್ಲದೆ ನೂತನ ಬಸ್‌ ಟರ್ಮಿನಲ್‌ ಮುಖ್ಯದ್ವಾರಕ್ಕೆ ಬರುವ ಹಾಗೂ ಹೊರ ಹೋಗುವ ಮಾರ್ಗ ಅತ್ಯಂತ ಚಿಕ್ಕದಾಗಿದ್ದು, ಅನೇಕ ಕಟ್ಟಡಗಳು ರಸ್ತೆಗೆ ಹೊಂದಿಕೊಂಡಂತೆ ಇವೆ. ರಸ್ತೆ ಸುಧಾರಣೆ ಕಾರ್ಯವಂತೂ ಇದುವರೆಗೆ ಆಗಿಲ್ಲ. ರಸ್ತೆ ಅಗಲೀಕರಣಕ್ಕೆ ಮುಂದಾದರೂ ಎಲ್ಲವೂ ಸರಿ ಹೋಗುವುದಕ್ಕೆ ಕನಿಷ್ಠವೆಂದರೂ ಒಂದು ವರ್ಷವಾದರೂ ಬೇಕಾಗಬಹುದು. ಒಂದು ವೇಳೆ ಬಸ್‌ ಟರ್ಮಿನಲ್‌ ಸಿದ್ಧಗೊಂಡರೂ ರಸ್ತೆ ಕಾರಣದಿಂದ ನೂತನ ಟರ್ಮಿನಲ್‌ ನಿಂದ ಬಸ್‌ ಸಂಚಾರ ಆರಂಭ ಅನುಮಾನ ಮೂಡಿಸುವಂತಿದೆ.  

* ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next