Advertisement

ಜೀವ ವೈವಿಧ್ಯ, ಕಲಿಕೆಯೊಂದಿಗೆ ಹೊಸ ವರ್ಷಾಚರಣೆ

06:52 AM Jan 04, 2019 | |

ಕಾಸರಗೋಡು : ಮಕ್ಕಳೆಲ್ಲರೂ ಸೇರಿ ಬೀಂಪುಳಿ ಗಿಡ ನೆಟ್ಟರು. ಕಾಡು, ಮೇಡು ಸುತ್ತಾಡಿದರು. ನೀರು ಬತ್ತಿದ ಪಳ್ಳವೊಂದರ ಚಿಂತಾಜನಕ ಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಚಿಟ್ಟೆಗಳನ್ನು ಗುರುತಿಸಿದರು. ಹಕ್ಕಿಗಳನ್ನು ಎಣಿಸಿದರು. ಗಿಡ-ಮರ-ಬಳ್ಳಿಗಳನ್ನು ವೀಕ್ಷಿಸಿದರು. 75 ವರ್ಷದ ಕಮಲ ಅವರೊಂದಿಗೆ ಹರಟೆ ಹೊಡೆದು ಹೊಸ ವರ್ಷದ ಕಾಣಿಕೆಯನ್ನೂ ಅರ್ಪಿಸಿದರು. ಹೀಗೆ ಜೈವ ವೈವಿಧ್ಯತೆಯ ಬೆನ್ನುಹತ್ತಿ ಹೊಸ ವರ್ಷಾಚರಣೆ ಆಚರಿಸಿದರು. ಹೊಸ ವರ್ಷದಲ್ಲಿ ಲಭಿಸಿದ ಮೊದಲ ರಜೆಯನ್ನು ಹೀಗೆ ವ್ಯತ್ಯಾಸವಾಗಿ ಕಳೆದ ಮಕ್ಕಳು ಕುಂಬಳೆ ಶೇಡಿಗುಮ್ಮೆಯ ಜೈವ ವೈವಿಧ್ಯತೆಯ ಬಗ್ಗೆ ಅಧ್ಯಯನ ನಡೆಸಿದರು.

Advertisement

ಪರಿಸರದಲ್ಲಿ ಕಂಡು ಬರುವ ವಿವಿಧ ಮರ, ಗಿಡ, ಬಳ್ಳಿಗಳನ್ನು ವೀಕ್ಷಿಸಿದರು. ಜತೆಗೆ ಪಕ್ಷಿಗಳ ಗೂಡುಗಳು, ಹೂ ಬಿಟ್ಟ ಮರದಲ್ಲಿ ಜೇನು ಹುಳುಗಳ ಝೇಂಕಾರವನ್ನೂ ಪುಟಾಣಿಗಳು ಗಮನಿಸಿದರು. ಹೂ ಬಿಟ್ಟು ಕಾಯಿಯ ರೂಪ ತಾಳುವ ನೊರೆಕಾಯಿಯ ಗಿಡವಂತೂ ಮಕ್ಕಳಿಗೆ ಕುತೂಹಲ ಕೆರಳಿಸಿತು. ಪೊದೆಯೊಂದರಲ್ಲಿ ಅಡಗಿದ್ದ ಮರಮರಿ ಹಾವಿನ ದರ್ಶನವೂ ಮಕ್ಕಳಿಗೆ ದೊರಕಿತು.ವಿಶಾಲವಾದ ಪಾರೆ, ಭತ್ತದ ಗದ್ದೆ, ಪ್ರಾಕೃತಿಕವಾದ ಸಣ್ಣ ಪಳ್ಳಗಳು, ಕಾಡು ಹಾಗು ತೋಡು ಜೊತೆಗೆ ಅಡಿಕೆ ಹಾಗು ತೆಂಗು ಕೃಷಿಯೊಂದಿಗೆ ಸಂಪದ್ಭರಿತವಾದ ಜೈವ ವ್ಯವಸ್ಥೆಯ ಬೀಡಾಗಿದೆ ಶೇಡಿಗುಮ್ಮೆ. ಈ ಪ್ರದೇಶದ ಮಕ್ಕಳು ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ಈ ಭಾಗದಲ್ಲಿ ನಡೆಯಲಿವೆ.

ಕುಂಬಳೆ ಹೋಲಿ ಫ್ಯಾಮಿಲಿ ಸರಕಾರಿ ಹೈಸ್ಕೂಲ್‌ ಹಾಗು ಮಹಾಜನ ಸಂಸ್ಕೃತ ಶಾಲೆಯ ಮಕ್ಕಳು ಭಾಗವಹಿಸಿದ ಪರಿಸರ ಅಧ್ಯಯನ ಶಿಬಿರದಲ್ಲಿ ಪಕ್ಷಿ ನಿರೀಕ್ಷಕರಾದ ಅಧ್ಯಾಪಕ ರಾಜು ಕಿದೂರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಕ್ಕಳಾದ ಜೀವಿತ್‌, ದೀಕ್ಷ ಹಾಗು ದಿಶ ಅವರ ಮನೆಯವರು ಅಧ್ಯಯನ ನಿರತ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು.

ಚಿಟ್ಟೆ, ಪಕ್ಷಿಗಳ ಗಣತಿ
ಕುಂಬಳೆ ಭಾಸ್ಕರ ನಗರದ ಬಸ್ಸು ನಿಲ್ದಾಣದಿಂದ ಆರಂಭವಾದ ಪರಿಸರ ನಡಿಗೆಯು ಶೇಡಿಗುಮ್ಮೆ ಕೇಂದ್ರೀಕೃತವಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಪಕ್ಷಿಗಳನ್ನು, 13 ತರದ ಚಿಟ್ಟೆಗಳನ್ನು ಮಕ್ಕಳು ಗುರುತಿಸಿದರು. ಯುರೋಪಿನಿಂದ ವಲಸೆ ಬರುವ ರೋಸಿ ಸ್ಟಾರ್ಲಿಗ್‌ ಹಾಗೂ ಗ್ರೀನ್‌ ವಾರ್ಬ್ಲ ರ ಎಂಬ ಪಕ್ಷಿಗಳನ್ನು ವೀಕ್ಷಿಸಿದರು. ಎಕ್ಕದ ಗಿಡದಲ್ಲಿ ಮೊಟ್ಟೆ ಇಟ್ಟು ಕೋಶಾವಸ್ಥೆಯಲ್ಲಿರುವ ಬ್ಲೂ ಟೈಗರ್‌ ಚಿಟ್ಟೆಯನ್ನೂ ನೋಡಿ ಮೊಬೈಲ್‌ ನಿಂದ ಚಿತ್ರೀಕರಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next