Advertisement

ಗೌಡರಿಗೆ ತಲೆಬಿಸಿ ತಂದ ಪ್ರಜ್ವಲ್‌, ಅನಿತಾ ಸ್ಪರ್ಧೆ ಆಸೆ

10:46 AM Apr 08, 2017 | Team Udayavani |

ಬೆಂಗಳೂರು:ಮಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುವ ಛಲ ತೊಟ್ಟಿರುವ ಜೆಡಿಎಸ್‌ಗೆ ಸ್ಪರ್ಧೆ ವಿಚಾರದಲ್ಲಿ ಎಚ್‌.ಡಿ. ದೇವೇಗೌಡರ ಕುಟುಂಬದೊಳಗಿನ ಗೊಂದಲ ನಿವಾರಿಸಿಕೊಳ್ಳುವುದೇ ತಲೆನೋವಾಗಿ ಪರಿಣಮಿಸಿದೆ.

Advertisement

ವಿಧಾನಸಭೆ ಚುನಾವಣೆಗೆ ನಮ್ಮ ಕುಟುಂಬದಿಂದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಇಬ್ಬರು ಮಾತ್ರ ಸ್ಪರ್ಧೆ ಎಂದು ಖುದ್ದು ದೇವೇಗೌಡರು ಪದೇ ಪದೇ ಹೇಳಿದ್ದರೂ ಅತ್ತ ಹುಣಸೂರಿನಲ್ಲಿ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌, ಇತ್ತ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಗುಸು ಗುಸು ನಿಂತಿಲ್ಲ.

ಈ ಮುಂಚೆ ಹಾಸನದ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದ ಪ್ರಜ್ವಲ್‌ ರೇವಣ್ಣ ಇದ್ದಕ್ಕಿದ್ದಂತೆ ಮೈಸೂರಿನ ಹುಣಸೂರಿನತ್ತ ಕಣ್ಣು ಹಾಕಿ ಕಳೆದೊಂದು ತಿಂಗಳಿನಿಂದ ಕ್ಷೇತ್ರದೆಲ್ಲೆಡೆ ಓಡಾಟ ಪ್ರಾರಂಭಿಸಿ ಸ್ಪರ್ಧೆ ಮಾಡಿಯೇ ಸಿದ್ಧ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಮೈಸೂರಿನ ಇಬ್ಬರು ಶಾಸಕರು ಹಾಗೂ ಓರ್ವ ವಿಧಾನಪರಿಷತ್‌ ಸದಸ್ಯರು ಪರೋಕ್ಷವಾಗಿ ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ಒತ್ತಾಸೆಯಾಗಿ ನಿಂತಿದ್ದು, ನೀವು ಬಂದು ನಿಲ್ಲುವುದಾದರೆ ಅಡ್ಡಿಯಿಲ್ಲ. ನಾವೇ ಪ್ರಚಾರಕ್ಕೆ ಬರ್ತೇವೆ ಎಂಬ ಭರವಸೆಯೂ ಕೊಟ್ಟಿದ್ದಾರೆ. ಇದು ಪ್ರಜ್ವಲ್‌ ಸ್ಪರ್ಧೆ ಆಸೆ ಚಿಗುರೊಡೆಯಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳಿನಿಂದ ಹುಣಸೂರು ಕ್ಷೇತ್ರದಲ್ಲಿ ಪಕ್ಷ ಬಲವರ್ದನೆ ಹೆಸರಿನಲ್ಲಿ ಓಡಾಟ ನಡೆಸುತ್ತಿರುವ ಪ್ರಜ್ವಲ್‌ ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಗಮನ ಸೆಳೆದು,ಆ ಭಾಗದ ಪ್ರಮುಖ ನಾಯಕರಾದ ಲಿಂಗರಾಜು ಮಲ್ಯಾಡಿ, ಬಸವರಾಜು, ವರದರಾಜು, ಪ್ರಭಾಕರ್‌, ಚಿಕ್ಕಬೀಚೇನಹಳ್ಳಿ ರಾಚಯ್ಯ,ಭೀಮರಾಜು ಅವರ ಜತೆಯಲ್ಲಿ ಗ್ರಾಮ ಪ್ರವಾಸ ಕೈಗೊಂಡು ಒಂದು ರೀತಿಯಲ್ಲಿ  ಈಗಿಂದಲೇ ಪ್ರಚಾರವನ್ನೂ ಪ್ರಾರಂಭಿಸಿಬಿಟ್ಟಿದ್ದಾರೆ.

Advertisement

ಹುಣಸೂರು ಕ್ಷೇತ್ರದ ಮೇಲೆ ಮಾಜಿ ಸಚಿವ ಜಿ.ಟಿ.ದೇವೇಗೌಡರು ಕಣ್ಣಿಟ್ಟಿದ್ದು ತಮ್ಮ ಪತ್ನಿ ಅಥವಾ ಪುತ್ರನನ್ನು ಅಲ್ಲಿಂದ ಕಣಕ್ಕಿಳಿಸಲು ತಯಾರಿ ನಡೆಸಿದ್ದರು. ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಹುಣಸೂರಿನಲ್ಲಿ ತಮ್ಮ ಕುಟುಂಬದ ಸದಸ್ಯರೇ ಸ್ಪರ್ಧಿಸಬೇಕು ಎಂಬದು  ಅವರ ಬಯಕೆ.  ಈ ಬಗ್ಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಜತೆ ಸಾಕಷ್ಟು ಬಾರಿ ಚರ್ಚೆ ನಡೆಸಿದ್ದರು. ಆದರೆ, ಇದೀಗ ಪ್ರಜ್ವಲ್‌ ರೇವಣ್ಣ  ಕ್ಷೇತ್ರದಲ್ಲಿ ಓಡಾಡುತ್ತಿರುವುದರಿಂದ ತಲೆಬಿಸಿ ಮಾಡಿಕೊಂಡಿದ್ದಾರೆ.ಪ್ರಜ್ವಲ್‌ ಓಟಕ್ಕೆ ಬ್ರೇಕ್‌ ಹಾಕುವಂತೆ ದೇವೇಗೌಡರ ಮೊರೆ ಹೋಗಿದ್ದಾರೆ.

ಅನಿತಾಗೆ ಒತ್ತಡ
ಮತ್ತೂಂದೆಡೆ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಆನಿತಾ ಕುಮಾರಸ್ವಾಮಿಯವರು  ಈ ಬಾರಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು ಎಂಬ ಒತ್ತಡಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಕುಮಾರಸ್ವಾಮಿ-ಅನಿತಾಕುಮಾರಸ್ವಾಮಿ ಕ್ಷೇತ್ರಕ್ಕೆ ಹೋದಾಗಲೂ ಕಾರ್ಯಕರ್ತರು ಮತ್ತು ಮುಖಂಡರು ಸ್ಪರ್ಧೆಗೆ ಒಪ್ಪುವಂತೆ  ಒತ್ತಡ ಹಾಕಿದ್ದಾರೆ. ಅನಿತಾಕುಮಾರಸ್ವಾಮಿಯವರು ಸ್ಪರ್ಧೆ ವಿಚಾರದಲ್ಲಿ ನನ್ನದೇನೂ ಇಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ತೀರ್ಮಾನಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಒಂದೊಮ್ಮೆ ಆನಿತಾಕುಮಾರಸ್ವಾಮಿಯವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದರೆ ಆಗ ಪ್ರಜ್ವಲ್‌ ರೇವಣ್ಣ ಅಥವಾ ಭವಾನಿ ರೇವಣ್ಣ ಅವರಿಗೆ ಸ್ಪರ್ಧೆಗೆ ಅನುಮತಿ ನೀಡಬೇಕಾಗುತ್ತದೆ. ಆಗ, ಒಂದೇ ಕುಟುಂಬದಿಂದ ನಾಲ್ವರು ಸ್ಪರ್ಧೆ ಮಾಡಿದಂತಾಗಿ ರಾಜಕೀಯ ವಿರೋಧಿಗಳು ಟೀಕೆ ಮಾಡಲು “ಅಸ್ತ್ರ’ ಕೊಟ್ಟಂತಾಗುತ್ತದೆ ಎಂಬ ಆತಂಕ ದೇವೇಗೌಡರದು.

ಹೀಗಾಗಿ, ಇದೀಗ ಸ್ಪರ್ಧೆ ವಿಚಾರದ ಚೆಂಡು ದೊಡ್ಡಗೌಡರ ಅಂಗಳಕ್ಕೆ ತಲುಪಿದ್ದು, ಇವರೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ. ಪ್ರಜ್ವಲ್‌ ರೇವಣ್ಣ ಅಥವಾ ಆನಿತಾಕುಮಾರಸ್ವಾಮಿ ದೇವೇಗೌಡರು ಹಾಕಿದ ಗೆರೆ ದಾಟುವುದಿಲ್ಲ. ಹೀಗಾಗಿ, ಅವರ ಮಧ್ಯಪ್ರವೇಶದಿಂದ ಈ ಸಮಸ್ಯೆ ಅಥವಾ ಗೊಂದಲ 
ನಿವಾರಣೆಯಾಗಬೇಕಿದೆ.

ಒತ್ತಡ ಇರುವುದು ನಿಜ
ಹುಣಸೂರಿನಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಇರುವುದು ನಿಜ. ಆದರೆ, ನನ್ನ ಸ್ಪರ್ಧೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಎಚ್‌.ಡಿ.ಕುಮಾರಸ್ವಾಮಿಯವರು ತೀರ್ಮಾನಿಸುತ್ತಾರೆ. ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷ ಸಂಘಟಿಸುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಸ್ಪರ್ಧೆ ಮಾಡಬೇಕು ಎಂಬ ಆಸೆ ಇರುವುದಂತೂ ನಿಜ.

-ಪ್ರಜ್ವಲ್‌ ರೇವಣ್ಣ

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next