Advertisement

ಉದಯವಾಣಿ ಸಂದರ್ಶನ: ಅಭಿವೃದ್ಧಿಗೆ ಎಂದೂ ಹಣ ಕಡಿಮೆ ಮಾಡಿಲ್ಲ

01:08 AM Nov 05, 2020 | mahesh |

ಮಂಗಳೂರು: ಮಂಗಳೂರು ನಗರ ಸಹಿತ ಕರಾವಳಿಯ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಆರ್ಥಿಕ ಸಂಕಷ್ಟವಿದ್ದರೂ ಅಭಿವೃದ್ಧಿಗೆ ಹಣ ಕಡಿಮೆ ಮಾಡಿಲ್ಲ ಎಂದು ಹೇಳಿದ್ದಾರೆ. ಗುರುವಾರ ಆರಂಭವಾಗುವ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬುಧವಾರ ಮಂಗಳೂರಿಗೆ ಆಗಮಿಸಿದ ಸಿಎಂ, ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಕರಾವಳಿಯ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.

Advertisement

 ಕರಾವಳಿ ಭಾಗದಲ್ಲಿ ಬಹಳ ವರ್ಷಗಳಿಂದ ಕಾಡುತ್ತಿರುವ ಕುಮ್ಕಿ, ಅಕ್ರಮ-ಸಕ್ರಮ, ಮೂಲಗೇಣಿ ಸಮಸ್ಯೆಗೆ ಏನು ಪರಿಹಾರ?
ಕರಾವಳಿ ಸಹಿತ ರಾಜ್ಯದ ಬಹಳಷ್ಟು ಕಡೆಗಳಲ್ಲಿ ರೈತರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕರಾವಳಿ ಭಾಗದ ಕುಮ್ಕಿ, ಅಕ್ರಮ-ಸಕ್ರಮ ಮತ್ತು ಮೂಲಗೇಣಿ ಜಮೀನು ಸಮಸ್ಯೆಗೂ ಸರಕಾರ ಸ್ಪಂದಿಸಲು ಪ್ರಯತ್ನಿಸಿದೆ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿರುವ ಜನರು ಆತಂಕಗೊಳ್ಳಬೇಕಿಲ್ಲ. ಇಂಥ ಜಮೀನುಗಳಲ್ಲಿ ಇರುವ ರೈತರನ್ನು ಎಬ್ಬಿಸುವ ಪ್ರಶ್ನೆಯಿಲ್ಲ. ಹಕ್ಕುಪತ್ರ ನೀಡಿದರೆ ಅವರಿಗೆ ಬ್ಯಾಂಕ್‌ ಸಾಲ ಪಡೆದು ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಿ ರೈತರಿಗೆ ಅನುಕೂಲವಾಗುವ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವೆ.

ದ್ವಿತೀಯ ಹಂತದ ನಗರವಾಗಿ ಬೆಳೆಯುತ್ತಿರುವ ಮಂಗಳೂರು ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ವಿಶೇಷ ಯೋಜನೆ ರೂಪಿಸಿದ್ದೀರಾ?
ಮಂಗಳೂರು ನಗರವು ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದೆ. ಮಹಾನಗರ ಪಾಲಿಕೆಗಳಿಗೆ ಸುಮಾರು 150 ಕೋಟಿ ರೂ.ಗಳವರೆಗೆ ಖರ್ಚು ಮಾಡುವುದಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ. ಪ್ರತೀ ಪಾಲಿಕೆಗೂ 50 ಕೋಟಿ ರೂ. ಸೀಮಿತವಾಗಿ ಖರ್ಚು ಮಾಡಲು ಹೇಳಲಾಗಿತ್ತು. ಒಂದುವೇಳೆ, 150 ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸುವುದಾದರೆ ಅಷ್ಟು ಹಣ ವಿನಿಯೋಗಿಸಲು ಸೂಚಿಸಲಾಗಿದೆ. ಈಗ ಶಾಸಕರಿಗೆ 2ನೇ ಕಂತಿನಲ್ಲಿ ತಲಾ 50 ಲಕ್ಷ ರೂ.ಗಳಂತೆ ಒಟ್ಟು 350 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸರಕಾರದಲ್ಲಿ ಹಣಕಾಸಿನ ಕೊರತೆ ಇದ್ದರೂ ಅಭಿವೃದ್ಧಿಗೆ ಕಡಿಮೆ ಮಾಡಿಲ್ಲ.

ಕೊರೊನಾ ಸಂಕಷ್ಟದಿಂದಾಗಿ ಬಹಳಷ್ಟು ಮಂದಿ, ಅದರಲ್ಲಿಯೂ ಯುವ ಸಮುದಾಯ ಕೃಷಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸರಕಾರ ಅದಕ್ಕೆ ಪೂರಕವಾಗಿ ಉತ್ತೇಜನಕಾರಿ ಯೋಜನೆ ರೂಪಿಸುವುದೇ?
ನಮ್ಮ ಸರಕಾರ ರೈತರ ಪರವಾಗಿದೆ. ನಾನೊಬ್ಬ ರೈತನ ಮಗನಾಗಿ ಕೃಷಿಗೆ ಉತ್ತೇಜನ ನೀಡಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇನೆ. ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಅದೇ ರೀತಿ ಕರಾವಳಿ ಭಾಗದಲ್ಲಿ ಕೃಷಿಗೆ ಪ್ರೋತ್ಸಾಹ ನೀಡಲು ಎಲ್ಲ ಕಾರ್ಯಕ್ರಮ ರೂಪಿಸಲಾಗುವುದು. ಯುವ ಸಮುದಾಯವನ್ನು ಕೃಷಿ ಕಡೆಗೆ ಮತ್ತಷ್ಟು ಆಕರ್ಷಿಸಲು ವಿಶೇಷ ಯೋಜನೆ ರೂಪಿಸಲಾಗುವುದು.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸರಕಾರ ಯಾವ ರೀತಿ ಉತ್ತೇಜನ ನೀಡಬಹುದು?
ಪ್ರವಾಸೋದ್ಯಮಕ್ಕೆ ಕರಾವಳಿ ಭಾಗದಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಮುಂದಿನ ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ.

Advertisement

ಕೊರೊನಾ ಅನಂತರ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಮತ್ತೂಮ್ಮೆ ವಿಶೇಷ ಆರ್ಥಿಕ ನೆರವು ನೀಡುತ್ತೀರಾ?
ನಮ್ಮ ಸರಕಾರವು ಕಳೆದ ಬಜೆಟ್‌ನಲ್ಲಿ ಏನೆಲ್ಲ ಘೋಷಣೆಗಳನ್ನು ಮಾಡಿತ್ತೋ ಅವೆಲ್ಲವನ್ನೂ ಅನುಷ್ಠಾನಗೊಳಿಸಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಸರಕಾರಿ ನೌಕರರಿಗೆ ಸಂಬಳವನ್ನೂ ನೀಡದಿರುವ ಪರಿಸ್ಥಿತಿ ಇದೆ. ಆದರೆ ನಮ್ಮ ರಾಜ್ಯದಲ್ಲಿ ಈ ಎಲ್ಲ ಆರ್ಥಿಕ ಸವಾಲುಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಕರಾವಳಿಗರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡುವಂತೆ ಕರಾವಳಿ ಭಾಗದ ಹಲವು ಶಾಸಕರು, ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಹಾಗಾಗಿ ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಮಾನ್ಯತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ತೆಗೆದುಕೊಳ್ಳುವೆ ಎಂದರು.

  ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next