ಬದಿಯಡ್ಕ: ಕಾಸರಗೋಡು ನೆಟ್ಟಣಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ಇಳೆಗೆ ಮಳೆಗಾಗಿ ಸೀಯಾಳದಿಂದ ವಿಶೇಷ ರುದ್ರಾಭಿಷೇಕ ಮಾಡಿ ಇಪ್ಪತ್ನಾಲ್ಕು ಗಂಟೆಯೊಳಗೆ ಜಿಲ್ಲೆಯಾದ್ಯಂತ ಮಳೆಸುರಿಸಿ ತನ್ನ ಭಕ್ತರಿಗೆ ನೆಮ್ಮದಿಯನ್ನುಕರುಣಿಸಿದ ಮುಕ್ಕಣ್ಣನ ಮಹಿಮೆಗೆ ಭಕ್ತಾದಿಗಳು ಕೃತಾರ್ಥರಾದರು.
ಐತಿಹ್ಯಪೂರ್ಣವಾದ ಕ್ಷೇತ್ರ ಎಂದೇ ಖ್ಯಾತಿಯ ಶ್ರೀಕ್ಷೇತ್ರವು ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಕಾರಣಿಕ ಕ್ಷೇತ್ರ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಜಾಂಬ್ರಿ ಗುಹಾ ಪ್ರವೇಶ ಈ ಕ್ಷೇತ್ರದ ಇನ್ನೊಂದು ವಿಶೇಷತೆ. ಮಾತ್ರವಲ್ಲದೆ ಅತಿರುದ್ರ ಮಹಾಯಾಗವೂ ಇಲ್ಲಿ ಸಂಪನ್ನಗೊಂಡಿದೆ.
ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಪರಮಶಿವನ ಸನ್ನಿಧಿ. ಇಲ್ಲಿ ಸಮರ್ಪಣಾ ಭಾವದಿಂದ ಪ್ರಾರ್ಥಿಸಿ ಸೀಯಾಳಾಭಿಷೇಕ ಮಾಡಿದಲ್ಲಿ ವರುಣನ ಕೃಪೆಯಾಗುತ್ತದೆ ಎಂಬ ನಂಬಿಕೆ ಸುಳ್ಳಾಗಲಿಲ್ಲ. ಸುಡು ಬೇಸಗೆಯಲ್ಲಿ ಕೆರೆ, ಬಾವಿ ಬರಡಾಗಿ ಬೆಂದು ನೊಂದ ಜನತೆ ಒಟ್ಟಾಗಿ ಜಟಾಧಾರಿಯ ಮೊರೆ ಹೋಗಿದ್ದಾರೆ. ಭಕ್ತಿಯಿಂದ ಪ್ರಾರ್ಥಿಸಿದಾಗ ತನ್ನ ಜಡೆಯಿಂದ ಗಂಗಾ ಮಾತೆಯನ್ನು ಧರೆಗಿಳಿಸಿ ಭಕ್ತಸಮೂಹಕ್ಕೆ ತಂಪೆರೆದ ಮಹಾಲಿಂಗೇಶ್ವರ. ಯಾವುದೇ ಕಷ್ಟ ಬಂದಾಗ ಜನರು ಮೊದಲು ಶರಣಾಗುವುದು ಮಹಲಿಂಗೇಶ್ವರನಿಗೆ. ಎಲ್ಲ ಕಷ್ಟಗಳ ನೀಗಿ ಊರಿಗೆ ಸುಭೀಕ್ಷೆ ನೀಡುವ ನಂಬಿಕೆ, ಭಯ, ಭಕ್ತಿ ಭಕ್ತರಲ್ಲಿದೆ. ನೂರಾರು ಭಕ್ತರು ಅಭಿಷೇಕಕ್ಕಾಗಿ ಶ್ರೀಕ್ಷೇತ್ರಕ್ಕೆ ಸೀಯಾಳ ಸಮರ್ಪಿಸಿದರು.
ಉಬ್ಬಸ ರೋಗದಿಂದ ಮುಕ್ತರಾಗಲು ಭಕ್ತರು ಭಕ್ತಿಯಿಂದ ಬಾವಿಗೆ ಹುರಿಹಗ್ಗವನ್ನು ಸಮರ್ಪಿಸುವುದು ಇಲ್ಲಿನ ವಿಶೇಷ ಹರಕೆ. ಕೇರಳ ಹಾಗೂ ಕರ್ನಾಟಕದ ಅಸಂಖ್ಯ ಭಕ್ತರು ಹಗ್ಗ ಸಮರ್ಪಿಸಿ ರೋಗಮುಕ್ತರಾಗಿದ್ದಾರೆ. ಮಾಂಗಲ್ಯ ಭಾಗ್ಯ ಪ್ರಾಪ್ತಿಗಾಗಿ ದೇವರಿಗೆ ತುಪ್ಪ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಬಾಂಧವ್ಯ ಕೂಡಿ ಬಂದು ಮದುವೆ ಭಾಗ್ಯ ಕೈಗೂಡುತ್ತದೆ.
ರಾಮಪ್ರಸಾದ ಕೇಕುಣ್ಣಾಯ, ದೇವಸ್ಥಾನದ ಅರ್ಚಕರು.
ಭಕ್ತರ ಇಷ್ಟಾರ್ಥಗಳನ್ನು ಸಕಾಲದಲ್ಲಿ ಸಿದ್ಧಿಸುವಂತೆ ಮಾಡುವ ಮಹಾಲಿಂಗೇಶ್ವರ ಈ ಊರ ಜನರ ರಕ್ಷಕರಾಗಿದ್ದು ಭಕ್ತರ ಭಕ್ತಿಗೆ ಕರುಣೆಯ ಮಳೆ ಸುರಿಸುವ ಕರುಣಾಮಯಿ. ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಕ್ಷೇತ್ರವು ಐತಿಹ್ಯಪೂರ್ಣವಾದ ಹಿನ್ನೆಲೆಯಿರುವ ಅಪರೂಪದ ಕ್ಷೇತ್ರಗಳಲ್ಲಿ ಒಂದಾಗಿದೆ.
ನವನೀತಪ್ರಿಯ ಕೈಪಂಗಳ, ನೆಟ್ಟಣಿಗೆ, ಜ್ಯೋತಿಷ್ಯರು