ಬೆಂಗಳೂರು: ಮುಂದಿನ 10 ವರ್ಷದೊಳಗೆ ತುಮಕೂರಿನ ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತಿಸಿದೆ ಎಂದು ಡಾ. ಮುರುಗೇಶ್ ಆರ್. ನಿರಾಣಿ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ 17ನೇ ಆವೃತ್ತಿಯ “ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ಒತ್ತುಕೊಡುವ ನಿಟ್ಟಿ ನಲ್ಲಿ ಮುಂದಿನ 10 ವರ್ಷದೊಳಗೆ ತುಮಕೂರಿನ ಬಳಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಚಿಂತನೆ ನಡೆಯುತ್ತಿದೆ. ಇದಲ್ಲದೇ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣ ಪ್ರಯತ್ನಿಸಲಾಗುತ್ತಿದೆ. ಹೈ-ಸ್ಪೀಡ್ ರೈಲು ನಿರ್ಮಾಣಕ್ಕೂ ಹೆಚ್ಚಿನ ಒತ್ತು ಕೊಡಲಾಗುತ್ತಿದೆ ಎಂದು ಹೇಳಿದರು.
ನವೆಂಬರ್‌ನಲ್ಲಿ ಆಯೋಜಿಸುವ ಗ್ಲೋಬಲ್ ಇನ್‌ವೆಸ್ಟರ್ಸ್‌ನಲ್ಲಿ 5 ಲಕ್ಷ ಕೋಟಿ ರೂ.ಗೂ ಅಧಿಕ ಒಡಂಬಡಿಕೆಗಳಿಗೆ ಸಹಿ ಮಾಡಲಾಗುವುದು. ಈ ಪೈಕಿ ಶೇ.90ಕ್ಕೂ ಅಧಿಕ ಒಡಂಬಡಿಕೆಗಳು ಅನುಷ್ಠಾನಕ್ಕೆ ಬರಲಿದೆ. ಈ ಕಾರ್ಯಕ್ರಮಕ್ಕೆ ಸ್ಟಾರ್ ಅಂಬಾಸಿಡರ್ ಆಗಿ ಅಮಿತಾಬ್ ಬಚ್ಚನ್ ಅವರನ್ನು ಕರೆಸಬೇಕೆಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಬರುವ ಕಂಪನಿಗಳ ಅಧಿಕಾರಿಗಳ ಜತೆ ಮುಕ್ತವಾಗಿ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಹೂಡಿಕೆಯಲ್ಲಿ ಕರ್ನಾಟಕ ಮೊದಲು: ದೇಶ ಮತ್ತು ರಾಜ್ಯಕ್ಕೆ ಹೆಚ್ಚಿನ ಆದಾಯ ತಂದುಕೊಡುವಂತಹದ್ದು ಕೈಗಾರಿಕಾ ಇಲಾಖೆ. ವಿದೇಶಿಗರಿಗೆ ಇಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದರಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಮುಂದಿನ 25 ವರ್ಷದಲ್ಲಿ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಶೇ.100ರಷ್ಟು ನಿಲ್ಲಿಸಿ, ಶೇ.100ರಷ್ಟು ರಫ್ತು ಮಾಡುವ ಶಕ್ತಿ ನಮ್ಮ ದೇಶಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಉದ್ಯಮಿಗಳ ಜತೆಗೆ ಸರ್ಕಾರ ಚರ್ಚೆ ನಡೆಸಿ ಅವರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮಾತನಾಡಿ, 2021-22ರಲ್ಲಿ 400 ಬಿಲಿಯನ್ ರಫ್ತು ವ್ಯವಹಾರದ ಗುರಿ ಹೊಂದಿದ್ದೆವು. ಆದರೆ, ಇದರ ಪ್ರಮಾಣ 420ಕ್ಕೆ ಹೆಚ್ಚಳವಾಗಿತ್ತು. 2023ರಲ್ಲಿ 500 ಬಿಲಿಯನ್‌ಗೂ ಅಧಿಕ ರಫ್ತು ವ್ಯವಹಾರ ನಡೆಯುವ ಸಾಧ್ಯತೆಗಳಿವೆ.
ಸಾಫ್ಟ್ವೇರ್ ಮತ್ತು ಸರ್ವೀಸ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಭಾರತದಲ್ಲಿ ಶೇ.70 ಮೊಬೈಲ್‌ಗಳ ಉತ್ಪಾದನೆ ಆಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಡಾ.ಸಿಎಐಎಸ್ ಪ್ರಸಾದ್, ಎಫ್ಕೆಸಿಸಿಐನ ಉಮಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 65 ಅತ್ಯುತ್ತಮ ರಫ್ತುದಾರರಿಗೆ “ರಫ್ತು ಶ್ರೇಷ್ಠ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.