ಕುಂದಾಪುರ/ಸಿದ್ದಾಪುರ: ಸರಕಾರಿ ಶಾಲೆ, ಕಚೇರಿ, ಆಸ್ಪತ್ರೆಗಳ ಭೂಮಿ ಸರ್ವೇ ಕುರಿತು ವಾರದೊಳಗೆ ತಹಶೀಲ್ದಾರ್ ಗಡಿ ಗುರುತಿಸಲಿದ್ದು, ಹಳ್ಳಿಹೊಳೆ ಗ್ರಾಮದ ನೆಟ್‌ವರ್ಕ್ ಸಮಸ್ಯೆಗೆ ಸಂಬಂಧಿಸಿ ವಾರದೊಳಗೆ ಖಾಸಗಿ ಕಂಪೆನಿಗಳೊಂದಿಗೆ ವಿಶೇಷ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.
ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ನಡೆದ “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಡೀಮ್ಡ್ ಫಾರೆಸ್ಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪರಿಸರ ಸೂಕ್ಷ್ಮ ವಲಯದಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ, ಬಾಕಿ ಕಡೆ ನಿರ್ಬಂಧವನ್ನು ಈಗಾಗಲೇ ರಾಜ್ಯ ಸರಕಾರ ತೆರವು ಮಾಡಿದೆ. ಆದರೆ ಹಳ್ಳಿಹೊಳೆ ಪರಿಸರ ಸೂಕ್ಷ್ಮ ವಲಯದಲ್ಲಿ ಸೇರುವುದರಿಂದ ಹಕ್ಕುಪತ್ರ ನೀಡಲು ಸಮಸ್ಯೆಯಿದೆ. ಬಾಕಿ ಉಳಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಡೀಮ್ಡ್ ಫಾರೆಸ್ಟ್‌ನಿಂದ ಮುಕ್ತಿ ಕೊಡಿಸಿ, ಹಕ್ಕುಪತ್ರ ಕೊಡುವ ಕಾರ್ಯ ಜಿಲ್ಲಾಧಿಕಾರಿಗಳಿಂದ ಆಗಬೇಕಿದೆ ಎಂದು ಹೇಳಿದರು.
ಸಮಸ್ಯೆಗಳ ಸುರಿಮಳೆ ಗ್ರಾಮಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ ಡಿಸಿ ಯವರಿಗೆ ಗ್ರಾಮಸ್ಥರಿಂದ ಸಮಸ್ಯೆಗಳ ಸುರಿಮಳೆಯೇ ಎದುರಾಯಿತು. 140ಕ್ಕೂ ಮಿಕ್ಕಿ ಅರ್ಜಿಗಳನ್ನು ಗ್ರಾಮಸ್ಥರು ಸಲ್ಲಿಸಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಕುಂದಾಪುರ ಎಸಿ ರಾಜು ಕೆ., ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.
ದೇವರಬಾಳಿಗೆ ಭೇಟಿ
ನಕ್ಸಲ್ ಬಾಧಿತ ದೇವರಬಾಳುವಿನ ಎಸ್‌ಸಿ ಕಾಲನಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ, ನೆಟ್‌ವರ್ಕ್, ರಸ್ತೆ ಸಮಸ್ಯೆ, ಹಕ್ಕುಪತ್ರ ಬೇಡಿಕೆ ಬಗ್ಗೆ ಅಹವಾಲು ಸ್ವೀಕರಿಸಿದರು.
ಉದಯವಾಣಿ ವರದಿ
ಹಳ್ಳಿಹೊಳೆ ಗ್ರಾಮದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು “ಉದಯವಾಣಿ’ಯು ಗ್ರಾಮಭಾರತ ಸರಣಿ, ಸುದಿನದಲ್ಲಿ ಸೆ. 16ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.