Advertisement

ಹೊಸ ಜಾಹೀರಾತು ನೀತಿ ಅನುಮೋದನೆಗೆ ಸಿದ್ಧ

12:25 PM Dec 19, 2018 | Team Udayavani |

ಬೆಂಗಳೂರು: ನಗರದ ವ್ಯಾಪ್ತಿಗೆ ಸಂಬಂಧಪಟ್ಟ ಹೊಸ ಜಾಹೀರಾತು ನೀತಿ ಹಾಗೂ ಬೈಲಾಗಳನ್ನು ಶುಕ್ರವಾರದೊಳಗೆ ಅಂತಿಮಗೊಳಿಸಿ, ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಬಿಬಿಎಂಪಿ ಮಂಗಳವಾರ ಹೈಕೋರ್ಟ್‌ಗೆ ತಿಳಿಸಿದೆ. ನಗರದಲ್ಲಿನ ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

Advertisement

ವಿಚಾರಣೆ ವೇಳೆ, ಜಾಹೀರಾತು ನೀತಿಗೆ ಸಂಬಂಧಿಸಿದ ಕರಡು ಬೈಲಾಗಳನ್ನು ಶೀಘ್ರ ಅಂತಿಮಗೊಳಿಸಿದರೆ, ಜಾಹೀರಾತುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು, ಕರಡು ಬೈಲಾಗಳನ್ನು ಅಂತಿಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲವೊಂದು ಬದಲಾವಣೆಗಳನ್ನು ಮಾಡಿ ಶುಕ್ರವಾರದೊಳಗೆ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಅನಧಿಕೃತ ಜಾಹೀರಾತು ಫ‌ಲಕಗಳನ್ನು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಕೆಲ ಜಾಹೀರಾತು ಕಂಪನಿಗಳು ಕಕ್ಷಿಗಾರರನ್ನಾಗಿ ಪರಿಗಣಿಸುವುದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಕ್ಷೇಪ ವ್ಯಕ್ತಪಡಿಸಿತು. ಅಡ್ವೋಕೇಟ್‌ ಜನರಲ್‌ ಅವರು ವಾದಿಸಿ, ಈ ಪ್ರಕರಣದಲ್ಲಿ ಜಾಹೀರಾತು ಕಂಪನಿಗಳು ಕಕ್ಷಿಗಾರರಲ್ಲ. ಏಕೆಂದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಮಾಡಿರುವ ಮನವಿಗಳಿಂದ ಜಾಹೀರಾತು ಕಂಪನಿಗಳು ಸಮಸ್ಯೆ ಎದುರಿಸುತ್ತಿರುವವರಲ್ಲ. ಆದ್ದರಿಂದ ಅವರನ್ನು ಕಕ್ಷಿಗಾರರನ್ನಾಗಿ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. 

ಅದೇ ರೀತಿ ಬಿಬಿಎಂಪಿ ಪರ ವಕೀಲರು ವಾದಿಸಿ ನಗರದಲ್ಲಿ ಅನಧಿಕೃತ ಹಾಗೂ ಕಾನೂನು ಬಾಹಿರ ಜಾಹೀರಾತು ಫ‌ಲಕಗಳನ್ನು ಮಾತ್ರವೇ ತೆರವುಗೊಳಿಸಿದ್ದೇವೆ. ನಗರದಲ್ಲಿ ಜಾಹೀರಾತು ಅಳವಡಿಕೆಗೆ ನಿಷೇಧ ಹೇರಿದ್ದೇವೆ ಹೊರತು ಜಾಹೀರಾತು ಸಂಸ್ಥೆಗಳಿಗೆ ನಿರ್ಬಂಧ ಹೇರಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಯಾವುದೇ ಜಾಹೀರಾತು ಗ್ರಾಹಕರು ಕೋರ್ಟ್‌ಗೆ ಬಂದಿಲ್ಲ. ಬೈಲಾಗಳು ಅಂತಿಮಗೊಳಿಸಿದ ನಂತರ ಜಾಹೀರಾತು ಕಂಪನಿಗಳು ಮತ್ತೆ ಅವಕಾಶ ಪಡೆಯಲಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ನಗರದ ಸೌಂದರ್ಯ ಕಾಪಾಡಬೇಕಿದೆ.

ಯಾರೂ ಸಹ ನಗರವನ್ನು ವಿರೋಪಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ. ಅನಧಿಕೃತ ಜಾಹೀರಾತು ಫ‌ಲಕಗಳನ್ನು ತಡೆಯಲು ಬಿಬಿಎಂಪಿಗೆ ಶಾಸನಬದ್ಧ ಹಕ್ಕಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾಹೀರಾತು ಕಂಪನಿಗಳನ್ನು ಈ ಪ್ರಕರಣದಲ್ಲಿ ಕಕ್ಷಿಗಾರರನ್ನಾಗಿ ಮಾಡಿದರೆ ಆಗುವ-ಸಾಧಕ ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಜಾಹೀರಾತು ಕಂಪನಿಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ (ಡಿ.19) ಮುಂದೂಡಿತು.

Advertisement

ಬಿಬಿಎಂಪಿ ನಿರ್ಣಯ ರದ್ದುಪಡಿಸಿ
ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದ 2006ರ ಬೈಲಾ ಗೆ ತದ್ವಿರುದ್ಧವಾಗಿರುವ “ಒಂದು ವರ್ಷದವರೆಗೆ ನಗರದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ’ ಬಿಬಿಎಂಪಿ ಕೌನ್ಸಿಲ್‌ ಸಭೆ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಜಾಹೀರಾತು ಕಂಪನಿಗಳು ಮಂಗಳವಾರ ಹೈಕೋರ್ಟ್‌ಗೆ ಮನವಿ ಮಾಡಿದವು.

ನಗರದ ವ್ಯಾಪ್ತಿಯಲ್ಲಿ ಒಂದು ವರ್ಷದವರೆಗೆ ಎಲ್ಲ ಬಗೆಯ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ 2018ರ ಆ.6ರಂದು ಬಿಬಿಎಂಪಿ ಕೌನ್ಸಿಲ್‌ ಸಭೆ ತೆಗೆದುಕೊಂಡಿರುವ ನಿರ್ಣಯ ರದ್ದುಗೊಳಿಸಬೇಕು ಎಂದು ಕೋರಿ ಜಾಹೀರಾತು ಕಂಪನಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎಲ್ಲ ಅರ್ಜಿದಾರರು ಕೆಎಂಸಿ ಕಾಯ್ದೆ ಸೆಕ್ಷನ್‌ 134 ಮತ್ತು 135ರ ಪ್ರಕಾರ 2006 ಬೈಲಾ ಅನ್ವಯ ಅಧಿಕೃತ ಹಾಗೂ ಕಾನೂನು ಬದ್ಧ ಪರವಾನಿಗೆ ಪಡೆದ ಜಾಹೀರಾತು ಸಂಸ್ಥೆಗಳನ್ನು ಹೊಂದಿದ್ದಾರೆ.

ಬಿಬಿಎಂಪಿ ಕೌನ್ಸಿಲ್‌ ನಿರ್ಣಯ 2006ರ ಬೈಲಾಗೆ ತದ್ವಿರುದ್ಧವಾಗಿದೆ. ಈ ರೀತಿ ಬಿಬಿಎಂಪಿಯು ತನ್ನದೇ ಬೈಲಾಗೆ ತದ್ವಿರುದ್ಧವಾದಂತಹ ನಿರ್ಣಯ ತೆಗೆದುಕೊಂಡು ಅದನ್ನು ನಮ್ಮ ಮೇಲೆ ಹೇರಿದೆ. ಆದ್ದರಿಂದ ಈ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಕೋರಿದರು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಡಿ.19) ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next