Advertisement
ಬಿಎಸ್ಸೆನ್ನೆಲ್ ಸಂಚಾರಿ ದೂರವಾಣಿಗೆ ಸಿಮ್ ಖರೀದಿಗೆ ಕಿ.ಮೀ.ಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು. ಸಿಮ್ ನೀಡಬೇಕೆಂದರೆ ಸಾವಿರ ರೂ. ಕರೆನ್ಸಿ ಖರೀದಿಸುವಂತೆ ಸಂಸ್ಥೆಯಲ್ಲಿ ಬೇಡಿಕೆ ಇಡುತ್ತಿದ್ದರು. ಇಷ್ಟಾದರೂ ಗ್ರಾಹಕರು ತಾವು ಬಿಎಸ್ಸೆನ್ನೆಲ್ ಸಿಮ್ ಬಳಸಲೇಬೇಕೆಂಬ ಹಠಕ್ಕೆ ಬಿದ್ದು ಖರೀದಿಗೆ ನಾ ಮುಂದು ತಾ ಮುಂದು ಎಂದು ವಾರಗಟ್ಟಲೆ ಕಾಯ್ದು ಸಿಮ್ ಖರೀದಿಸುತ್ತಿದ್ದರು.
Related Articles
Advertisement
ಹಲವು ತಿಂಗಳಿನಿಂದ ನಾಟ್ ರೀಚೆಬಲ್: ಹಲವು ತಿಂಗಳಿನಿಂದ ಬಿಎಸ್ಸೆನ್ನೆಲ್ ನಾಟ್ ರೀಚೆಬಲ್ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದೆ. ಪಟ್ಟಣದಲ್ಲಿ ಕಾಲ್ ಕನೆಕ್ಟ್ ಆದರೂ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಬಿಎಸ್ಸೆನ್ನೆಲ್ ನಂಬರ್‌ಗೆ ಕರೆ ಮಾಡಿದಾಗ ಕೆಲವು ಸಮಯದಲ್ಲಿ ನಾಟ್ ರೀಚೆಬಲ್ ಎನ್ನುತ್ತದೆ. ಕಾಲ್ ಡ್ರಾಪ್‌ನಿಂದ ಹಲವು ಮಂದಿ ಗ್ರಾಹಕರು ಖಾಸಗಿ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದಾರೆ.
ಸಂಸ್ಥೆ ಬಂದ್ ಆತಂಕ: ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸುಸೂತ್ರವಾಗಿ ದೊರೆಯುತ್ತಿದ್ದ ಕಾರಣ ತಾಲೂಕಿನಲ್ಲಿ ಹೆಚ್ಚು ಮಂದಿ ಬಿಎಸ್ಸೆನ್ನೆಲ್ ಸಿಮ್ ಹೊಂದಿದ್ದರು. ಆದರೆ ಹಲವು ದಿನಗಳಿಂದ ಗ್ರಾಮೀಣ ಭಾಗದ ಬಹುತೇಕ ಕಡೆಯಲ್ಲಿ ಸಂಸ್ಥೆಯ ಟವರ್ ಸ್ತಬ್ಧವಾಗಿದೆ ಈ ಬಗ್ಗೆ ಯಾರಲ್ಲಿ ಕೇಳಬೇಕು? ಯಾರು ಇದಕ್ಕೆ ಹೊಣೆಬಗಾರರು ಎಂಬ ಪ್ರಶ್ನೆಗೆ ಉತ್ತರ ಕೊಡುವವರೇ ಇಲ್ಲದಂತಾಗಿರುವುದಲ್ಲದೆ. ಉಪ ಕಚೇರಿಗಳು ಬಂದ್ ಆಗಿವೆ. ಸಂಬಳ ಇಲ್ಲದೇ ಸೆಕ್ಯುರಿಟಿ ಗಾರ್ಡ್‌ಗಳು ಕಚೇರಿಗೆ ಬಂದು ಬೀಗ ತೆರೆಯುತ್ತಿಲ್ಲ. ಇದನ್ನೆಲ್ಲ ಗಮನಿಸಿದರೆ ಸಂಸ್ಥೆ ಬಂದ್ ಆಗುತ್ತದೆ ಎಂಬ ಆತಂಕ ಗ್ರಾಮೀಣ ಪ್ರದೇಶದ ಗ್ರಾಹಕರಲ್ಲಿ ಮನೆ ಮಾಡಿದೆ.
ಸರ್ಕಾರಿ ಕಚೇರಿಗಳು ಜನರಿಂದ ದೂರ: ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬಿಎಸ್ಸೆನ್ನೆಲ್ ಸಿಮ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ವ್ಯವಸ್ಥೆ ಮಾಡಿದೆ. ನೆಟ್‌ವರ್ಕ್ ಇಲ್ಲದ ಕಾರಣ ಯಾವ ಅಧಿಕಾರಿಗೆ ಕರೆ ಮಾಡಿದಾಗಲೂ ಕರೆ ಸಿಗುತ್ತಿಲ್ಲ. ಸ್ಥಿರ ದೂರವಾಣಿ ಚಾಲನೆಯಲ್ಲಿಲ್ಲ ಎಂದು ಬರುತ್ತಿದೆ. ಇದರಿಂದ ಗ್ರಾಮ ಪಂಚಾಯಿತಿ ಕಚೇರಿ. ತಾಲೂಕು ಪಂಚಾಯಿತಿ ಕಚೇರಿ, ತಾಲೂಕು ಕಚೇರಿ, ಸೆಸ್ಕ್, ಪೊಲೀಸ್ ಠಾಣೆ, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರಗಳು, ಸರ್ಕಾರಿ ಆಸ್ಪತ್ರೆ ಹೀಗೆ ಸರ್ಕಾರಿ ಅಧೀನದಲ್ಲಿನ ಯಾವುದೇ ಕಚೇರಿಗೆ ಕರೆಗಳು ಹೋಗುತ್ತಿಲ್ಲ. ಇದರಿಂದ ಸಾರ್ವಜನಿಕರು ದೂರವಾಣಿ ಮೂಲಕ ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ: ಸರ್ಕಾರಿ ಕಚೇರಿಗಳಲ್ಲಿ ಬಿಎಸ್ಸೆನ್ನೆಲ್ ಸ್ಥಿರ ಹಾಗೂ ಸಂಚಾರಿ ದೂರವಾಣಿ ಸಂಪರ್ಕ ಸಕಾಲಕ್ಕೆ ದೊರೆಯದಿರುವುದರಿಂದ ತಾಲೂಕು ಆಡಳಿತ ಎಲ್ಲಾ ಅಧಿಕಾರಿಗಳಿಗೆ ನೆಟ್‌ವರ್ಕ್ ಇರುವ ಸಿಮ್ ಅಥವಾ ಸ್ಥಿರ ದೂರವಾಣಿ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದರೆ ಜನರಿಗೆ ಸಂಕಷ್ಟ ಎದುರಾಗಲಿದ್ದು, ಯಾವುದೇ ಮಾಹಿತಿ ತಿಳಿದುಕೊಳ್ಳಬೇಕಾದರೆ ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ.
ಸಿಬ್ಬಂದಿ ಕೊರತೆಯಿಂದ ಸಮಸ್ಯೆ: ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಜೆಟಿಒ (ಜೂನಿಯರ್ ಟೆಲಿಫೋನ್ ಎಂಜಿನಿಯರ್) ನಾಗೇಶ್ ಚನ್ನರಾಯ ಪಟ್ಟಣದಲ್ಲಿ 800 ಸ್ಥಿರ ದೂರವಾಣಿ ಹಾಗೂ ಇಂಟರ್‌ನೆಟ್ ಸಂಪರ್ಕ ಪಡೆದಿದ್ದಾರೆ. ತಾಲೂಕಾದ್ಯಂತ 14 ಬಿಎಸ್ಸೆನ್ನೆಲ್ ಉಪ ಕೇಂದ್ರಗಳಿದ್ದು, ಇದರ ನಿರ್ವಹಣೆಗೆ 15ರಿಂದ 20 ಜನ ಸಿಬ್ಬಂದಿ ಅಗತ್ಯವಿದೆ ಎಂದರು. ಈಗ ಕಾರ್ಯನಿರ್ವಹಿಸುತ್ತಿರುವ 14 ಜನರ ಪೈಕಿ 9 ಜನರು ಸ್ವಯಂ ನಿವೃತ್ತಿ ಪಡೆದಿದ್ದು, 5 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡುವ ಮೂಲಕ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಇದೆ ಇದರಿಂದ ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಜನರಿಗೆ ತೊಂದರೆ ಆಗುವುದನ್ನು ಸರಿಪಡಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂಬ ನೆಲೆಯಲ್ಲಿ ನಾವು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಿದೆ.-ಇಂದಿರಾ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಹದಿನೈದು ವರ್ಷದ ಹಿಂದೆ ಬಿಎಸ್ಸೆನ್ನೆಲ್ ಸಿಮ್ ಪಡೆದಿದ್ದು ಇಂದಿಗೂ ಅದೇ ನೆಟ್‌ವರ್ಕ್‌ನಲ್ಲಿ ಇದ್ದೇನೆ. ಸರ್ಕಾರದಿಂದ ಹಲವು ಸವಲತ್ತು ಪಡೆಯುವ ನಾವು, ಖಾಸಗಿಗೆ ಹಣ ನೀಡುವುದನ್ನು ಒಪ್ಪದೇ ಬಿಎಸ್ಸೆನ್ನೆಲ್ ಸಿಮ್ ಉಪಯೋಗಿಸುತ್ತಿದ್ದೇನೆ ನೆಟ್‌ವರ್ಕ್ ಸಮಸ್ಯೆ ಇದೆ ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಲಿ.
-ಲೋಕಮಾತೆ, ಅಣ್ಣೇನಹಳ್ಳಿ ಗ್ರಾಮ * ಶಾಂ ಸುಂದರ್ ಅಣ್ಣೇನಹಳ್ಳಿ